ಮುಖಪುಟ /ಸುದ್ದಿ ಸಮಾಚಾರ   
 

ಹಿರಿಯ ಯಕ್ಷಗಾನ ಕಲಾವಿದ ಕೆರೆಮನೆ ಶಂಭುಹೆಗಡೆ ನಿಧನ

Keremane Shambuhegde nomore, ಕೆರೆಮನೆ ಶಂಭುಹೆಗಡೆ ಹಠಾತ್ ನಿಧನಕಾರವಾರ, ಫೆ.4 :  ಹಿರಿಯ ಯಕ್ಷಗಾನ ಕಲಾವಿದ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಅಧ್ಯಕ್ಷ ಕೆರೆಮನೆ ಶಂಭುಹೆಗಡೆ ಇಡಗುಂಜಿಯಲ್ಲಿ ಸೋಮವಾರ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಇಡಗುಂಜಿ ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ಲವಕುಶ ಪ್ರಸಂಗದಲ್ಲಿ ವೇಷ ಹಾಕಿದ್ದ ಕೆರೆಮನೆ ಶಂಭು ಹೆಗಡೆ ಅವರು ಯಕ್ಷಗಾನ ನಡೆಯುತ್ತಿದ್ದಾಗಲೇ ಹೃದಯಾಘಾತಕ್ಕೀಡಾದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಲಾಯಿತಾದರೂ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರೆಂದು ಅವರ ಪುತ್ರ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಇಡಗುಂಜಿ ಮಹಾಗಣಪತಿ ಮೇಳದಿಂದ ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ಕರಾವಳಿಯ ಜನಪದ ಕಲೆಯನ್ನು ಕಡಲಾಚೆ ಜನಪ್ರಿಯಗೊಳಿಸಲು ಶ್ರಮಿಸಿದ್ದ ಶಂಭುಹೆಗಡೆ ಅವರು ಬಡಗತಿಟ್ಟು ಶೈಲಿಯಲ್ಲಿ ಅಪರಿಮಿತ ಪಾಂಡಿತ್ಯ ಪಡೆದಿದ್ದರು.

ಖ್ಯಾತ ಯಕ್ಷಗಾನ ಕಲಾವಿದ ಶಿವರಾಮ ಹೆಗಡೆ ಅವರ ಪುತ್ರರಾಗಿದ್ದ ಅವರು ಶಿವರಾಜ್ ಕುಮಾರ್ ಅಭಿನಯದ ನಮ್ಮೂರ ಮಂದಾರ ಹೂವೆ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಪರ್ವ ಕನ್ನಡ ಚಲನಚಿತ್ರಗಳಲ್ಲಿಯೂ ನಟಿಸಿದ್ದರು. ಶಂಭುಹೆಗಡೆ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