ಮುಖಪುಟ /ಸುದ್ದಿ ಸಮಾಚಾರ   

ಕಣ್ಮನ ಸೆಳೆದ ಜಲಾನಯನ ಅಭಿವೃಧ್ದಿ ಮಾದರಿ

Bharat Nirmanಬಸವಕಲ್ಯಾಣ, ಫೆ.21: ಭಾರತ ಸರ್ಕಾರದ ವಾರ್ತಾಶಾಖೆ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಮಾಹಿತಿ ಆಂದೋಲನದ ಭಾಗವಾದ ವಸ್ತು ಪ್ರದರ್ಶನದಲ್ಲಿ ಜಲಾನಯನ ಅಭಿವೃದ್ದಿ ಕುರಿತ ಮಾದರಿ ಕಣ್ಮನ ಸೆಳೆಯುತ್ತಿದೆ.

ಬಸವಕಲ್ಯಾಣದ ತೇರ್ ಮೈದಾನದಲ್ಲಿ ಇಲಾಖೆ ಕೃತಕ ಜಲಾನಯನ ಪ್ರದೇಶವನ್ನೇ ನಿರ್ಮಿಸಿದ್ದು ಅದರಲ್ಲಿ ಹರಿಯುವ ಜಲಧಾರೆ, ಅಣೆಕಟ್ಟು, ಚೆಕ್‌ಬಂದ್ ಇಂಗುಗುಂಡಿ, ಅಂತರ್ಜಲ ಸಂವರ್ಧನೆ, ಭೂಮಿಯ ಫಲವತ್ತತೆ ವೃದ್ಧಿ, ಹಳ್ಳಿಗಳಲ್ಲಿ ನಡೆವ ಜಲಸಭೆ ಮೊದಲಾದ ಹಲವು  ವಿಚಾರಗಳ ಕುರಿತು ಸ್ಥಳೀಯರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ವಸ್ತುಪ್ರದರ್ಶನ ವೀಕ್ಷಣೆಗೆ ಆಗಮಿಸುತ್ತಿದ್ದು, ಈ ಮಾದರಿ ಅವರ ಜ್ಞಾನಾರ್ಜನೆಗೂ ನೆರವಾಗಿದೆ,

ಪಕ್ಕದಲ್ಲೇ ಇರುವ ಕೃಷಿ ಇಲಾಖೆಯ ಮಳಿಗೆ ಸಾವಯುವ ಕೃಷಿ ಉತ್ಪನ್ನಗಳ ಬಗ್ಗೆ; ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆಯುವ ಕುರಿತು ಹಾಗೂ ಬೆಳೆಗೆ ತಲುಪುವ ರೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ

ಕೃಷಿ ಚಟುವಟಿಕೆಗಳಲ್ಲಿ ಬಳಸುವ ವಿವಿಧ ಉಪಕರಣ ಯಂತ್ರಗಳು ಹಾಗೂ ಟ್ರಾಕ್ಟರ್‌ಗಳ ಬಗೆಗಿನ ಮಾಹಿತಿ ರೈತರಿಗೆ ವರದಾನವಾಗಿದೆ

ತೋಟಗಾರಿಕೆ ಇಲಾಖೆಯ ಮಳಿಗೆ ಬಾಳೆಯ ಮೂರನೆಬೆಳೆ, ಮಾವು, ತೆಂಗು ಇತ್ಯಾದಿ ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುತ್ತಿದೆ. ರೇಷ್ಮೆ ಇಲಾಖೆಯ ಮಳಿಗೆ ಹಿಪ್ಪುನೇರೆಳೆ ಬೆಳೆವ ಪರಿ, ಗೂಡು ನಿರ್ಮಾಣ, ಹಂತ ಹಂತದಲ್ಲಿ ಹುಳು ಬೆಳೆಸುವುದು, ಚಾಕಿ ಹಾಕುವುದು, ನೂಲು ತೆಗೆಯುವುದು, ಗೂಡುಗಳಿಂದ ಮಾಲೆ ತಯಾರಿಕೆ ಮೊದಲಾದ ಮಾಹಿತಿ ನೀಡುತ್ತಿದೆ.

ರಾಷ್ಟ್ರೀಯ ಸಮವಿಕಾಸ ಯೋಜನೆ ಬೋರ್ ವೆಲ್ ಹಾಗೂ ಟ್ಯಾಂಕ್ ನಿರ್ಮಾಣದ ಬಗ್ಗೆ ಬೆಳಕು ಚೆಲ್ಲುತ್ತಿದೆ. ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಂದಿ, ಕೋಳಿ, ಮೋಲ, ಮೇಕೆ, ಕುರಿ, ಹಸು, ಎಮ್ಮೆ ಸಾಕಾಣಿಕೆ ಕುರಿತಂತೆ ಮಾಹಿತಿ ಸಿಂಚನ ಮಾಡುತ್ತಿದೆ

ಪ್ರಾದೇಶಿಕ ಅರಣ್ಯ ವಿಭಾಗ ಕಾಡುಮೃಗಗಳ ಬಗ್ಗೆ ಹಾಗೂ ಸಸ್ಯ ಸಂಕುಲದ ಬಗ್ಗೆ ಅರಿವು ಮೂಡಿಸುತ್ತಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮಳಿಗೆಗಳಲ್ಲಿ ನಲಿ-ಕಲಿ ಹಾಗೂ ಸರ್ವಶಿಕ್ಷಣ ಅಭಿಯಾನದ ಸಾದನ ಸಲಕರಣೆಗಳು ಮನಸೆಳೆಯುತ್ತಿವೆ.

ಇದಲ್ಲದೆ ಆರೋಗ್ಯ ಇಲಾಖೆ, ಸಮಾಜಕಲ್ಯಾಣಇಲಾಖೆ, ಕಂದಾಯ ಇಲಾಖೆ, ಖಾದಿ ಗ್ರಾಮೋದ್ಯೋಗ ಇಲಾಖೆಯ ಮಳಿಗೆಗಳು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿವೆ.

                                                                   

 ಮುಖಪುಟ /ಸುದ್ದಿ ಸಮಾಚಾರ