ಮುಖಪುಟ /ಸುದ್ದಿ ಸಮಾಚಾರ

 ಯಡಿಯೂರಪ್ಪಗೆ ಯಾವುದೇ ಸ್ಥಾನ ಇಲ್ಲ - ಬಿಜೆಪಿ

Yadiyurappaಬೆಂಗಳೂರು,ಡಿ,೧೫: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇರಿದ್ದ ಒತ್ತಡ ಹಾಗೂ ಕಿರುಕುಳ ತಂತ್ರಕ್ಕೆ ಜಗ್ಗದ ಬಿಜೆಪಿ ಜೈಕಮಾಂಡ್, ಸಧ್ಯಕ್ಕೆ ಯಾವುದೇ ಜವಾಬ್ದಾರಿ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನು ಕುರಿತ ಎರಡು ತೀರ್ಪಿನ ಅಸಗಳನ್ನು ಹಿಡಿದುಕೊಂಡು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಮುಖ್ಯಮಂತ್ರಿ ಇಲ್ಲವೆ ಪಕ್ಷದ ಹುದ್ದೆಗಾಗಿ ಲಾಬಿ ನಡೆಸಿದ್ದ ಯಡಿಯೂರಪ್ಪ ಅವರಿಗೆ ಈ ಬೆಳವಣಿಗೆ ತೀವ್ರ ಹಿನ್ನೆಡೆಯುಂಟು ಮಾಡಿದೆ.

ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಬಿಜೆಪಿ ಹೈಕಮಾಂಡ್ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

ಬಿಜೆಪಿಯ ೧೭ ಮಂದಿ ಸಂಸದರ ಶಿಫಾರಸ್ಸು ಪತ್ರವನ್ನು ಹಿಡಿದುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಿವಾಸಕ್ಕೆ ಇಂದು ಯಡಿಯೂರಪ್ಪ ತೆರಳಿದ್ದರು. ಅವರಲ್ಲಿ ೧೪ ಮಂದಿ ಲೋಕಸಭಾ ಸದಸ್ಯರು, ಮೂರು ಮಂದಿ ರಾಜ್ಯ ಸಭಾ ಸದಸ್ಯರು ಸೇರಿದ್ದಾರೆ. ಇವರಲ್ಲಿ ಗಣಿ ರೆಡ್ಡಿ ಪಡೆಯ ಸಂಸದರಾದ ಜೆ. ಶಾಂತಾ, ಸಣ್ಣ ಫಕೀರಪ್ಪ ಅವರೂ ಕೂಡ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಶಿಫಾರಸ್ಸು ಮಾಡಿರುವುದು ವಿಶೇಷವಾಗಿದೆ.

ಒಟ್ಟು ೨೫ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಯಡಿಯೂರಪ್ಪ ಇಂದು ಹೈಕಮಾಂಡ್ ಭೇಟಿಯಾದ ಸಂದರ್ಭದಲ್ಲಿ, ನಿಮ್ಮ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಹೊರ ಬನ್ನಿ. ನಂತರ ನಿಮಗೆ ಸೂಕ್ತ ಸ್ಧಾನಮಾನ ಕಲ್ಪಿಸಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಯಿಸಿದ ಯಡಿಯೂರಪ್ಪ, ತಮ್ಮ ಮೇಲಿನ ಪ್ರಕರಣಗಳಿಂದ ಮುಕ್ತರಾಗಲು ೧೦ ರಿಂದ ೧೫ ವರ್ಷಗಳು ಬೇಕಾಗುತ್ತವೆ. ಅಲ್ಲಿಯ ತನಕ ಸುಮ್ಮನೆ ಕೂರಲು ಸಾಧ್ಯವೆ ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಪ್ರಶ್ನಿಸಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.

ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಅವರನ್ನೂ ಕೂಡ ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದು, ಸುಮಾರು ಹತ್ತು ನಿಮಿಷಗಳ ಕಾಲ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಯನ್ನು ಅವರಿಗೆ ವಿವರಿಸಿದ್ದಾರೆ. ಆಗ ಯಾವುದೇ ಮಾತನ್ನಾಡದ ಅಡ್ವಾಣಿ, ಪಕ್ಷದ ಅಧ್ಯಕ್ಷರೊಂದಿಗೆ [ ಗಡ್ಕರಿ ] ಸಮಾಲೊಚನೆ ಮಾಡುವಂತೆ ಸಲಹೆ ನೀಡಿದ್ದಾರೆ. 

