ಮುಖಪುಟ /ಸುದ್ದಿ ಸಮಾಚಾರ   
 

ನಗರದ ವಿದ್ಯಾರ್ಥಿಗೆ ಐಕೆನ್ ಸೈಂಟಿಫಿಕಾ ಪ್ರಶಸ್ತಿ

Bangalore Student Mayur Shobhit wins iken scintifica 2008 awardಬೆಂಗಳೂರು, ಫೆ.3 : Axiom  ಎಡ್ಯುಕೇಷನ್ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶಾದ್ಯಂತ ಏರ್ಪಡಿಸಿದ್ದ ರಾಷ್ಟ್ರಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆ ಐಕೆನ್ ಸೈಟಿಫಿಕಾ 2008ರಲ್ಲಿ ಬೆಂಗಳೂರಿನ ಬನಶಂಕರಿಯ ಆಡನ್ ಇನ್ ಸ್ಟಿಟ್ಯೂಟ್ ಆಫ್ ಎಡ್ಯುಕೇಷನ್ ನ 8ನೇ ತರಗತಿ ವಿದ್ಯಾರ್ಥಿ ಮಯೂರ್ ಶೋಭಿತ್ 4ನೇ ಬಹುಮಾನ ಪಡೆದಿದ್ದಾನೆ.

50 ಲಕ್ಷ ರೂಪಾಯಿ ಸ್ಕಾಲರ್ ಷಿಪ್ ಮೊತ್ತದ ಈ ಸ್ಪರ್ಧೆಯಲ್ಲಿ ಭಾರತದ ವಿವಿಧ ಶಾಲೆಗಳ 3ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 160 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.

ಮುಂಬೈನ ಐ.ಐ.ಟಿ.ಯಲ್ಲಿ ಜನವರಿ 31ರಂದು ನಡೆದ ಈ ಅಂತಿಮ ಹಣಾಹಣಿಯಲ್ಲಿ ಬೆಂಗಳೂರಿನ ರೇಯಾನ್ ಇಂಟರ್ ನ್ಯಾಷನಲ್ ಶಾಲೆಯ ಟೋನಿ ಜೋಸ್, ಅನಿಕೇತ್ ಪಿ ಭಾಗವತ್ ಮತ್ತು ಅನನ್ಯ ರಾವ್, ನ್ಯೂಕೇಂಬ್ರಿಜ್ ಶಾಲೆಯ ಸಮಂತ್ ದುಶ್ಯಂತ್ ಹಾಗೂ ಆಡನ್ ಶಾಲೆಯ ಟಿ.ಎನ್. ಶ್ರಾವಣಿ, ಆದಿತ್ಯ ವಿ ಪರಾಶರ್, ಮಯೂರ್ ಶೋಭಿತ್ ಮತ್ತು ಆಶಿಶ್ ಪಾಲ್ಗೊಂಡಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿರುವ ವಿಜ್ಞಾನದ ಬಗೆಗಿನ ಅಪರಿಮಿತ ಜ್ಞಾನವನ್ನು ಒರೆ ಹಚ್ಚಿದ ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಆಡನ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಯೂರ್ ಶೋಭಿತ್ ನಾಲ್ಕನೇ ಸ್ಥಾನ ಪಡೆದ ಸಾಧನೆ ಮಾಡಿದರು.

ಮಯೂರ್ ಗೆ ಪಾರಿತೋಷಕ, ಪ್ರಶಸ್ತಿ ಪತ್ರ , 4000 ಕೆನ್ಸ್ ಸ್ಕಾಲರ್ ಷಿಪ್ ಮತ್ತು ಲ್ಯಾಪ್ ಟಾಪ್ ಬಹುಮಾನ ದೊರೆತಿದೆ. ಮಯೂರ್ ನ ಈ ಸಾಧನೆಗೆ ಆಡನ್ ಶಾಲೆಯ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ.

ಸಂತಸ :  ರಾಷ್ಟ್ರಮಟ್ಟದ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆಯಲ್ಲಿ ದೇಶಕ್ಕೇ ನಾಲ್ಕನೆಯವನಾಗಿ ಪ್ರಶಸ್ತಿ ಪಡೆದ ಬಗ್ಗೆ ಮಯೂರ್ ಸಂತಸ ವ್ಯಕ್ತ ಪಡಿಸಿದ್ದಾನೆ. ಸ್ಪರ್ಧೆ ಕಠಿಣವಾಗಿತ್ತು. ನಾನು ಶಕ್ತಿ ಮೀರಿ ಪ್ರಯತ್ನಿಸಿದೆ. ಮೊದಲ ಮೂರು ಬಹುಮಾನಗಳಲ್ಲಿ ಒಂದು ಪಡೆಯುವ ಆಸೆಯಿತ್ತು. ಆದರೆ, ನಾಲ್ಕನೆ ಸ್ಥಾನ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಪ್ರಥಮ ಬಹುಮಾನ ಗೆಲ್ಲುವ ಗುರಿ ತನ್ನದೆಂದು ಹೇಳಿದ್ದಾರೆ.

ತನ್ನ ಈ ಸಾಧನೆಗೆ ಶಾಲೆಯ ಎಲ್ಲ ಶಿಕ್ಷಕರು, ತಂದೆ ಬಿ.ಎ. ಮಂಜುನಾಥ್, ತಾಯಿ ರೇಖಾ ಹಾಗೂ ಸ್ನೇಹಿತರ ಪ್ರೋತ್ಸಾಹವೇ ಕಾರಣ ಎಂದು ತಿಳಿಸಿದ್ದಾನೆ. ನಗರಕ್ಕೆ, ರಾಜ್ಯಕ್ಕೆ ಕೀರ್ತಿ ತಂದ ಮಯೂರ್ ಗೆ ಕನ್ನಡರತ್ನ ಬಳಗ ಅಭಿನಂದನೆ ಸಲ್ಲಿಸುತ್ತದೆ.

 ಮುಖಪುಟ /ಸುದ್ದಿ ಸಮಾಚಾರ