ಮುಖಪುಟ /ಸುದ್ದಿ ಸಮಾಚಾರ   
 

ನೆನಪುಗಳ ಮಾತು ಮಧುರ, ನೆನಪುಗಳ ಭಾವ ಅಮರ....
2 ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಕಲೆತು, ಆಡಿ, ಹಾಡಿ, ಊಟ ಮಾಡಿ ಸಂತಸಪಟ್ಟ ಒಂದೇ ಕಾಲೇಜಿನ ಒಂದೇ ತರಗತಿಯ 35 ಗೆಳೆಯರು...

ಪಿ.ಇ.ಎಸ್. ಕಾಲೇಜು ವಿದ್ಯರ್ಥಿಗಳ ಸ್ನೇಹ ಸಮ್ಮಿಲನ...ಬೆಂಗಳೂರು :  ನಾವೆಲ್ಲರೂ ಕಾಲೇಜಿನಲ್ಲಿ ಓದಿದವರೇ. ಆ ಕಾಲೇಜು ದಿನಗಳಲ್ಲಿನ ಸಹಪಾಠಿಗಳೆಲ್ಲರೂ ನಮಗೆ ಸ್ನೇಹಿತರೆ. ಆ ಸ್ನೇಹ ಎಷ್ಟು ದಿನ? ಕಾಲೇಜು ಅವಧಿ ಮುಗಿಯುವವರೆಗೆ, ಹೆಚ್ಚೆಂದರೆ ಮದುವೆ ಮಕ್ಕಳಾಗುವವರೆಗೆ. ಆನಂತರ ಎಲ್ಲೋ ಸಿಕ್ಕಾಗ ಹಾಯ್ ಬಾಯ್ ಎನ್ನುವುದು ವಾಡಿಕೆ.

ಆದರೆ ಇಂದು ಬೆಂಗಳೂರಿನಲ್ಲೊಂದು ಅಪರೂಪದ ಕಾರ್ಯಕ್ರಮ. ಪಿ.ಇ.ಎಸ್. ಕಾಲೇಜಿನಲ್ಲಿ ಪಿ.ಯು.ಸಿ.ಯಿಂದ, ವಾಣಿಜ್ಯ ಪದವಿ ಪಡೆಯುವವರೆಗೆ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿದ 70 ವಿದ್ಯಾರ್ಥಿಗಳ ಪೈಕಿ 30 ಸಹಪಾಠಿಗಳು ಒಂದೇ ವೇದಿಕೆಯಲ್ಲಿ ಕಲೆತು ತಮ್ಮ, ತಮ್ಮ ಮಕ್ಕಳ ಸಾಧನೆಯ ಬಗ್ಗೆ ಪರಸ್ಪರ ಪರಿಚಯ ಮಾಡಿಕೊಂಡರು.

ಪಿ.ಇ.ಎಸ್. ಕಾಲೇಜು ವಿದ್ಯರ್ಥಿಗಳ ಸ್ನೇಹ ಸಮ್ಮಿಲನ...ಎಲ್ಲರೂ ತಮ್ಮಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಪ್ರದರ್ಶಿಸಿದರು. ರಂಜಿಸಿದರು. ಕಾಲೇಜು ದಿನಗಳಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಮೆಲಕು ಹಾಕಿದರು. ತಮಗೆ ಪಾಠ ಮಾಡಿದ, ತಮ್ಮ ತಪ್ಪುಗಳನ್ನು ತಿದ್ದಿದ, ಸತ್ಪ್ರಜೆಗಳನ್ನಾಗಿ ಮಾಡಿದ  ಗುರುಗಳನ್ನು ನೆನೆದರು, ಅವರ ಅನುಕರಣೆ ಮಾಡಿದರು. 6 ಗಂಟೆಗಳ ಕಾಲ ಒಂದೇ ಕುಟುಂಬದ ಸದಸ್ಯರಂತೆ ಸುಖ, ದುಃಖ ಹಂಚಿಕೊಂಡರು. ಜೊತೆಯಲ್ಲಿ ಕುಳಿತು ಊಟ ಮಾಡಿದರು. ಈ ಅನುಭವ ನಿಜಕ್ಕೂ ಅವಿಸ್ಮರಣೀಯ.