ಯಡಿಯೂರಪ್ಪ ಅವರ ಆಪ್ತ ಮೂಲಗಳ ಪ್ರಕಾರ, ವರಿಷ್ಠರು ಮೂರು ತಿಂಗಳ ಕಾಲ ಕಾಯುವಂತೆ ಸಲಹೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸಂಸದ ಡಿ.ಬಿ. ಚಂದ್ರೇಗೌಡರು ಹೇಳುವಂತೆ ಒಂದು ತಿಂಗಳ ಕಾಲ ಕಾಯುವಂತೆ ವರಿಷ್ಠರು ಸಲಹೆ ನೀಡಿದ್ದಾರೆ.

ಇದೇ ೨೨ ರಂದು ನಡೆಯಲಿರುವ ಮೇಲ್ಮನೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸ್ಪರ್ಧಿಸಿರುವ ಸಂದರ್ಭದಲ್ಲಿ ಯಡಿಯೂರಪ್ಪ ಈ ರೀತಿ ಒತ್ತಡ ತಂತ್ರಗಳನ್ನು ತಂದಿರುವುದು ಕೂಡ ಪಕ್ಷದ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲೀ, ಇಲ್ಲವೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನಾಗಲೀ ನೀಡಲು ವರಿಷ್ಠರು ಸಿದ್ಧರಿಲ್ಲ. ಏಕೆಂದರೆ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರುವ ೨೦೧೩ ರಲ್ಲಿ ನಡೆಯಲಿದೆ. ಸಧ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದೂ ಅಲ್ಲದೇ ಪಕ್ಷದ ಅಧ್ಯಕ್ಷ ಹುದ್ದೆ ಮುಖ್ಯಮಂತ್ರಿ ಹುದ್ದೆಗಿಂತ ದೊಡ್ಡದು ಎನ್ನುವ ಅಭಿಪ್ರಾಯಕ್ಕೆ ಬಂದಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ ಉಪಾಧ್ಯಕ್ಷ ಹುದ್ದೆ ನೀಡುವ ಆಹ್ವಾನವನ್ನು ವರಿಷ್ಠರು ಕೊಟ್ಟಿದ್ದಾರೆ ಎಂದು ಯಡಿಯೂರಪ್ಪ ಅವರ ಆಪ್ತರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಅದೂ ಪಕ್ಷದ ವರಿಷ್ಠ ನಾಯಕ ಎಲ್.ಕೆ. ಅಡ್ವಾಣಿ ಒಪ್ಪಿದರೆ ಮಾತ್ರ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಬಹುದು. ಉಳಿದಂತೆ ಬೇರೆ ಯಾವುದೇ ಪರ್ಯಾಯ ಮಾರ್ಗ ನಮ್ಮ ಮುಂದೆ ಇಲ್ಲ ಎಂದು ಸ್ವತ: ಗಡ್ಕರಿ ಅವರೇ ಹೇಳಿದ್ದಾರೆ. ಆದರೆ ಇದಕ್ಕೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿರುವುದು ಅವರಿಗೆ ಮತ್ತೊಂದು ಹಿನ್ನೆಡೆಯಾಗಿ ಪರಿಣಮಿಸಿದೆ. 

ಕಂಡೂರಿ ಹಾಗೂ ಇತರರಿಗೆ ನೀಡಿದಂತೆ ಉಪಾಧ್ಯಕ್ಷ ಹುದ್ದೆಯನ್ನು ಹೆಚ್ಚುವರಿಯಾಗಿ ಸೃಷ್ಠಿಸಲು ಅವಕಾಶವಿದೆ. ಆದರೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸೃಷ್ಠಿಸಲು ಸಾದ್ಯವಿಲ್ಲ. ನಿಮ್ಮ ವಿರುದ್ಧದ ಆರೋಪಗಳೆಲ್ಲ ಇತ್ಯರ್ಥವಾದ ನಂತರ ಮುಖ್ಯಮಂತ್ರಿ ಮಾಡಿ ನಿಮ್ಮ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದು ಎಂದು ಯಡಿಯೂರಪ್ಪ ಅವರಿಗೆ ವರಿಷ್ಠರು ಸ್ಪಷ್ಟಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸದಾನಂದಗೌಡರನ್ನು ನೀವೆ ಮುಖ್ಯಮಂತ್ರಿ ಮಾಡಿದ್ದೀರಿ ಅವರನ್ನು ಮೊದಲು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ವರಿಷ್ಠರು ತಾಕೀತು ಮಾಡಿದ್ದಾರೆ.

