ಮುಖಪುಟ /ಸುದ್ದಿ ಸಮಾಚಾರ

7 ವರ್ಷಗಳಲ್ಲಿ ಕೃಷ್ಣ 3ನೇ ಹಂತ ಮುಕ್ತಾಯ

basavaraj bommaiಬೆಂಗಳೂರು, ಡಿ.18: ಕೃಷ್ಣ ನ್ಯಾಯಾಧಿಕರಣದ ಐತೀರ್ಪಿನ ನಂತರವೂ ರಾಜ್ಯಕ್ಕೆ ದೊರೆಯಬೇಕಾದ ಹೆಚ್ಚುವರಿ ನೀರು ಪಡೆಯಲು ಹೋರಾಟ, ಸಮರೋಪಾದಿಯಲ್ಲಿ ಕೃಷ್ಣ ಮೇಲ್ದಂಡೆ ಕಾಮಗಾರಿಯನ್ನು ೭ ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ, ೨೦೧೪ರ ಹೊತ್ತಿಗೇ ಮೊದಲ ಹಂತದ ನೀರನ್ನು ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮೂಲಕ ಹರಿಸಲು ನಿರ್ಧಾರ, ಗುಣಮಟ್ಟದ ಕಾಮಗಾರಿಯ ಖಾತ್ರಿ ಇದು ಸರ್ಕಾರ ಇಂದು ವಿಧಾನಸಭೆಗೆ ನೀಡಿದ ಭರವಸೆ.

ವಿಧಾನಸಭೆಯಲ್ಲಿ ೬೯ರಡಿ ಕೃಷ್ಣ ನದಿ ನೀರಿನ ಹಂಚಿಕೆ ಹಾಗೂ ಕಾಮಗಾರಿಗಳ ಕುರಿತಂತೆ ನಿನ್ನೆಯಿಂದಲೂ ನಡೆದ ಚರ್ಚೆಗೆ ಉತ್ತರ ನೀಡಿದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಯೋಜನೆಯ ಜಾರಿಗೆ ಅಗತ್ಯವಾಗಿರುವ ಹಣವನ್ನು ಸರ್ಕಾರ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿಯಾದರೂ ಹಣ ಹೊಂದಿಸುತ್ತದೆ.

ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಗಿಸಲು ಯೋಜನೆ ರೂಪಿಸುತ್ತದೆ. ಕೃಷ್ಣ ಜಲ ಹಂಚಿಕೆಯಲ್ಲಿನ ಕೆಲವು ವಿವರಣೆಗಳ ಬಗ್ಗೆ ನಿಗಾ ಇಡಲು, ಯೋಜನೆಗಳ ಜಾರಿ ಕುರಿತಂತೆ ನಿಗಾ ಇಡಲು ಪ್ರತ್ಯೇಕ ಸಮಿತಿ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದರು. ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಪ್ರತಿ ತಿಂಗಳೂ ಪರಾಮರ್ಶೆ ನಡೆಸಲಾಗುವುದು. ಅದೇ ರೀತಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ೩ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಪ್ರತಿಪಕ್ಷ ಕಾಂಗ್ರೆಸ್‌ನ ಉಪ ನಾಯಕ ಟಿ.ಬಿ. ಜಯಚಂದ್ರ ಯೋಜನೆಯ ಜಾರಿಗೆ ಸಮಗ್ರವಾದ ಯೋಜನೆ (ಮಾಸ್ಟರ್ ಪ್ಲಾನ್) ರೂಪಿಸಬೇಕು ಎಂದು ನೀಡಿದ ಸಲಹೆಗೆ ಈಗಾಗಲೇ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರಚಿಸಲು ಸಮಿತಿಯನ್ನು ರಚಿಸಲು ಸಿದ್ಧತೆ ನಡೆಸಿದೆ. ಆದರೆ ರಾಜ್ಯ ವಿವರಣೆ ಕೋರಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಇನ್ನೂ ಹೆಚ್ಚಿನ ನೀರು ದೊರಕುವ ಸಾಧ್ಯತೆಗಳು ಇರುವ ಕಾರಣ, ಆ ಬಗ್ಗೆ ವಿವರಣೆ ಬಂದ ಬಳಿಕ ನೀರಿನ ಲಭ್ಯತೆ ಆಧರಿಸಿ ಯೋಜನೆ ರೂಪಿಸುವುದಾಗಿ ಹೇಳಿದ ಅವರು, ೫೦ ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದರು.

ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೆ ಹಂತದಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಮುಳವಾಡ ಏತ ನೀರಾವರಿ ಯೋಜನೆ, ಮಲ್ಲಾಬಾದ್ ಏತ ನೀರಾವರಿ ಯೋಜನೆ, ರಾಮಪುರ ಏತ ನೀರಾವರಿ ಯೋಜನೆ, ನಾರಾಯಣ ಬಲದಂಡೆ ಕಾಲುವೆ, ಕೊಪ್ಪಳ ಏತ ನೀರಾವರಿ ಯೋಜನೆ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಆಧುನಿಕ ತಂತ್ರಜ್ಞಾನ, ಲೈಡಾರ್, ಎಲೆಕ್ಟ್ರೋ ಫ್ಲೋ ವ್ಯವಸ್ಥೆ, ಹೊಸ ನಿರ್ಮಾಣ ಯಂತ್ರೋಪಕರಣ ವ್ಯವಸ್ಥೆ, ವಿಶೇಷ ಗುಣಮಟ್ಟ ನಿಯಂತ್ರಣ ಭದ್ರತೆ, ವಿಶೇಷ ಕಾರ್ಯ ಪಡೆ ರಚನೆಗೆ ಸರ್ಕಾರ ಮುಂದಾಗಿದೆ ಎಂದರು.

