ಮುಖಪುಟ /ಸುದ್ದಿ ಸಮಾಚಾರ   

ಬಾಲ್ಯ ವಿವಾಹದಿಂದ ಬಾಲ ವಿಧವೆಯರ ಸಂಖ್ಯೆ ಹೆಚ್ಚಳ

Bharat Nirmanಬಸವಕಲ್ಯಾಣ, ಫೆ.21:ಭಾರತ ಸರ್ಕಾರದ ವಾರ್ತಾ ಶಾಖೆ ಬೀದರ್ ಜಿಲ್ಲೆ ಬಸವಕಲ್ಯಾಣದ ತೇರ್ ಮೈದಾನದಲ್ಲಿ ಏರ್ಪಡಿಸಿರುವ ೫ ದಿನಗಳ ಭಾರತ ನಿರ್ಮಾಣ ಮಾಹಿತಿ ಆಂದೋಲನದಲ್ಲಿಂದು ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಲಿಂಗ ಸಮಾನತೆ ಕುರಿತು ಕಾರ್ಯಾಗಾರ ನಡೆಯಿತು.

ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಪಂಕಜಾ ಅವರು ಬೀದರ್ ಜಿಲ್ಲೆಯಲ್ಲಿ ೧೫ ರಿಂದ ೧೯ ವರ್ಷ ವಯೋಮಿತಿಯ ಶೇ. ೨೬ರಷ್ಟು ಹೆಣ್ಣು ಮಕ್ಕಳು ಪ್ರಥಮ ಹೆರಿಗೆಗೆ ದಾಖಲಾಗುತ್ತಾರೆ ಇದಕ್ಕೆ ಅನಕ್ಷರತೆಯೇ ಕಾರಣ ಎಂದು ಪ್ರತಿಪಾದಿಸಿದರು. ಬಾಲ್ಯ ವಿವಾಹ, ಕಾನೂನಿನ ರೀತ್ಯ ಅಪರಾಧವಾಗಿದ್ದು, ಯಾವ ಯಾವ ಸಂದರ್ಭದಲ್ಲಿ ಇಂತಹ ವಿವಾಹವನ್ನು ಶೂನ್ಯ ವಿವಾಹವೆಂದು ಘೊಷಿಸಲಾಗುತ್ತದೆ ಎಂದು ವಿವರಿಸಿದರು. ಬಾಲ್ಯ ವಿವಾಹದಿಂದ ಬಾಲ ವಿಧವೆಯರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ವಿಷಾದಿಸಿದರು.

ಬೀದರ್‌ನ ಸಮರಸ ಸರ್ಕಾರೇತರ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ಸಿ.ಎಸ್.ವೇದಮಣಿ ಲಿಂಗ ಅಸಮಾನತೆ ಬಗ್ಗೆ ಮಾತನಾಡಿ, ಹೆಣ್ಣು -ಗಂಡು ಸಮಾಜದ ಎರಡು ಕಣ್ಣುಗಳಿದ್ದಂತೆ, ಈ ಎರಡರಲ್ಲಿ ಯಾವುದು ಶ್ರೇಷ್ಠ ಎಂದರೆ, ಎರಡೂ ಎನ್ನುತ್ತೇವೆ, ಅದರಂತೆ ಸಮಾಜದಲ್ಲಿ ಹೆಣ್ಣು -ಗಂಡು ಇಬ್ಬರೂ ಸಮಾನರು ಎಂದರು.

ಲಿಂಗ ತಾರತಮ್ಯದಿಂದ ಮಹಿಳೆಯರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಲಿಂಗ ಸಮಾನತೆ ಸಾಧಿಸುವ ತನಕ ಆರೋಗ್ಯವಂತ ಸಮಾಜದ ನಿರ್ಮಾಣ ಅಸಾಧ್ಯ ಎಂದರು. ತಾಯಂದಿರು ತಮ್ಮ ಗಂಡು ಮಕ್ಕಳಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಿಸಿದರೆ ಮಾತ್ರ ಹೀಗಾಗದಂತೆ ತಡೆಯಬಹುದು ಎಂದರು.

 ಬೀದರ್‌ನ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಶ್ರೀ. ಧನಶೆಟ್ಟಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಗಳ ೧೫ ಹೊಸ ಅಂಶಗಳ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಧಾರ್ಮಿಕ ಶಿಕ್ಷಣಕ್ಕೆ ಮಾತ್ರವೇ ಸೀಮಿತವಾಗಿದ್ದ ಮದರಸಾಗಳಲ್ಲಿ ಆಧುನಿಕ ಶಿಕ್ಷಣ ನೀಡಲು ಮೂಲ ಸೌಕರ್ಯ ಒದಗಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಬೀದರ್‌ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀ. ಪಿ.ಎಸ್. ಇಟ್ಕಂಪಳ್ಳಿ ಹಾಗೂ ಬೀದರ್ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ. ಯಲ್ಲಪ್ಪ  ಸರ್ಕಾರದ ಯೋಜನೆಗಳ ಬಗ್ಗೆ ವಿವರ ನೀಡಿದರು.

ಇದೇ ಸಂದರ್ಭದಲ್ಲಿ ಬೀದರ್ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶ್ರೀಮತಿ ಕಸ್ತೂರಿಬಾಯಿ ಮಾರುತಿ ಬೌದ್ಧೆ ಸ್ವರ್ಣ ಜಯಂತಿ ಸ್ವರೋಜ್‌ಗಾರ್ ಯೋಜನೆಯಡಿ ಯರಂಡಿಯ ಭಾಗ್ಯವಂತಿ ಮಹಿಳಾ ಸ್ವಸಹಾಯ ಸಂಘಕ್ಕೆ ೧,೨೫,೦೦೦ ರೂ.ಚೆಕ್ ವಿತರಿಸಿದರು.

ಭಾರತ ಸರ್ಕಾರದ ವಾರ್ತಾಶಾಖೆಯ ಉಪ ನಿರ್ದೇಶಕಿ ಪಲ್ಲವಿ ಚಿಣ್ಯ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

                                                                   

 ಮುಖಪುಟ /ಸುದ್ದಿ ಸಮಾಚಾರ