ಮುಖಪುಟ /ಸುದ್ದಿ ಸಮಾಚಾರ   
 

ಯಡಿಯೂರಪ್ಪ ಸರ್ಕಾರದ 2ನೇ ರಾಜ್ಯ ಬಜೆಟ್

ವರದಿ: ನಂಜುಂಡಪ್ಪ,

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವಿಧಾನಸಭೆ ಕಲಾಪ ಇಂದು ಸಂಪೂರ್ಣ ವೈಶಿಷ್ಟ್ಯವಾಗಿತ್ತು. ಏಕೆಂದರೆ ವಿತ್ತ ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸತತ ನಾಲ್ಕನೇ ಆಯವ್ಯಯ ಮಂಡಿಸಿದರು. ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರದ ಎರಡನೇ ಮುಂಗಡ ಪತ್ರ ಇದಾಗಿತ್ತು.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್‌ಗೆ ಸಹಜವಾಗಿಯೇ ಎಲ್ಲರಲ್ಲೂ ಕುತೂಹಲವಿತ್ತು. ಇದರಿಂದ ಸದನವೇನು ಹೊರತಾಗಿರಲಿಲ್ಲ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ವಲಯದಲ್ಲಿ ಮಂಚೂಣಿಯಲ್ಲಿರುವ ಕರ್ನಾಟಕದ ಬಗ್ಗೆ ಇಡೀ ಜಗತ್ತು ಆಸೆಗಣ್ಣಿನಿಂದ ನೋಡುತ್ತಿರುವ ಹಾಗೂ ವಿಶ್ವದ ಆರ್ಥಿಕ ಹಿಂಜರಿಕೆಯಿಂದ ತತ್ತರಿಸಿರುವ ಸಂದರ್ಭದಲ್ಲಿ ಮಂಡಿಸಿದ ಮುಂಗಡ ಪತ್ರ ಆಸಕ್ತಿಯ ಕೇಂದ್ರ ಬಿಂದುವಾಗಿತ್ತು.

ಈ ಎಲ್ಲಾ ನಿರೀಕ್ಷೆಗಳ ನಡುವೆಯೇ ಇಂದು ವಿಧಾನಸಭೆಯ ಕಲಾಪ ಮಧ್ಯಾಹ್ನ ೧೨.೩೧ ಕ್ಕೆ ಆರಂಭವಾಯಿತು. ಸಭಾಧ್ಯಕ್ಷ ಜಗದೀಶ ಶೆಟ್ಟರ್ ಸದಸ್ಯರನ್ನುದ್ದೇಶಿಸಿ ಮೊದಲಿಗೆ ಆಯವ್ಯಯ ಮಂಡನೆ ಎಂದು ಘೋಷಿಸಿದರು. ಶ್ವೇತ ವಸ್ತ್ರಧಾರಿಯಾಗಿ, ಹಸನ್ಮುಖರಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪೆಟ್ಟಿಗೆಯಿಂದ ೨೦೦೯ - ೨೦೧೦ ನೇ ಸಾಲಿನ ಮುಂಗಡ ಪತ್ರವನ್ನು ತೆರೆದು ಓದಲಾರಂಭಿಸಿದರು.

ಸುಮಾರು ೭೭ ಪುಟಗಳ ಮುಂಡ ಪತ್ರವನ್ನು ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಓದಿದರು. ಪ್ರತಿಯೊಂದು ಯೋಜನೆಗಳು, ನೀಡಿದ ವಿನಾಯಿತಿಗಳು, ಹಿಂದಿನ ಯೋಜನೆಗಳ ಪ್ರಗತಿ ಹೀಗೆ ಬಜೆಟ್‌ನ ಮುಖ್ಯಾಂಶಗಳನ್ನು ವಿವರವಾಗಿ ಬಿಚ್ಚಿಡುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರಿಂದ ಮೇಜು ಕುಟ್ಟಿ ಕರತಾಡನ ಕೇಳಿ ಬಂತು. ಪಕ್ಕದಲ್ಲೇ ಆಸೀನರಾಗಿದ್ದ ಸಂಪುಟ ಸಹೋದ್ಯೋಗಿಗಳ ಮೊಗದಲ್ಲೂ ಕಿರುನಗೆ ನಗೆ ಕಾಣಿಸಿಕೊಂಡಿತು.

