ಮುಖಪುಟ /ಸುದ್ದಿ ಸಮಾಚಾರ   
 

ಫೆ. ೯ರಂದು ಗಂಡೋರಿನಾಲಾ ಯೋಜನೆಯ ಉದ್ಘಾಟನೆ

ಗುಲಬರ್ಗಾ,ಫೆ.೦೭.(ಕ.ವಾ.)-ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ಮತ್ತು ಗುಲಬರ್ಗಾ ತಾಲೂಕುಗಳ ೨೪ ಗ್ರಾಮಗಳ ಒಟ್ಟು ೮೦೯೪ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗಂಡೋರಿನಾಲಾ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಡಾ|| ಬಿ.ಎಸ್. ಯಡಿಯೂರಪ್ಪ ಫೆ. ೯ ರಂದು  ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು ಹೇಳಿದರು.

ಶನಿವಾರ ಗುಲಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕೈಗೊಳ್ಳಲಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ೨೫೬೬ ಹೆಕ್ಟೇರ್ ಭೂಮಿಗೆ ನೀರು ಹರಿಸಲಾಗಿದೆ ಎಂದರು. ಇನ್ನೆರಡು ತಿಂಗಳಲ್ಲಿ ಉಳಿದೆಲ್ಲ ಪ್ರದೇಶಕ್ಕೆ ನೀರಾವರಿ ಒದಗಿಸಲು ಕ್ರಮ ಜರುಗಿಸಲಾಗಿದೆ ಹಾಗೂ ಆಣೆಕಟ್ಟೆ, ಕಾಲುವೆಗಳ ನಿರ್ಮಾಣ, ಮುಳುಗಡೆ ಪ್ರದೇಶದ ಗ್ರಾಮಗಳ ಪುನರ್ವಸತಿಯಂತಹ ಯೋಜನೆಯ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ ಎಂದ ಸಚಿವರು ಸಣ್ಣಪುಟ್ಟ ಕಾಮಗಾರಿಗಳನ್ನೆಲ್ಲ ಜೂನ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಮುಖ್ಯ ಇಂಜಿನಿಯರ್ ಭರವಸೆ ನೀಡಿದ್ದಾರೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ  ೨೩೩ ಕೋಟಿ ರೂ. ಇದ್ದು, ಜನವರಿ ಅಂತ್ಯದವರೆಗೆ ೨೦೭ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.

ಗಂಡೋರಿನಾಲಾ ಯೋಜನೆಯಿಂದ ೬೬೪ ಹೆಕ್ಟೇರ್ ಪ್ರದೇಶವು ಮುಳುಗಡೆ ವ್ಯಾಪ್ತಿಗೆ ಬರುತ್ತಿದ್ದು, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ಗುಲಬರ್ಗಾ ತಾಲೂಕಿನ ಬೆಳಕೋಟಾ ಮತ್ತು ಆಳಂದ ತಾಲೂಕಿನ ಧಮ್ಮೂರ ಗ್ರಾಮಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಸದರಿ ಯೋಜನೆಯ ನೀರಿನ ಸಮರ್ಪಕ ಹಾಗೂ ಸಮಯೋಚಿತ ಬಳಕೆಯ ಮತ್ತು ನೀರನ್ನು ಮುಖ್ಯ ಕಾಲುವೆ ಅಂತ್ಯದವರೆಗೆ ಹರಿಸಿರುವ ದೃಷ್ಟಿಕೋನದಿಂದ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲು ಫೆಬ್ರುವರಿ ೯ಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