ಕೇಂದ್ರ ಸರ್ಕಾರ ಹೊಸ ಭೂ ಸ್ವಾಧೀನ ಕರಡು ಮಸೂದೆ ತಂದಿದೆ. ಇದರ ಜೊತೆಗೆ ವಿಶ್ವ ಬ್ಯಾಂಕ್ ಸಹ ಒಂದು ನೀತಿ ರೂಪಿಸಿದೆ. ನೆರೆಯ ರಾಜ್ಯವಾದ ಮಹಾರಾಷ್ಟ್ರ ಕೂಡ ರೂಪಿಸಿರುವ ಕರಡು ಮಸೂದೆಯನ್ನು ರಾಜ್ಯದ ಅಧಿಕಾರಿಗಳು ಪರಾಮರ್ಶಿಸುತ್ತಿದ್ದಾರೆ. ಹಲವಾರು ನೀರಾವರಿ ತಜ್ಞರು, ತಂತ್ರಜ್ಞರು ಹಾಗೂ ಸರ್ಕಾರೇತರ ಸಂಸ್ಥೆಗಳು ಕೂಡ ಈ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿವೆ ಎಂದರು.

ರಾಜ್ಯ ಸರ್ಕಾರ ಕೃಷ್ಣ ನದಿ ನೀರಿನಲ್ಲಿ ರಾಜ್ಯಕ್ಕೆ ದೊರಕುವ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ಬದ್ಧವಾಗಿದೆ. ಭೂಸ್ವಾಧೀನ, ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವುದು ಮತ್ತು ಕೃಷ್ಣ ಮೂರನೇ ಹಂತದ ನೀರಿನ ಬಳಕೆ ನಮಗೆ ಸವಾಲಾಗಿ ಪರಿಣಮಿಸಿದ್ದು, ಈ ಸವಾಲನ್ನು ಪರಿಹಾರವಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

ನೀವು ಪ್ರತಿಪಕ್ಷದವರು, ಆಡಳಿತ ಪಕ್ಷದ ಸದಸ್ಯರು ಈ ವಿಚಾರದಲ್ಲಿ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಿದ್ದೀರಿ. ಇದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾವು ನ್ಯಾಯಾಧಿಕರಣ ಹೇರಿರುವ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲು ಪ್ರಯತ್ನಿಸಿ ರಾಜ್ಯಕ್ಕೆ ದೊರಕಬೇಕಿರುವ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ ಎಂದು ಹೇಳಿದರು.

ಜಲಾಶಯ ಎತ್ತರಿಸಲು ಭೂಮಿ ಸ್ವಾಧೀನ ಅನಿವಾರ್ಯ, ನಾಲೆಗಳ ನಿರ್ಮಾಣಕ್ಕೆ, ಪೂರಕ ಕಾಮಗಾರಿಗಳಿಗೂ ಭೂ ಸ್ವಾಧೀನ ಆಗಲೇ ಬೇಕು. ಈ ನಿಟ್ಟಿನಲ್ಲಿ ಯಾವುದೇ ತಕರಾರುಗಳಿಗೆ ಅವಕಾಶ ಆಗದಂತೆ ಭೂಮಿ ಸ್ವಾಧೀನ ಪಡಿಸಿಕೊಂಡು ರೈತರಿಗೆ ಅಗತ್ಯ ಹಾಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಇದರ ಜೊತೆಗೆ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಒದಗಿಸಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಯೋಜನೆಗೆ ೧೭ಸಾವಿರ ಕೋಟಿ ಅಲ್ಲ, ೨೫ ಸಾವಿರ ಕೋಟಿ ಆದರೂ ಅಡ್ಡಿ ಇಲ್ಲ, ಶಾಶ್ವತವಾದ ಕಾಮಗಾರಿ ನಡೆಸಲಾಗುವುದು ಎಂದರು.

ನೇಮಕಾತಿ: ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ವಿವಿಧ ಇಲಾಖೆಗಳಿಗೆ ನೇಮಕಾತಿ ಅನಿವಾರ್ಯ. ಈ ನಿಟ್ಟಿನಲ್ಲಿಯೂ ಸರ್ಕಾರ ಚಿಂತಿಸಿದ್ದು, ೭೨೦ ಸಹಾಯಕ ಎಂಜಿನಿಯರ್, ೬೪೦ ಕಿರಿಯ ಎಂಜಿನಿಯರ್ ಅವರ ಪ್ರತ್ಯೇಕ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದರು.

ಸಿದ್ದರಾಮಯ್ಯ, ಎಸ್.ಕೆ. ಬೆಳ್ಳುಬ್ಬಿ, ಎಂ.ಬಿ.ಪಾಟೀಲ್, ಅಪ್ಪಾಜಿ ನಾಡಗೌಡ, ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಸದಸ್ಯರು ಈ ವಿಚಾರದ ಬಗ್ಗೆ ಮಾತನಾಡಿ ನೀರಾವರಿ ಯೋಜನೆಯ ಮಹತ್ವ ಹಾಗೂ ಸರ್ಕಾರ ಕೃಷ್ಣ ನದಿ ನೀರಿನ ಸದ್ಬಳಕೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದರು.  

ಮುಖಪುಟ /ಸುದ್ದಿ ಸಮಾಚಾರ