ಸತತ ನಾಲ್ಕನೇ ಬಾರಿಗೆ ಆಯವ್ಯಯ ಮಂಡಿಸಲು ಅವಕಾಶ ದೊರೆತಿದ್ದಕ್ಕೆ ರಾಜ್ಯದ ಜನತೆಗೆ ಚಿರಋಣಿ  ಎಂಬುದನ್ನು ಹೇಳಲು ಅವರು ಮರೆಯಲಿಲ್ಲ. ಜನತೆ ಕೊಟ್ಟ ಅವಕಾಶವನ್ನು ಮುಂಬರುವ ದಿನಗಳಲ್ಲಿ ಯಶಸ್ವಿಯಾಗಿ ಬಳಕೆ ಮಾಡಕೊಳ್ಳುವ, ಅಭಿವೃದ್ಧಿ ವೇಗ, ವಿಸ್ತಾರವನ್ನು ಹೆಚ್ಚಿಸುವ ವಾಗ್ದಾನವನ್ನು ನೀಡಿದರು.

ನನ್ನ ಕನಸಿನ ರಾಮ ರಾಜ್ಯದಲ್ಲಿ ಭಿಕ್ಷುಕನಿಗೂ, ಭೂಪತಿಗೂ ಸರಿ ಸಮಾನವಾದ ಹಕ್ಕುಗಳು ದೊರೆಯುವವು ಎಂಬ ಮಹಾತ್ಮಗಾಂಧೀಜಿ ಅವರ ಮಾತುಗಳನ್ನು ಮೊದಲ ಪುಟದಲ್ಲೇ ಸ್ಮರಿಸಿಕೊಂಡರು. ಬಜೆಟ್‌ನ ಕೊನೆಯ ೭೭ ನೇ ಪುಟದಲ್ಲೂ ನಮ್ಮ ಲೋಪದೋಷಗಳ ವಿಮರ್ಶೆಗೆ ಕಿವಿಗೊಡಬೇಕು: ಪ್ರಶಂಸೆಗೆಂದೂ ಅಲ್ಲ  ಎಂಬ ರಾಷ್ಟ್ರಪಿತನ ಪ್ರಸಿದ್ಧ ಹೇಳಿಕೆ ಉಲ್ಲೇಖಿಸುವ ಮೂಲಕ ತಮ್ಮ ಬಜೆಟ್ ಭಾಷಣವನ್ನು ಅಂತ್ಯಗೊಳಿಸಿದರು.

ಬಜೆಟ್‌ನಲ್ಲಿ ಜನಪ್ರಿಯ ಕಾರ್ಯಕ್ರಮಗಳಷ್ಟೇ ಅಲ್ಲದೇ ಕವಿವಾಣಿಗಳ ಉಕ್ತಿಗಳಿಗಂತೂ ಬರವಿರಲಿಲ್ಲ. ಹಿ.ಮ. ನಾಗಯ್ಯ, ಕೆ.ಎಸ್. ನರಸಿಂಹ ಸ್ವಾಮಿ, ರಾಷ್ಟ್ರಕವಿ ಕುವೆಂಪು, ದಾ.ರಾ ಬೇಂದ್ರೆ. ಜಿ. ಎಸ್. ಶಿವರುದ್ರಪ್ಪ ಅವರ ಕವನಗಳ ಸಾಲುಗಳು ಬಜೆಟ್‌ನಲ್ಲಿ ಇಣುಕಿದ್ದಷ್ಟೇ ಅಲ್ಲದೇ ಸದನದಲ್ಲಿ ಕವಿ ವಾಣಿಗಳು ರಾರಾಜಿಸಿದವು ಎಂದರೆ ಅತಿಶಯವಲ್ಲ.

