ಮುಖಪುಟ /ಸುದ್ದಿ ಸಮಾಚಾರ 

ಮಾಸಾಂತ್ಯದಲ್ಲಿ ಸಂಪುಟ ವಿಸ್ತರಣೆ- ಸದಾನಂದಗೌಡ

sadanandagowda,chiefminister, ಬೆಂಗಳೂರು, ಡಿ. ೧೭: ವಿಧಾನಪರಿಷತ್ ಚುನಾವಣೆಯಲ್ಲಿ ಸದಾನಂದಗೌಡ ಗೆಲ್ಲುತ್ತಾರೆಯೇ, ಸರ್ಕಾರ ಉಳಿಯುತ್ತದೆಯೇ ಎಂಬ ಚರ್ಚೆ ಆರಂಭವಾಗಿರುವ ಪ್ರಸಕ್ತ ಸಂದರ್ಭದಲ್ಲಿ, ಈ ಮಾಸಾಂತ್ಯದಲ್ಲಿ  ತಮ್ಮ ಸಚಿವ ಸಂಪುಟವನ್ನು ವಿಸ್ತರಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಚ್ಚರಿ ಮೂಡಿಸಿದ್ದಾರೆ.

ನಗರದ ಚಿತ್ರಕಲಾ ಪರಿಷತ್ತಿನಲ್ಲಿಂದು ನೂತನ ಸಭಾಂಗಣದ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ ೨೭ ಅಥವಾ ೨೮ರಂದು ದೆಹಲಿಗೆ ತೆರಳಿ, ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದರು.

ಯಾರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರು ಯಾರನ್ನು ಸೇರಿಸಿಕೊಳ್ಳಲು ಸೂಚಿಸುತ್ತಾರೋ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವೆ ಎಂದು ಅವರು ಹೇಳಿದರು.

ಸಂಪುಟ ವಿಸ್ತರಣೆ ವಿಚಾರದಲ್ಲಿ ತಮ್ಮ ಪಾತ್ರವೇನಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ ಅವರು, ಈ ವಿಷಯದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಹೇಳಿದರು.

ಗೆಲ್ಲುವ ವಿಶ್ವಾಸ - ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಇದೇ ತಿಂಗಳ ೨೨ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ತಾವು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಬಿಜೆಪಿಯ ಚಿನ್ಹೆಯಡಿ ಆಯ್ಕೆಯಾಗಿರುವ ಎಲ್ಲ ಶಾಸಕರೂ ತಮಗೆ ಮತ ಚಲಾಯಿಸುತ್ತಾರೆ. ಹೀಗಾಗಿ ಸೋಲಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಬಹುಮತದಿಂದ ಆಯ್ಕೆಯಾಗುತ್ತೇನೆ ಎಂದು ಹೇಳಿದರು.

ನಿನ್ನೆ ವಿಧಾನಸಭೆಯಲ್ಲಿ ಧಾರ್ಮಿಕ ದತ್ತಿ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಸೋಲಾಗಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲೂ ಇಂಥ ಸ್ಥಿತಿ ನಿರ್ಮಾಣವಾಗುತ್ತದೆಯೇ ಎಂದು ಪ್ರಶ್ನಿಸಿದಾಗ, ಬಿಜೆಪಿಯ ಶಾಸಕರಷ್ಟೇ ಅಲ್ಲ ಇತರ ಶಾಸಕರೂ ತಮಗೆ ಮತ ಚಲಾಯಿಸುತ್ತಾರೆ ಎಂದರು.

ಸಾಮಾನ್ಯವಾಗಿ ಶುಕ್ರವಾರಗಳಂದು ಶಾಸಕರು ತಮ್ಮ ಕ್ಷೇತ್ರಕ್ಕೆ, ಊರಿಗೆ ತೆರಳುವುದು ವಾಡಿಕೆ. ಕಳೆದ ೧೦ ದಿನಗಳಿಂದ ಕಲಾಪದಲ್ಲಿ ಪಾಲ್ಗೊಂಡಿದ್ದ ಶಾಸಕರು ನಿನ್ನೆ ಶುಕ್ರವಾರವಾದ ಕಾರಣ ಮಧ್ಯಾಹ್ನದ ಮೇಲೆ ಊರಿಗೆ ತೆರಳಿದ್ದರು ಹೀಗಾಗಿ ವಿಧೇಯಕಕ್ಕೆ ಸೋಲಾಯಿತು ಎಂದು ಸಮಜಾಯಿಷಿ ನೀಡಿದರು.

ಅದ್ಭುತ ಅಧಿವೇಶನ - ಕಳೆದ ಕೆಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಧಿವೇಶನ ಅದ್ಭುತವಾಗಿ ನಡೆದಿದೆ. ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದರು.

ಆರೋಪಕ್ಕೆ ಆಧಾರವಿಲ್ಲ - ಪ್ರತಿಪಕ್ಷಗಳು ನಾವು ಪಲಾಯನ ಮಾಡುತ್ತಿರುವುದಾಗಿ ಹೇಳುತ್ತಿರುವುದರಲ್ಲಿ ಅರ್ಥವೇ ಇಲ್ಲ. ಇದು ನಿರಾಧಾರ ಆರೋಪ ಎಂದ ಅವರು, ಈ ಬಾರಿ ಅಧಿವೇಶನದಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ ಎಂಬುದನ್ನು ಪ್ರತಿಪಕ್ಷಗಳು ತಿಳಿಸಲಿ ಎಂದು ಸವಾಲು ಹಾಕಿದರು.

ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆದಿದೆ. ಸರ್ಕಾರ ಯಾವುದೇ ಪಲಾಯನ ಮಾಡದೆ ಎಲ್ಲ ವಿಚಾರಕ್ಕೂ ಉತ್ತರ ನೀಡಿದೆ. ಆದರೆ ಮೇಲ್ಮನೆಯಲ್ಲಿ ನಾನೇ ಉತ್ತರ ಕೊಟ್ಟ ಪ್ರಶ್ನೆಗೂ ಮತ್ತೆ ಕೆಳಮನೆಯಲ್ಲಿ ಪ್ರತಿಷ್ಠೆಯ ಸಲುವಾಗಿ ಚರ್ಚೆ ಮಾಡಬೇಕು ಎಂಬ ನಿಲುವು ಸರಿಯಲ್ಲ. ಪ್ರತಿಪಕ್ಷಗಳು ಇಂಥ ಧೋರಣೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.  

ಮುಖಪುಟ /ಸುದ್ದಿ ಸಮಾಚಾರ