ಮುಖಪುಟ /ಸುದ್ದಿ ಸಮಾಚಾರ 

ಮೇಲ್ಮನೆ, ಕೆಳಮನೆಗಳ ಬದಲಾದ ರಾಜಕೀಯ..

* ಟಿ.ಎಂ.ಸತೀಶ್

Assemblyರಾಜ್ಯ ವಿಧಾನಸಭೆಗೆ ೨೦೦೮ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ಕಳೆದ ಮೂರು ವರ್ಷಗಳಲ್ಲಿ ನಡೆದುದೆಲ್ಲವೂ ಚುನಾವಣೆ ಪರ್ವವೆ. ೨೦೦೯ರಲ್ಲಿ ಲೋಕಸಭೆ ಚುನಾವಣೆ, ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ, ತದನಂತರ ಬಿಬಿಎಂಪಿ ಚುನಾವಣೆ, ಮತ್ತೆ ರಾಜ್ಯಸಭಾ ಚುನಾವಣೆ. ಈ ಎಲ್ಲದರ ನಡುವೆ ಸುಮಾರು ೨೧ ವಿಧಾನಸಭಾ ಉಪ ಚುನಾವಣೆ. 

ಈಗ ರಾಜ್ಯದಲ್ಲಿ ಮತ್ತೊಂದು ಉಪ ಚುನಾವಣೆ ಬಂದಿದೆ. ನಿಯಮದ ರೀತ್ಯ ಮುಖ್ಯಮಂತ್ರಿಯಾದ ೬ ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರಾಗುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಶಂಕರಪ್ಪ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿದ್ದು, ಇದೇ ೨೨ರಂದು ಮತದಾನ ನಡೆಯಲಿದೆ. 

ವಾಸ್ತವವಾಗಿ ಸದಾನಂದಗೌಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ೨ ಉಪ ಚುನಾವಣೆ ನಡೆದಿದೆ. ಒಂದು ಕೊಪ್ಪಳದಲ್ಲಿ ಮತ್ತೊಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ. ಆದರೆ ಈ ಎರಡು ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಧೈರ್ಯವನ್ನು ಮಾಡದ ಸದಾನಂದಗೌಡ ಈಗ ಹಿಂಬಾಗಿಲ ಮೂಲಕ ವಿಧಾನಮಂಡಳ ಪ್ರವೇಶಿಸಲು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 

ಇದೇನು ಹಿಂಬಾಗಿಲ ಪ್ರವೇಶವೆಂಬ ಪದಪ್ರಯೋಗ ಎಂಬ ನಿಮ್ಮ ಪ್ರಶ್ನೆ ಸಹಜವೇ. ಇತ್ತೀಚಿನ ವರ್ಷಗಳಲ್ಲಿ ಹೌಸ್ ಆಫ್ ಇಂಟಲೆಕ್ಚುಯಲ್ಸ್ ಚಿಂತಕರ ಚಾವಡಿ, ಹಿರಿಯರ ಮನೆ ಎಂದೇ ಖ್ಯಾತವಾದ ವಿಧಾನಪರಿಷತ್ತು ಮತ್ತು ರಾಜ್ಯಸಭೆಯ ಪ್ರವೇಶವೂ ರಾಜಕೀಯಮಯವಾಗಿದೆ. ಸಂದವಿಧಾನ ನಿರ್ಮಾತೃಗಳ ಆಶಯಗಳು ದೂರವಾಗಿ ಇಲ್ಲಿಯೂ ರಾಜಕೀಯ ಮೇಲಾಟವೇ ಪ್ರಧಾನವಾಗಿದೆ. 

ಭಾರತೀಯ ಶಾಸಕಾಂಗ ವ್ಯವಸ್ಥೆಯಲ್ಲಿ ಮೇಲ್ಮನೆ ಅರ್ಥಾತ್ ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಮಹತ್ವದ ಸ್ಥಾನವಿದೆ. ಕೆಳಮನೆಗೆ ಅಂದರೆ ವಿಧಾನಸಭೆ ಮತ್ತು ಲೋಕಸಭೆಗೆ ನೇರವಾಗಿ ಜನರಿಂದ ಆಯ್ಕೆಯಾಗುವ ಶಾಸಕರು ಅಥವಾ ಸಂಸದರು ಶಾಸನಗಳನ್ನು ರೂಪಿಸುವ ಸಂದರ್ಭದಲ್ಲಿ ಏನಾದರೂ ಓರೆಕೋರೆಗಳಿದ್ದರೆ ಅದನ್ನು ತಿದ್ದಿ, ಅಂಥ ಶಾಸನಗಳ ಜಾರಿಯಿಂದ ಶ್ರೀಸಾಮಾನ್ಯರಿಗೆ ಅಥವಾ ರಾಜ್ಯದ ಹಿತಕ್ಕೆ ತೊಂದರೆಯಾಗದಂತೆ ರಕ್ಷಿಸುವುದು ಮೇಲ್ಮನೆಯ ಜವಾಬ್ದಾರಿಯಾಗಿದೆ. 