ಅನಂತಕುಮಾರ್ ವಿರೋಧ

ಯಡಿಯೂರಪ್ಪರಿಗೆ ಪಕ್ಷದಲ್ಲಿ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಪ್ರಮುಖ ಹುದ್ದೆ ನೀಡಬಾರದೆಂದು ಅನಂತಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪರ ವಿರುದ್ಧ ಇನ್ನೂ ಆರೋಪಗಳು ಇತ್ಯರ್ಥವಾಗಿಲ್ಲ. ಅದಕ್ಕೂ ಮುನ್ನ ಅವರಿಗೆ ಹುದ್ದೆ ನೀಡಿದರೆ, ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂದು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಳೆ ಚುನಾವಣೆಯಲ್ಲಿ ಜೆಡಿಎಸ್‌ನ ವಚನ ಭ್ರಷ್ಠತೆ, ಲಿಂಗಾಯಿತ ಮತಗಳ ಒಗ್ಗೂಡುವಿಕೆಯಾದರೂ ನಾವು ಗೆದ್ದಿದ್ದು ೧೧೦ ಸ್ಥಾನ ಮಾತ್ರ. ಇದೇ ಸ್ಥಿತಿಯಲ್ಲಿಯೇ ಆಗಲೂ ಇದ್ದ ಕಾಂಗ್ರೆಸ್ ಕಚ್ಚಾಟದ ನಡುವೆಯೂ ಗೆದ್ದಿದ್ದು ೮೦ ಸ್ಥಾನ. ಆಗ ಕಾಂಗ್ರೆಸ್‌ನಲ್ಲಿ ೩೫ ಜನ ೧೦೦೦ ಮತಗಳಿಗಿಂತ ಕಡಿಮೆ ಮತಗಳಲ್ಲಿ ಸೋತರು. ಈಗ ಯಡಿಯೂರಪ್ಪ ಅವರಿಂದಾಗಿ ಪಕ್ಷ ಸಾಕಷ್ಟು ಮುಜುಗರ ಅನುಭವಿಸಿದೆ. ಈ ರೀತಿ ಇರುವಾಗ ಅವರಿಗೆ ಮತ್ತೆ ಯಾವುದಾದರೂ ಹುದ್ದೆ ನೀಡಿದರೆ ಆಗುವ ಉಪಯೋಗವಾದರೂ ಏನೆಂದು ಅನಂತಕುಮಾರ್ ಬಣ ಪ್ರಶ್ನಿಸಿದೆ.

ಪಕ್ಷದ ಹೈಕಮಾಂಡ್ ಒಂದು ವೇಳೆ ಯಾವುದಾದರೂ ಹುದ್ದೆ ನೀಡಿದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅನಂತಕುಮಾರ್ ಬಣ ನೀಡಿದೆ. ಇದರಿಂದಾಗಿ ಪಕ್ಷದ ಹೈಕಮಾಂಡ್ ಸಂಕಷ್ಟಕ್ಕೆ ಒಳಗಾಗಿದೆ.

ಆದರೆ ಪಕ್ಷ ವರಿಷ್ಠರ ಮನವೊಲಿಸುವ ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಶುಕ್ರವಾರ ಸಹ ನವದೆಹಲಿಯಲ್ಲಿಯೇ ಇದ್ದು ವರೊಷ್ಠರ ಜತೆ ಚರ್ಚೆ ಮುಂದುವರೆಸಲು ನಿರ್ಧರಿಸಿದ್ದಾರೆ. 

ಎನ್.ಸಿ.ಪಿ. ಸಂಘಟನೆ ಚಿಂತನೆ

ಯಡಿಯೂರಪ್ಪ ಅವರ ಆಪ್ತ ಸಚಿವರೊಬ್ಬರ ಪ್ರಕಾರ, ರಾಜ್ಯದಲ್ಲಿ ಎನ್.ಸಿ.ಪಿ ಪಕ್ಷವನ್ನು ಸಂಘಟಿಸುವ ಆಲೋಚನೆಯಲ್ಲಿದ್ದಾರೆ. ಹೈಕಮಾಂಡ್ ಸಧ್ಯಕ್ಕೆ ಮುಖ್ಯಮಂತ್ರಿ ಹುದ್ದೆ ನೀಡುವ ಯಾವುದೇ ಸಾಧ್ಯತೆಗಳು ಇಲ್ಲವಾಗಿವೆ. ಒಂದು ವೇಳೆ ಈಶ್ವರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ತೆರವುಗೊಳಿಸಿದರೆ ಅವರಿಗೆ ಪರ್ಯಾಯ ವ್ಯವಸ್ಧೆ ಎನು ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಒಂದು ವೇಳೆ ಈಶ್ವರಪ್ಪ ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿದರೆ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕಾಗುತ್ತದೆ. ಅವರಿಗೆ ಗೃಹ ಇಲ್ಲವೆ ಕಂದಾಯದಂತಹ ಪ್ರಮುಖ ಖಾತೆ ನೀಡಬೇಕಾಗುತ್ತದೆ. ಹೀಗೆ ನೀಡಿದರೆ ಮುಖ್ಯಮಂತ್ರಿ [ ಸದಾನಂದಗೌಡ] ವಕ್ಕಲಿಗ ಸಮುದಾಯಕ್ಕೆ ಸೇರಲಿದ್ದಾರೆ. ಪಕ್ಷದ ಅಧ್ಯಕ್ಷ ಹುದ್ದೆ [ ಯಡಿಯೂರಪ್ಪ ] ವೀರಶೈವ ಸಮುದಾಯಕ್ಕೆ ಹಾಗೂ ಉಪ ಮುಖ್ಯಮಂತ್ರಿ [ ಈಶ್ವರಪ್ಪ ] ಕುರುಬ ಸಮುದಾಯಕ್ಕೆ ಸೇರಲಿದ್ದು, ಮುಂಬರುವ ಚುನಾವಣೆಗೆ ತೆರಳು ಸಹಕಾರಿಯಾಗಲಿದೆ. ಈ ಸೂತ್ರ ಅನುಸರಿಸಿದರೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎನ್ನುತ್ತಾರೆ.

