ಮುಖಪುಟ /ಸುದ್ದಿ ಸಮಾಚಾರ   
 

ಸಿದ್ದಗಂಗಾಶ್ರೀಗಳ ಶತಮಾನೋತ್ಸವಕ್ಕೆ ಚಾಲನೆ..

ಸಿದ್ಧಗಂಗಾಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಶತಮಾನೋತ್ಸವ ಸಮಾರಂಭತುಮಕೂರು, ಫೆ.2 ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾದ  ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ಶತಮಾನೋತ್ಸವ ಸಮಾರಂಭಕ್ಕೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ತುಮಕೂರಿನ ಸಿದ್ಧಗಂಗೆಯಲ್ಲಿಂದು ವಿಧ್ಯುಕ್ತ ಚಾಲನೆ ನೀಡಿದರು.

ಶ್ರೀಗಳಿಗೆ ಶಾಲುಹೊದಿಸಿ, ಹೂಮಾಲೆ ಸಮರ್ಪಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಆರಂಭದಲ್ಲಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ರಾಷ್ಟ್ರಪತಿಗಳು ನಂತರ ಇಂಗ್ಲಿಷ್ ನಲ್ಲಿ ಭಾಷಣ ಮಾಡಿದರೂ ಮಧ್ಯೆ ಮಧ್ಯೆ ಬಸವಣ್ಣನವರ ವಚನಗಳನ್ನು ಉದ್ಧರಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹದ ಪ್ರಶಂಸೆಗೆ ಪಾತ್ರರಾದರು.

ಅನ್ನದಾನಂ ಪರಂದಾನಂ, ವಿದ್ಯಾದಾನಂ ಮಹಾಪರಃ ಎಂಬ ಸಂಸ್ಕೃತ ವಾಕ್ಯವನ್ನುಚ್ಚರಿಸಿ, ಸಿದ್ದಗಂಗಾ ಮಠ ಮಾಡುತ್ತಿರುವ ಅಕ್ಷರ ದಾಸೋಹ ಮತ್ತು ವಿದ್ಯಾ ದಾಸೋಹದ ಹಿರಿಮೆಯನ್ನು ಕೊಂಡಾಡಿದರು.

ಸಿದ್ಧಶೈಲ ಗ್ರಂಥ ಬಿಡುಗಡೆ ಮಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕ ಕಲ್ಯಾಣಕ್ಕೆ ಸಾಧು, ಸಂತರು, ಶರಣರು ನೀಡಿರುವ ಕೊಡುಗೆ ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ರಾಮೇಶ್ವರ ಠಾಕೂರ್, ಸಂಸ್ಕೃತ ಮತ್ತು ಕನ್ನಡ ಭಾಷೆಯ ಬೆಳವಣಿಗೆಗೆ ಸಿದ್ದಗಂಗಾ ಮಠ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ವಿಶ್ವಕ್ಕೆ ಶಾಂತಿಸಂದೇಶ ಸಾರುತ್ತಾ ಶಾಂತಿದೂತರಾಗಿರುವ ಸ್ವಾಮೀಜಿಯವರ ಬದುಕೇ ಒಂದು ಮಹಾಕಾವ್ಯ. ಸಾರ್ಥಕ ಬದುಕಿಗೆ ಪ್ರತೀಕವಾಗಿರುವ ಸ್ವಾಮೀಜಿಯವರ ಶತಮಾನೋತ್ಸವ ಸಮಾರಂಭ ವಿರಳಾತಿ ವಿರಳ ಸಮಾರಂಭವಾಗಿದ್ದು, ಇದರಲ್ಲಿ ಪಾಲ್ಗೊಂಡ ಎಲ್ಲರೂ ಪುಣ್ಯವಂತರೆಂದರು.

ಸಿದ್ಧಗಂಗಾಶ್ರೀಗಳು ಆಶೀರ್ವಚನ ನೀಡಿ, ಮನುಕುಲದ ಉದ್ಧಾರಕ್ಕೆ ಭರತಖಂಡ ನೀಡಿರುವ ಕೊಡುಗೆ ಅನುಪಮವಾದದ್ದು, ಮುಂದೆಯೂ ವಿಶ್ವದಲ್ಲಿ ಶಾಂತಿ ನೆಲೆಸಲು ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ನ್ಯಾಯಮೂರ್ತಿ ವಿ.ಎಸ್. ಮಳೀಮಠ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜಪಾಟೀಲ್, ಮಾಜಿ ಸಚಿವ ಸೋಮಣ್ಣ, ಸುತ್ತೂರು ಶ್ರೀ ದೇಶಿಕೇಂದ್ರ ಮಹಾಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