ಇನ್ನು ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ಹೇಳುವುದಾದರೆ ರೈತರಿಂದ ಹಿಡಿದು ಅಸಂಘಟಿತ ಕಾರ್ಮಿಕರು, ಸರ್ಕಾರಿ ನೌಕರರು, ಪತ್ರಕರ್ತರನ್ನೂ ಸಂಪ್ರೀತಗೊಳಿಸುವ, ಮಠ ಮಂದಿರಗಳನ್ನು ಓಲೈಸುವ, ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಡುವ ಅಂಶಗಳಿರುವ, ಹೊಸ ಕಾರ್ಯಕ್ರಮಗಳಿಲ್ಲದ, ಹೊಸ ತೆರಿಗೆ ಹಾಕದ, ಅಭಿವೃದ್ಧಿಗೆ ಪೂರಕವಾಗದ, ಜನಪ್ರಿಯ ಹಾಗೂ ಚುನಾವಣಾ ಬಜೆಟ್ ಇದಾಗಿದೆ. ಒಟ್ಟಾರೆ ಇರುವ ಇತಿ ಮಿತಿಯಲ್ಲಿ ಅಭಿವೃದ್ಧಿಗೆ ಪೂರಕವಾಗದ, ಅಂಕಿ ಅಂಶಗಳ ಜೊತೆ ಹಣಕಾಸು ಇಲಾಖೆಯ ಜವಬ್ದಾರಿ ಹೊತ್ತಿರುವ ಯಡಿಯೂರಪ್ಪ ಆಟ ಆಡಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಯಾರಿಗೂ ಸಂಪೂರ್ಣ ತೃಪ್ತಿಕೊಡದ, ಯಾರಿಗೂ ನಿರಾಸೆಯುಂಟು ಮಾಡದ ಹಗ್ಗದ ಮೇಲಿನ ನಡಿಗೆ ಇದೆಂದರೂ ತಪ್ಪಲ್ಲ.

ರಾಜ್ಯದ ಆರ್ಥಿಕ ಪರಿಸ್ಧಿತಿಯ ಹಿನ್ನೆಲೆ, ರಾಜ್ಯದ ಆರ್ಥಿಕ ಬೆಳವಣಿಗೆ, ವಿತ್ತೀಯ ಪರಿಸ್ಧಿತಿಗಳ ವಿಹಂಗಮ ನೋಟದತ್ತ ದೃಷ್ಟಿ ಬೀರಿದ ಯಡಿಯೂರಪ್ಪ, ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುವುದು ಎಂದು ಬಜೆಟ್ ಭಾಷಣ ಓದಿದ ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದರು.

ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಡಾ: ಡಿ.ಎಂ. ನಂಜುಂಡಪ್ಪ ವರದಿಯನ್ನು ಅನುಷ್ಠಾನಗೊಳಿಸಲು ಹೊಸ ಹೆಜ್ಜೆ ಇಟ್ಟಿರುವುದಾಗಿ ಸ್ಪಷ್ಟಪಡಿಸಿದರು. ವರದಿ ಜಾರಿಗಾಗಿ ಹಿಂದಿನ ವರ್ಷ ನಿಗದಿಮಾಡಲಾಗಿದ್ದ ೨ ಸಾವಿರದ ೫೪೭ ಕೋಟಿ ರೂಪಾಯಿ ಬದಲಿಗೆ ಈ ಬಾರಿ ೨ ಸಾವಿರದ ೫೭೪ ಕೋಟಿ ರೂಪಾಯಿ ಒದಗಿಸುತ್ತಿರುವುದಾಗಿ ಯಡಿಯೂರಪ್ಪ ಹೇಳಿದರು.

ರೈತರಿಗೆ ಶೇ ೩ ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಹಿಂದಿನ ಯೋಜನೆಯನ್ನು ಮುಂದುವರೆಸಿದ ಯಡಿಯೂರಪ್ಪ, ಈ ಬಾರಿ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವ ರೈತರಿಗೂ ಇದರ ಲಾಭ ದೊರಕಿಸಿಕೊಡಲು ೨೫೦ ಕೋಟಿ ರೂಪಾಯಿ ಸಹಾಯ ಧನವನ್ನು ಒದಗಿಸುವುದಾಗಿ ಹೇಳಿದರು.

