ಮುಖಪುಟ /ಸುದ್ದಿ ಸಮಾಚಾರ   
      

ಕನ್ನಡ ನುಡಿ ಹಬ್ಬಕ್ಕೆ ಕ್ಷಣ ಗಣನೆ....

ವರದಿ- ಟಿ.ಎಂ.ಸತೀಶ್
ಸಂಚಾಲಕರು
, ಮಾಧ್ಯಮ ಸಮಿತಿ,
೭೭ನೇ ಅ
.ಭಾ. ಕನ್ನಡ ಸಾಹಿತ್ಯ ಸಮ್ಮೇಳನ.

kasapa logoಬೆಂಗಳೂರು, ಫೆ.- ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಕನ್ನಡ ಸಾಹಿತ್ಯಾಸಕ್ತರ ಜೊತೆಗೂಡಿ ಕನ್ನಡದ ತೇರನ್ನು ಎಳೆಯಲು ಬೆಂಗಳೂರಿನಲ್ಲಿರುವ ಸಮಸ್ತ ಕನ್ನಡಾಭಿಮಾನಿಗಳೂ ಸಜ್ಜಾಗಿದ್ದಾರೆ.  ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ನವವಧುವಿನಂತೆ ಅಲಂಕೃತಗೊಂಡಿದೆ. ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರಿನ ಬಿ.ಬಿ.ಎಂ.ಪಿ. ಕಚೇರಿ, ಜೆಸಿ ರಸ್ತೆ, ಗಾಂಧಿ ಬಜಾರ್ ವೃತ್ತದ ಸುತ್ತಮುತ್ತ ಬೃಹತ್ ಕಮಾನುಗಳು ನುಡಿ ಜಾತ್ರೆಗೆ ಬಂದಿರುವ ಕನ್ನಡಿಗರನ್ನು ಬೆಂಗಳೂರಿಗೆ ಆದರದಿಂದ ಆಹ್ವಾನಿಸುತ್ತಿವೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರು ಕೊನೆಯ ಕ್ಷಣದ ತಾಲೀಮಿನಲ್ಲಿ ತೊಡಗಿದ್ದರೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಮಿತಿ ಭವ್ಯ ಹಾಗೂ ಅದ್ದೂರಿ ಮೆರವಣಿಗೆಗೆ ಸಂಪೂರ್ಣ ಸಜ್ಜಾಗಿದೆ.

ನಾಳೆ ಬೆಳಗ್ಗೆ ಆರಂಭವಾಗಲಿರುವ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಪೂಜಾಕುಣಿತ, ವೀರಗಾಸೆ, ಕಂಸಾಳೆ, ಗಾರುಡಿಗೊಂಬೆ, ಸೋಮನಕುಣಿತ, ಯಕ್ಷಗಾನ, ಜಗ್ಗಲಗೆ, ಕೋಲಾಟ, ಭೂತವೇಷ ಕುಣಿತ, ತಮಟೆ, ದಟ್ಟಿ ಕುಣಿತ, ಕಣಿವಾದನ, ಪುರವಂತಿಕೆ, ವೇಣುನ ನೃತ್ಯ, ಜೋಗತಿ ಕುಣಿತ, ಬೇಡರ ಕುಣಿತ, ಹರಿಗೆ ಕುಣಿತ, ಚಿಲಿಪಿಲಿ ಗೊಂಬೆ, ನಾದಸ್ವರ, ಕೊಂಬುಕಾಳೆ, ಕರುಬಲು ಕುಣಿತ, ಬ್ಯಾಂಜ್ಯೋ, ಶಾನೈಮೇಳ, ಹಲಗೆ ಕುಣಿತ, ಎತ್ತು ನಗಾರಿ, ಕತ್ತಿವರಸೆ, ಹುಲಿ ಕುಣಿತ, ಕೀಲುಕುದುರೆ, ಹುಲಿವೇಷ, ನಂದಿ ಧ್ವಜ, ಕರಡಿ ಮಜ್ಜಲು, ಚಿಟ್ಟೆ ಮೇಳ, ಸುಗ್ಗಿ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಭಾಗವಹಿಸಲಿದ್ದು ಬೆಂಗಳೂರಿಗರಿಗೆ ಜಾನಪದ ಕಲಾಪ್ರಕಾರಗಳ ಪರಿಚಯ ಮಾಡಿಸಲು ಸಜ್ಜಾಗಿವೆ.

ಕೆಂಪೇಗೌಡ ಪ್ರತಿಮೆಯ ಸ್ತಬ್ಧ ಚಿತ್ರ, ೭೭ ಮಹಿಳೆಯರಿಂದ ಪೂರ್ಣಕುಂಭ, ತಾಯಿ ಭುವನೇಶ್ವರಿ ಪಲ್ಲಕ್ಕಿ ಉತ್ಸವ, ಆನೆ, ಒಂಟೆ, ಕುದುರೆಗಳೊಂದಿಗೆ ಭವ್ಯ ರಥದಲ್ಲಿ ಸಮ್ಮೇಳನಾಧ್ಯಕ್ಷರಾದ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರನ್ನು ನಾಡಪ್ರಭು ಕೆಂಪೇಗೌಡ ಮಹಾಮಂಟಪದ, ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಗೆ ಕರೆತರಲು ಸಿದ್ಧತೆಗಳು ಭರದಿಂದ ಸಾಗಿವೆ.

