ಮುಖಪುಟ /ಸುದ್ದಿ ಸಮಾಚಾರ 

ಎಲ್ಲ ಕ್ಷೇತ್ರದಲ್ಲೂ ವಿವಾದ - ರಾಜ್ಯಪಾಲರ ವಿಷಾದ

Satyan award functionಬೆಂಗಳೂರು, ಡಿ. ೧೮: ಇಂದು ಆಡಳಿತ ವ್ಯವಸ್ಥೆಯ ನಾಲ್ಕು ಪ್ರಮುಖ ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗ ವಿವಾದಕ್ಕೆ ಈಡಾಗುತ್ತಿವೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ನ್ಯೂಸ್ ಫೋಟೋಸ್ ಮತ್ತು ಚುರುಮುರಿ.ಕಾಂ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ಛಾಯಾಗ್ರಾಹಕರಾದ ವಿಘ್ನೇಶ್ವರ ಆಚಾರ್ಯ, ಕೆ. ಗೋಪಿನಾಥನ್, ನೇತ್ರರಾಜು, ಬಾನುಪ್ರಕಾಶ್, ಚಂದರ್, ರಿಗ್ರೆಟ್ ಅಯ್ಯರ್ ಹಾಗೂ ಎಂ.ಎಸ್.ಗೋಪಾಲ್ ಅವರಿಗೆ ಖ್ಯಾತ ಪತ್ರಿಕಾ ಛಾಯಾಗ್ರಾಹಕ ದಿವಂಗತ ಟಿ.ಎಸ್. ಸತ್ಯನ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಯಾವ ಕ್ಷೇತ್ರ ವಿವಾದಕ್ಕೆ ಸಿಲುಕಬಾರದೋ ಅದೂ ಇಂದು ವಿವಾದಕ್ಕೆ ಸಿಲುಕುತ್ತಿದೆ ಎಂದು ವಿಷಾದಿಸಿದರು.

ಯಾವುದೇ ಕ್ಷೇತ್ರದಲ್ಲಿ ಸಿದ್ಧಾಂತ, ಪ್ರಾಮಾಣಿಕತೆ, ವೃತ್ತಿಗೌರವ ಇರಬೇಕು. ಆಯಾ ಕ್ಷೇತ್ರದಲ್ಲಿ ಜನತೆ ತಮ್ಮ ವೃತ್ತಿಗೌರವ ಹಾಗೂ ಘನತೆಯನ್ನು ಕಾಪಾಡಬೇಕು ಎಂದ ಅವರು, ಈ ನಿಟ್ಟಿನಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.

ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯವರದಿಗಳು ಎಂದೆಂದಿಗೂ ಅತ್ಯುತ್ತಮ. ಅವುಗಳು ಬೀರುವ ಪ್ರಮಾಣ ಸಮಾಜಕ್ಕೆ ನೀಡುವ ಕೊಡುಗೆಯೂ ಹೆಚ್ಚಿನದು ಎಂದ ಅವರು, ವರದಿಗಳಿಗೆ ಪುಷ್ಟಿ ನೀಡುವ ಛಾಯಾಚಿತ್ರಗಳ ಪ್ರಭಾವವೂ ಅಸಾಮಾನ್ಯವಾದುದು ಎಂದರು.

ಒಂದು ಸಾವಿರ ಪದಗಳಲ್ಲಿ ಹೇಳಲಾಗದ ವಿಷಯವನ್ನು ಒಂದು ಚಿತ್ರ ವಿವರಿಸುತ್ತದೆ. ಮಾಧ್ಯಮಗಳ ಸಮಗ್ರ ವರದಿಗೆ ಚಿತ್ರಗಳು ಕನ್ನಡಿಯಂತೆ ಎಂದು ಅಭಿಪ್ರಾಯಪಟ್ಟರು.  

ಸಮಾರಂಭದಲ್ಲಿ ಕೆ.ಪಿ.ಎನ್.ನ ಸಾಗ್ಗೆರೆ ರಾಮಸ್ವಾಮಿ, ಸಾಗ್ಗೆರೆ ರಾಧಾಕೃಷ್ಣ, ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಪ್ರಧಾನ ಸಂಪಾದಕ ವೆಂಕಟನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.  

 

ಮುಖಪುಟ /ಸುದ್ದಿ ಸಮಾಚಾರ