ಜಗತ್ತಿನ ಎಲ್ಲೆಡೆ ಈಗ ಸಾವಯವ ಕೃಷಿ ಮಂತ್ರ ಪಠಣವಾಗುತ್ತಿದೆ. ಇಂತಹ ಸಂದರ್ಭದಲ್ಲೇ ಸಾವಯವ ಕೃಷಿಗಾಗಿ ಸಂಘಟನೆ ಮಾಡುವ ಕಾರ್ಯಕ್ರಮವನ್ನು ಯಡಿಯೂರಪ್ಪ ಘೋಷಿಸಿದರು. ಇದಕ್ಕಾಗಿ ೧೦೦ ಕೋಟಿ ರೂಪಾಯಿ ಸಹಾಯಧನವನ್ನು ಒದಗಿಸುವುದಾಗಿ ಹೇಳಿದರು. ಜ್ವಲಂತ ವಿದ್ಯುತ್ ಸಮಸ್ಯೆಯ ನಿವಾರಣಗೆ ಒತ್ತು ಕೊಟ್ಟಿರುವ ಯಡಿಯೂರಪ್ಪ ಬರುವ ಸಾಲಿನಲ್ಲಿ ಉಚಿತ ವಿದ್ಯುತ್ ಯೋಜನೆಗೆ ೨ ಸಾವಿರದ ೧೦೦ ಕೋಟಿ ರೂಪಾಯಿ ಹಣ ಒದಗಿಸಿದ್ದಾರೆ. ಇದರಿಂದ ೧೭ ಲಕ್ಷ ರೈತರಿಗೆ ಸಹಾಯವಾಗಲಿದೆ.

ರೇಷ್ಮೆ ಕೃಷಿಗೆ ಪ್ರೋತ್ಸಾಹ, ಪಶು ಸಂಗೋಪನೆ, ಹೈನುಗಾರಿಕೆಗೆ ಉತ್ತೇಜ, ಮೀನುಗಾರಿಕೆಗೆ ಸಹಾಯ, ಸಹಕಾರ ವಲಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲು ವ್ಯಾಪಕ ಆಂದೋಲನ ಕೈಗೊಳ್ಳಲಾಗಿದೆ. ಕೃಷಿ ಮಾರುಕಟ್ಟೆಯನ್ನು ವಿಸ್ತರಿಸಿದ್ದು, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸಲು ೭೫೦ ಕೋಟಿ ರೂಪಾಯಿ ನಿಧಿ ಸೃಷ್ಟಿಸಲು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ.

ವಿಳಂಬಗೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಾರೀ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗಾಗಿ ೩ ಸಾವಿರದ ೯೬ ಕೋಟಿ ರೂಪಾಯಿ ಅನುದಾನ ಒದಗಿಸಲು ನಿರ್ಧರಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ ೨೦ ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಮುಂದಿನ ವರ್ಷ ೬೩ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಲು ೫೦೦ ಕೋಟಿ ರೂಪಾಯಿಯ ಕೊಡಗೆ ಪ್ರಕಟಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ ಒತ್ತು ಕೊಟ್ಟಿರುವ ಯಡಿಯೂರಪ್ಪ, ಸುವರ್ಣ ಗ್ರಾಮೋದಯ ಯೋಜನೆಯನ್ನು ಮುಂದುವರೆಸಿದ್ದು, ಈ ಸಾಲಿನಲ್ಲಿ ೧೨೦೦ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ೩೦೦ ಕೋಟಿ ರೂಪಾಯಿ ಹಣ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯ ಸರ್ಕಾರದ ಪಾಲು ೧೪೪ ಕೋಟಿ ರೂಪಾಯಿ ಬಿಡುಗಡೆಯ ಭರವಸೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ೮೦೦ ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿಯೂ ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ನೀಡುವ ಉಚಿತ ಬೈಸಿಕಲ್ ಯೋಜನೆ ಈ ವರ್ಷವೂ ಮುಂದುವರೆಕೆ, ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ: ಶಿವಕುಮಾರ ಸ್ವಾಮಿ ಅವರ ಹೆಸರು ನಾಮಕರಣ, ಆಯುರ್ವೇದ, ವೈದ್ಯ ವಿಜ್ಞಾನದ ಅಭಿವೃದ್ಧಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಧಾಪನೆ, ರಾಜ್ಯದಲ್ಲಿ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸಲು ಈ ವರ್ಷ ದಾವಣಗೆರೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಧಾಪನೆ. ಚಿತ್ರದುರ್ಗದ ಒಂದು ಸಾವಿರ ಎಕರೆ ಪ್ರದೇಶದಲ್ಲಿ ವಿಜ್ಞಾನ ಸಂಸ್ಧೆ. ಗುಲ್ಬರ್ಗಾ ವಿಭಾಗದಲ್ಲಿ ಐಟಿ ಪಾಕ್ ನಿರ್ಮಾಣಕ್ಕೆ ಹತ್ತು ಕೋಟಿ ರೂಪಾಯಿ ನೀಡುವ ಘೋಷಣೆಗಳನ್ನು ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಧಾರವಾಡಕ್ಕೊಂದು ಮಾನಸಿಕ ಆರೋಗ್ಯ ಸಂಸ್ದೆ, ಪರಿಶಿಷ್ಟ ಜನಾಂಗದ ಹೆಣ್ಣು ಮಕ್ಕಳಿಗಾಗಿ ಕಿತ್ತೂರು ರಾಣಿ ಚನ್ನಮ್ಮ ಹೆಸರಿನಲ್ಲಿ ೧೧೪ ವಸತಿ ಶಾಲೆಗಳ ನಿರ್ಮಾಣ, ಈ ಸಮುದಾಯದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಕ್ಕಾಗಿ ಶೇ ೭೫ ರಷ್ಟು ಅಂಕ ಗಳಿಸಿದ ಹೆಣ್ಣು ಮಕ್ಕಳಿಗೆ ಹತ್ತು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿಯೂ ಭರವಸೆ ಕೊಟ್ಟರು.