ಇಂಥ ಒಂದು ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದು, ಜಿ.ಕೆ.ಟಿ. ಪ್ರಸನ್ನ, ಎ.ವಿ. ವೇಣುಗೋಪಾಲ್, ಬಿ.ಎ. ಮಂಜುನಾಥ್ ಹಾಗೂ ಶ್ರೀಧರ್. ಇವರು ತಮ್ಮ  ಸಹಪಾಠಿ ಶಾಂತಲಾ, ಅನುಪಮಾ ಅವರ ನೆರವಿನಿಂದ 1982ರಿಂದ87ರವರೆಗೆ ತಮ್ಮೊಂದಿಗೆ ಪಿ.ಇ.ಎಸ್. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಗೆಳೆಯರ ದೂರವಾಣಿ ಸಂಖ್ಯೆಗಳನ್ನು  ಕಲೆ ಹಾಕಿದರು.

ಪಿ.ಇ.ಎಸ್. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ.ಫೆ.1ರ ಭಾನುವಾರ ಗೆಳೆಯ ವೇಣುಗೋಪಾಲ್ ಮನೆಯಲ್ಲಿ ಸೇರೋಣ ಬನ್ನಿ ಎಂದು ಆಮಂತ್ರಿಸಿದರು. ಈ ಕರೆಗೆ ಓಗೊಟ್ಟ ಬಂದ ಎಲ್ಲರೂ ಮೊದಲಿಗೆ ಇದರಿಂದೇನು ಪ್ರಯೋಜನ ಎಂದುಕೊಂಡೇ ಬಂದವರು. ಆದರೆ, ಆ ಅಪರೂಪದ ಸ್ನೇಹ ಸಮ್ಮಿಲನ ಮರೆತೇ ಹೋಗಿದ್ದ ಎಷ್ಟೋ ಘಟನೆಗಳನ್ನು ಬಿಚ್ಚಿಟ್ಟಾಗ ಎಲ್ಲರಲ್ಲೂ ವಿದ್ಯುತ್ ಸಂಚಲನವಾಯ್ತು. ನವಚೈತನ್ಯ ತುಂಬಿಬಂತು. 20 ವರ್ಷ ಕಿರಿಯರಾಗಿ ಕಾಲೇಜಿನ ನೆನಪಿನಂಗಳದಲ್ಲಿ ವಿಹರಿಸಿದ ಎಲ್ಲರಲ್ಲೂ ಚೈತನ್ಯ ಚಿಲುಮೆಯಾಗಿತ್ತು.

ಈ ಅಪರೂಪದ ಸ್ನೇಹ ಸಮ್ಮಿಲನದಲ್ಲಿ  ಜಿ.ಕೆ.ಟಿ. ಪ್ರಸನ್ನ, ಎ.ವಿ. ವೇಣುಗೋಪಾಲ್, ಶ್ರೀನಗರ ಶ್ರೀಧರ್, ಕೆ.ಎಸ್.ಎಸ್. ಪ್ರಕಾಶ್, ಶ್ರೀಧರ, ಟಿ.ಎಂ. ಸತೀಶ್, ಶ್ರೀನಿವಾಸ ಮಯ್ಯ, ಕೃಷ್ಣ, ಸುರೇಶ್, ಮಂಜುನಾಥ್, ತಟ್ಟನಹಳ್ಳಿ ನಾಗೇಶ, ಸುಶೀಂದರ್ ಪ್ರಸಾದ್ ಸ್ಟ್ಯಾನ್ಲಿ, ಕೃಷ್ಣಕುಮಾರ್, ಆರ್.ಜಿ.ಪ್ರಸಾದ್, ಏಕಾಂತರಾಜು, ಎಚ್ ಪಿ. ಸುರೇಶ್,  ಶಾಂತಲಾ, ಅನುಪಮಾ, ಸುದರ್ಶಿನಿ, ತಾರಾ, ಸುಜಾತ, ಸುಧಾಮಣಿ, ಸುಧಾಮಣಿ ಬಿ.ಪಿ., ಕಾಂತಾ, ಹರಿಣಿ, ಲೀಲಾವತಿ, ಕವಿತಾ ಮತ್ತಿತರರು ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