ಆದರೆ ಬಿಜೆಪಿ ಹೈಕಮಾಂಡ್ ಈ ಸೂತ್ರಕ್ಕೆ ಒಪ್ಪಿಗೆ ಸೂಚಿಸುವ ಸ್ಧಿತಿಯಲ್ಲಿಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡು ಚುನಾವಣೆಗೆ ತೆರಳುವ ಆಲೋಚನೆಯಲ್ಲಿದ್ದಾರೆ. ಯಡಿಯೂರಪ್ಪ ಅವರನ್ನು ವಿರೋಧಿಸುವ ಸ್ಧಿತಿಯಲ್ಲಿ ಕಾಂಗ್ರೆಸ್ ನಾಯಕರಿಲ್ಲ. ಅವರೆಲ್ಲಾ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಒಂದು ವೇಳೆ ಚುನಾವಣಾ ಮೈತ್ರಿಯನ್ನು ವಿರೋಧಿಸಿದರೂ ಕೂಡ ದೆಹಲಿಯಲ್ಲಿ ತಮ್ಮ ಪ್ರಭಾವ ಬೀರಿ ಶರದ್ ಪವಾರ್ ಅವರು ಮೈತ್ರಿ ಮಾಡಿಸಲಿದ್ದಾರೆ ಎನ್ನವ ಯಡಿಯೂರಪ್ಪ ಅವರದ್ದಾಗಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಯಡಿಯೂರಪ್ಪ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಯಾವುದೇ ಕಾರ್ಯಸ್ರಚಿಯನ್ನು ಮುಂದಿಟ್ಟುಕೊಂಡು ದೆಹಲಿಗೆ ಬಂದಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನೂ ತಾವು ಕೇಳಿಲ್ಲ. ಪಕ್ಷವನ್ನು ಒಡೆಯುವ ಕುರಿತಂತೆ ಆಗಿರುವ ವರದಿಗಳು ಆಧಾರ ರಹಿತ. ಪಕ್ಷದ ಮುಖಂಡರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸದಾನಂದಗೌಡರು ಸ್ಪರ್ಧಿಸಿರುವ ಚುನಾವಣೆಯಲ್ಲೂ ಯಾವುದೇ ರೀತಿಯ ಪ್ರತೀಕೂಲವಾದ ವಾತಾವರಣವನ್ನು ಯಡಿಯೂರಪ್ಪ ಉಂಟು ಮಾಡುವ ಸಾಧ್ಯತೆಗಳಿಲ್ಲ. ಒಂದು ವೇಳೆ ಯಡಿಯೂರಪ್ಪ ಪಕ್ಷದ ವಿರುದ್ಧ ಕೆಲಸ ಮಾಡಿದರೆ ಯಡಿಯೂರಪ್ಪ ಸ್ಧಾನಕ್ಕೆ ವೀರಶೈವ ಸಮುದಾಯದ ಜಗದೀಶ ಶೆಟ್ಟರ್ ಅವರನ್ನು ತರಬೇಕಾಗುತ್ತದೆ ಎನ್ನುತ್ತಾರೆ ಆರ್.ಎಸ್.ಎಸ್. ಮುಖಂಡರೊಬ್ಬರು. ಅದಾಗದಿದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತದೆ. ಆಗ ಯಡಿಯೂರಪ್ಪ ಅವರಿಗೇ ಹೆಚ್ಚಿನ ರೀತಿಯಲ್ಲಿ ಹಾನಿಯಾಗುತ್ತಾರೆ ಎನ್ನುತ್ತಾರೆ.  

ಮುಖಪುಟ /ಸುದ್ದಿ ಸಮಾಚಾರ