ಮುಖಪುಟ /ಸುದ್ದಿ ಸಮಾಚಾರ   
      

ಆಧುನಿಕ ತಂತ್ರಜ್ಞಾನದಿಂದ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿ

77 Sammelana media centerಬೆಂಗಳೂರು, ಫೆ. ೩ - ಆಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಮಾಧ್ಯಮ ಕ್ಷೇತ್ರ ತೀವ್ರ ವೇಗ ಪಡೆದುಕೊಂಡಿದೆ, ಕ್ಷಣ ಕ್ಷಣದ ಸುದ್ದಿಯನ್ನು ವಿಶ್ವದೆಲ್ಲೆಡೆ ತಲುಪಿಸುವ ಕಾರ್ಯ ನಡೆಯುತ್ತಿದ್ದು, ಇದು ಇಡೀ ವಿಶ್ವವನ್ನು ಬೆರಳ ತುದಿಯಲ್ಲಿ ನಿಲ್ಲಿಸಿದೆ ಎಂದು ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ತಿಳಿಸಿದ್ದಾರೆ.

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ  ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿರುವ ಅಂತರ್ಜಾಲ ತಾಣದಲ್ಲಿ ಹಿಂದಿನ ಸಮ್ಮೇಳನಗಳ ಅಧ್ಯಕ್ಷರ ಹೆಸರು, ಸಮ್ಮೇಳನ ನಡೆದ ವರ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಇತ್ಯಾದಿ ಉಪಯುಕ್ತ ಮಾಹಿತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಎಂದು ಹೇಳಿದರು.

ತಾವು ಪತ್ರಕರ್ತರಾಗಿದ್ದ ಕಾಲದಲ್ಲಿ ಒಂದು ಸುದ್ದಿಯನ್ನು ಕಳುಹಿಸಲು ಪಡುತ್ತಿದ್ದ ಕಷ್ಟವನ್ನು ವಿವರಿಸಿದ ಅವರು, ತಾವು ಬೇರೆ ಊರುಗಳಿಗೆ ಹೋಗಿ ವರದಿ ಮಾಡಿ, ಟೆಲಿಗ್ರಾಂ ಮೂಲಕ ಸುದ್ದಿ ಕಳುಹಿಸಿದರೆ, ಅದು ತಾವು ಬೆಂಗಳೂರಿಗೆ ಬಂದ ಬಳಿಕ ಕಚೇರಿ ತಲುಪುತ್ತಿತ್ತು. ಈ ಆಧುನಿಕ ಆವಿಷ್ಕಾರಗಳ ಲಾಭ ಪಡೆದು ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿಯನ್ನು ಸಮಸ್ತ ಕನ್ನಡಿಗರಿಗೆ ತಲುಪಿಸುವಂತೆ ಮಾಧ್ಯಮ ಮಿತ್ರರಿಗೆ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮಾಧ್ಯಮ ಕೇಂದ್ರದ ಬಗ್ಗೆ ವಿವರ ನೀಡಿ, ಇಲ್ಲಿ ೨೦ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಎಲ್ಲ ಕಂಪ್ಯೂಟರ್‌ಗಳಿಗೂ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ, ಸ್ಕ್ಯಾನರ್, ಪ್ರಿಂಟರ್ ವ್ಯವಸ್ಥೆಯ ಜೊತೆಗೆ ಫ್ಯಾಕ್ಸ್ ಕಳುಹಿಸಲು ಅನುಕೂಲವಾಗುವಂತೆ ಫ್ಯಾಕ್ಸ್ ಯಂತ್ರಗಳನ್ನು ಸಹ ಜೋಡಿಸಲಾಗಿದೆ. ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮದ ವರದಿಗಾರರಿಗೆ ತಮ್ಮ ದೃಶ್ಯದ ತುಣುಕು ಹಾಗೂ ಛಾಯಾಚಿತ್ರಗಳನ್ನು ರವಾನೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಕನ್ನಡದಲ್ಲಿ ಸುದ್ದಿಯನ್ನು ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿ ತಮ್ಮ ಪತ್ರಿಕಾ ಕಾರ್ಯಾಲಯಗಳಿಗೆ ರವಾನೆ ಮಾಡಲು ಇ-ಮೇಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಯುನಿಕೋಡ್, ಶ್ರೀಲಿಪಿ, ಬರಹ ಮತ್ತು ನುಡಿ ತಂತ್ರಾಂಶಗಳನ್ನು ಎಲ್ಲ ಕಂಪ್ಯೂಟರ್‌ಗಳಲ್ಲಿಯೂ ಅಳವಡಿಸಲಾಗಿದೆ ಎಂದರು.

ಮಾಧ್ಯಮಗೋಷ್ಠಿಗೆ ಪ್ರತ್ಯೇಕ ಕೊಠಡಿ

ಮಾಧ್ಯಮ ಕೇಂದ್ರದಲ್ಲಿಯೇ ಪ್ರತ್ಯೇಕ ಸುದ್ದಿಗೋಷ್ಠಿಯ ಕೊಠಡಿ ತೆರೆಯಲಾಗಿದ್ದು, ಈ ಕೊಠಡಿಯಲ್ಲಿ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಲ್ಲಿ ವಿಶೇಷ ಮತ್ತು ತುರ್ತು ಪತ್ರಿಕಾಗೋಷ್ಠಿಗಳನ್ನು ಕೂಡ ಆಯೋಜಿಸಲು ತೀರ್ಮಾನಿಸಲಾಗಿದೆ.

೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಕೇಂದ್ರದ ಸಮನ್ವಯವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಮಾಧ್ಯಮ ಸಮನ್ವಯಾಧಿಕಾರಿ ನಾಗರಾಜ್ ಜಮಖಂಡಿ ಹಾಗೂ ಕನ್ನಡರತ್ನಡಾಟ್ ಕಾಂ ಸಂಪಾದಕ ಟಿ.ಎಂ. ಸತೀಶ್ ಅವರು ನಿರ್ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಟಿ. ನಾಗರಾಜ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ, ವಿಧಾನಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎಸ್. ಸುಧೀಂದ್ರಕುಮಾರ್, ವಾರ್ತಾ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮತ್ತಿತರರು ಪಾಲ್ಗೊಂಡಿದ್ದರು.

 

 ಮುಖಪುಟ /ಸುದ್ದಿ ಸಮಾಚಾರ