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಯಡಿಯೂರಪ್ಪ, ಕಾಗಿನೆಲೆ ಪ್ರಾಧಿಕಾರಕ್ಕೆ ಹತ್ತು ಕೋಟಿ ರೂಪಾಯಿ, ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಧಾನದ ಅಭಿವೃದ್ಧಿಗೆ ೫೦ ಕೋಟಿ ರೂಪಾಯಿ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಗಳ ಅಭಿವೃದ್ಧಿಗಾಗಿ ಐದು ಕೋಟಿ ರೂಪಾಯಿ, ಮೇಲು ಕೋಟೆ ಅಭಿವೃದ್ಧಿಗೆ ೨ ಕೋಟಿ ರೂಪಾಯಿ, ಯಡಿಯೂರು ಸಿದ್ಧಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಹೀಗೆ ಹತ್ತು ಹಲವು ಮಠಗಳಿಗೆ ಯಡಿಯೂರಪ್ಪ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ.

ಅಲ್ಪ ಸಂಖ್ಯಾತ ಸಮುದಾಯದ ಏಳ್ಗೆಗೆ ೧೬೭ ಕೋಟಿ ರೂಪಾಯಿ ನೆರವು, ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ನೆರವು, ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು, ಸಹಾಯಕಿಯರ ಮಾಸಿಕ ಭತ್ಯೆಯಲ್ಲಿ ಕ್ರಮವಾಗಿ ೨೫೦ ಮತ್ತು ೧೨೫ ರೂಪಾಯಿ ಹೆಚ್ಚಳ, ವಸತಿ ಯೋಜನೆಯಡಿ ಒಟ್ಟು ನಾಲ್ಕು ಲಕ್ಷ ಮನೆಗಳ ನಿರ್ಮಾಣ ಮಾಡುವ ವಾಗ್ದಾನ ನೀಡಿದ್ದಾರೆ.

ಇನ್ನೂರು ಲಂಬಾಣಿ ತಾಂಡಾಗಳಲ್ಲಿ ಸೇವಾಲಾಲ್ ಸಮುದಾಯ ಭವನಗಳ ನಿರ್ಮಾಣಕ್ಕೆ ತಲಾ ಹತ್ತುಲಕ್ಷ ರೂ ಧನಸಹಾಯ, ಕುರುಬ, ಸವಿತಾ, ಕ್ಷತ್ರಿಯ, ವಿಶ್ವಕರ್ಮ, ಉಪ್ಪಾರ, ಮಡಿವಾಳ, ದೇವಾಂಗ, ಬಿಲ್ಲವ ಮುಂತಾದ ಸಮಾಜಗಳ ಸಂಘಟನೆಗಳಿಗೆ ಮೂಲಭೂತ ಸೌಲಭ್ಯಕ್ಕೆ ಇಪ್ಪತ್ತು ಕೋಟಿ.

ಕಮ್ಮಾರ, ಕುಂಬಾರ, ಬಡಿಗ, ದೇವಾಂಗ, ಮೂರ್ತೇದಾರ, ಅಕ್ಕಸಾಲಿಗ, ದರ್ಜಿ, ಕ್ಷೌರಿಕ ವೃತ್ತಿಗಳಲ್ಲಿ ನಿರತರಾದ ಒಂದು ಲಕ್ಷ ಕುಟುಂಬಗಳಿಗೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ೫ ಸಾವಿರದವರೆಗೆ ಸಾಲ ಹಾಗೂ ಸಹಾಯಧನ ನೀಡಿಕೆಗೆ ೫೦ ಕೋಟಿ.