ನಾಲ್ವಡಿ ಕೃಷ್ಣರಾಜ ಒಡೆಯರ ೧೨ ಅಡಿ ಎತ್ತರದ ಪ್ರತಿಮೆ, ೭ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸ್ತಬ್ಧಚಿತ್ರ, ಸಾಹಿತ್ಯ ಸಮ್ಮೇಳನದ ೧೦ ಅಡಿ ಎತ್ತರದ ಲಾಂಛನ, ೭೭ ಸ್ವಯಂ ಸೇವಕರ ಪಥಸಂಚಲನ, ವಿವಿಧ ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರ, ಕನ್ನಡಕ್ಕಾಗಿ ಹೋರಾಡಿದ ವೀರರ ಚಿತ್ರಗಳ ಪ್ರದರ್ಶನ ಮೆರವಣಿಗೆಯ ವಿಶೇಷವಾಗಿರುತ್ತದೆ.

ಈ ಮಧ್ಯೆ ಬೆಂಗಳೂರಿನ ಬಿರು ಬಿಸಲನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾವಿರಾರು ಕನ್ನಡಾಭಿಮಾನಿಗಳಿಗೆ ನೀರು ಮತ್ತು ಮಜ್ಜಿಗೆ ವಿತರಿಸಲು ತೀರ್ಮಾನಿಸಲಾಗಿದ್ದು, ಇದರ ಸಿದ್ಧತೆಯೂ ನಡೆದಿದೆ.

೪೦ ವರ್ಷಗಳ ಹಿಂದಿನ ಸಮ್ಮೇಳನ

47th Sahitya sammelanaಈಗ್ಗೆ ೪೦ ವರ್ಷಗಳ ಹಿಂದೆ ಅಂದರೆ, ೨೯೭೦ರ ಡಿಸೆಂಬರ್ ೨೫ರಿಂದ ೫ ದಿನಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಹಾಗೂ  ೪೭ನೇ ಕನ್ನಡ ಸಾಹಿತ್ಯ ಸಮ್ಮೇಳನ  ಬೆಂಗಳೂರಿನ ಕೋಟೆ ಪ್ರೌಢ ಶಾಲೆಯ ಮೈದಾನದಲ್ಲಿ ನಡೆದಿತ್ತು.

ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಮತ್ತು ಬೆಳವಣಿಗೆಗೆ ಜೀವ ಎರೆದ ಪೂಜ್ಯ ಬೆಳ್ಳಾವೆ ವೆಂಕಟನಾರಣಪ್ಪ ಅವರ ಹೆಸರಿಡಲಾಗಿದ್ದ ಮಂಟದ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆಯನ್ನು  ೧೯೭೧ರ ಡಿಸೆಂಬರ್ ೩ರಂದು ಹಿರಿಯ ಸಾಹಿತಿ ವಿ. ಸೀತಾರಾಮಯ್ಯ ನೆರವೇರಿಸಿದ್ದರು.

ಈ ಅಭೂತಪೂರ್ವ ಸಮ್ಮೇಳನದ ಅಧ್ಯಕ್ಷರನ್ನಾಗಿ ಅಂದಿನ ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ದೇ.ಜವರೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.

ಈ ಸಮ್ಮೇಳನವನ್ನು ಸಿದ್ಧಗಂಗಾ ಮಠಾಧೀಶರಾದ ಶ್ರೀ. ಶ್ರೀ. ಶ್ರೀ ಶಿವಕುಮಾರ ಸ್ವಾಮೀಜಿ ಉದ್ಘಾಟನೆ ಮಾಡಿದ್ದರು. ಅಂದಿನ ಸಮ್ಮೇಳನಕ್ಕೆ ಮುನ್ನ ೧೯೭೦ರ ಡಿಸೆಂಬರ್ ೧೩ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ಜಯ್ ಭಾರತ ಜನನಿಯ ತನುಜಾತೆ ಪದ್ಯವನ್ನು ನಾಡಗೀತೆಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು.

ಅಂದು ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುವ ಧೈರ್ಯ ತೋರಿದ ಹಿರಿಮೆ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣ ಅವರಿಗೆ ಸಲ್ಲುತ್ತದೆ. ೪೦ ವರ್ಷಗಳ ಬಳಿಕ ಡಾ. ನಲ್ಲೂರು ಪ್ರಸಾದ್ ಅವರು, ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುವ ಸಾಹಸಕ್ಕೆ ಕೈಹಾಕಿದ್ದು, ಸಮ್ಮೇಳನವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.  

 ಮುಖಪುಟ /ಸುದ್ದಿ ಸಮಾಚಾರ