ಕ್ರೈಸ್ತ, ಬೌದ್ಧ, ಜೈನ, ಸಿಖ್ ಮುಂತಾದ ಅಲ್ಪಸಂಖ್ಯಾತ ಸಂಸ್ಥೆಗಳ ಚಟುವಟಿಕೆಗೆ ೧೦ ಕೊಟಿ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮೂವತ್ತೈದು ಕೊಟಿ,ಶಾದಿ ಮಹಲ್‌ಗಳ ನಿರ್ಮಾಣಕ್ಕೆ ೧೫ ಕೊಟಿ ಐವತ್ತು ವರ್ಷಕ್ಕೂ ಮೇಲ್ಪಟ್ಟ ನಿರಾಶ್ರಿತ ಮಹಿಳೆಯರಿಗೆ ೪೦೦ ರೂ ಮಾಸಾಶನ ವಸತಿ ಹೀನರಿಗಾಗಿ ಒಂದು ಲಕ್ಷ ನಿವೇಶನಗಳ ಅಭಿವೃದ್ಧಿಗೆ ೧೦೦ ಕೋಟಿ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಿದ್ಧ ಉಡುಪು ಕಯಗಾರಿಕೆಗಳಲಿ ಕೆಲಸ ಮಾಡಲು ವಿಶೇಷ ತರಬೇತಿ ಕೇಂದ್ರಗಳ ಸ್ಥಾಪನೆಗೆ ೧೫ ಕೊಟಿ,ಆಹಾರ ಪಡಿತರ ವ್ಯವಸ್ಥೆಗೆ ೭೫೦ ಕೋಟಿ,ಮಂಡ್ಯದ ಮೈಷುಗರ್ ಕಂಪನಿಗೆ ಐವತ್ತು ಕೋಟಿ ಈಕ್ವಿಟಿ ಬಂಡವಾಳ ಒದಗಿಸುವುದಾಗಿ ಹೇಳಿದ್ದಾರೆ.

ಸೌರಬೆಳಕು ಯೋಜನೆಯಡಿ ಗ್ರಾಮಗಳಲ್ಲಿ ಸೌರ ವಿದ್ಯುತ್ ಬೀದಿ ದೀಪಗಳನ್ನು ಅಳವಡಿಸಲು ೫ ಕೋಟಿ,ತುಮಕೂರು ವಿವಿಗೆ ಡಾ||ಶಿವಕುಮಾರ ಸ್ವಾಮೀಜಿ ವಿವಿ ಎಂದು ಪುನರ್ ನಾಮಕರಣ,ಕೊಡಗಿನ ಕುಶಾಲನಗರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ತಾಪನೆಗೆ ೨ ಕೋಟಿ ನೀಡುವುದು.

ಗಂಗಾವತಿಯಲ್ಲಿ ನೂತನ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ೧೦ ಕೋಟಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಹತ್ತು ಕೋಟಿ ರೂ,ಪತ್ರಕರ್ತರು ಮತ್ತು ನಿವೃತ್ತ ಪತ್ರಕರ್ತರನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ತರುವುದು,ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಕೆಎಸ್‌ಆರ್‌ಟಿಸಿ ಮೂಲಕ ಉಚಿತ ಬಸ್ ಪಾಸ್ ನೀಡುವುದು.

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನ್ಯಾಯಾಲಯಗಳ ಕಟ್ಟಡ ಅಭಿವೃದ್ಧಿಗೆ ಐವತ್ತು ಕೋಟಿ ನೀಡುವುದಾಗಿ ನುಡಿದ ಅವರು ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ತಾವು ಮಂಡಿಸಿದ ಬಜೆಟ್ ರಾಜ್ಯ ಹಿತಕ್ಕೆ ಪೂರಕವಾಗಲಿದೆ ಎಂದು ಸಮರ್ಥಿಸಿಕೊಂಡರು. ಕೊನೆಗೆ ಜೈ ಹಿಂದ್, ಜೈ ಕರ್ನಾಟಕ ಎಂದು ಹೇಳುವ ಮೂಲಕ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