ಹೀಗಾಗಿಯೇ ಮೇಲ್ಮನೆಯಲ್ಲಿ ಶಾಸನ ರಚನೆಯ ಬಗ್ಗೆ ಅರಿವಿರುವ, ರಾಷ್ಟ್ರಹಿತದ ಕಾಳಜಿ ಇರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದವರು ಇರಬೇಕು ಎಂಬುದು ಸಂವಿಧಾನದ ಆಶಯ. ಹೀಗಾಗಿಯೇ ಮೇಲ್ಮನೆಗೆ ಯಾರನ್ನೇ ಆಯ್ಕೆ ಮಾಡಬೇಕಾದರೂ ಅದಕ್ಕೆ ಕೆಲವು ಮಾನದಂಡಗಳನ್ನು ರೂಪಿಸಿದ್ದರು. ಮೇಲ್ಮನೆಗೆ ಆರಿಸಿಬರುವವರು ಪ್ರಜಾಪ್ರಭುತ್ವದ, ಶಾಸಕಾಂಗದ ಔನ್ನತ್ಯವನ್ನು, ಘನತೆಯನ್ನು ಕಾಪಾಡುವಂಥವರಾಗಿರಬೇಕು. ಅವರ ಅಪೂರ್ವವಾದ ಅನುಭವ, ಮೇಧಾವಿಗಳ ಅಪೂರ್ವ ಚಿಂತನೆಗಳು, ವಿಚಾರಧಾರೆ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾದ ಶಾಸನ ರಚನೆಗೆ ದೊರಕಲಿ ಎಂಬುದು ಈ ವ್ಯವಸ್ಥೆ ರೂಪಿಸಿದವರ ಮಹತ್ವಾಕಾಂಕ್ಷೆಯೂ ಆಗಿತ್ತು. 

ಹೀಗಾಗಿಯೇ ಮೇಲ್ಮನೆಗೆ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರಂಥ ಮೇಧಾವಿಗಳನ್ನು, ಜಾಕೀರ್ ಹುಸೇನ್‌ರಂಧ ದಿಗ್ಗಜರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದರು. ಆದರೆ ಇಂದು ಮೇಲ್ಮನೆ ಚುನಾವಣೆ ಪುನರ್ವಸತಿ ತಾಣಗಳಾಗಿವೆ. ಇಲ್ಲವೇ ಶಾಸನಸಭೆಗಳಿಗೆ ಪ್ರಭಾವಿಗಳ ಹಿಂಭಾಗಿಲ ಪ್ರವೇಶಕ್ಕೆ ದ್ವಾರವಾಗಿ ಪರಿಣಮಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಶಾಸಕ ಸ್ಥಾನ ತದನಂತರ ಮಂತ್ರಿ ಸ್ಥಾನ ಕೊಡಿಸುವ ವೇದಿಕೆ ಆಗಿದೆ. ಇದಕ್ಕೆ ರಾಜ್ಯ ಸಚಿವ ಸಂಪುಟದಲ್ಲಿರುವ ವಿ.ಸೋಮಣ್ಣ ಜ್ವಲಂತ ಉದಾಹರಣೆ. 

ಇದೇ ೨೨ರಂದು ನಡೆಯಲಿರುವ ಚುನಾವಣೆಯ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ರಾಜ್ಯದ ಮುಖ್ಯಮಂತ್ರಿಯಾದವರು ನಿರ್ಭೀತಿಯಿಂದ ನೇರ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವುದೇ ಸೂಕ್ತ. ಪ್ರಧಾನಿಯವರೇ ನೇರ ಚುನಾವಣೆಗೆ ಸ್ಪರ್ಧಿಸದೆ ರಾಜ್ಯಸಭೆ ಸದಸ್ಯರಾಗಿರುವಾಗ ನಾವೇಕೆ ಸ್ಪರ್ಧಿಸಬೇಕು ಎಂದು ಪ್ರಶ್ನಿಸಿ ಬಾಯಿ ಮುಚ್ಚಿಸಲು ಇವರಿಗೆ ಅವಕಾಶ ಇದೆ. ಆದರೆ, ರಾಜ್ಯದ ಸಮಸ್ತರನ್ನು ಪ್ರತಿನಿಧಿಸುವ, ಆಳುವ ವ್ಯಕ್ತಿ ಜನರಿಂದ ಆರಿಸಿ ಬರುವುದು ಸೂಕ್ತ ತಾನೆ. 

ಸದಾನಂದಗೌಡ ಅವರು ಮುಖ್ಯಮಂತ್ರಿ ಆದ ಬಳಿಕ ವಿಧಾನಸಭೆಯ ಯಾವುದೇ ಸ್ಥಾನಕ್ಕೆ ಉಪ ಚುನಾವಣೆ ನಡೆಯದಿದ್ದಿದ್ದರೆ ವಿಧಾನಪರಿಷತ್ತಿನ ಮೂಲಕ ಆಯ್ಕೆಯಾಗಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಎರಡು ಚುನಾವಣೆ ನಡೆದರೂ ಸ್ಪರ್ಧಿಸುವ ಧೈರ್ಯತೋರದೆ ವಿಧಾನಪರಿಷತ್ ಸದಸ್ಯರ ರಾಜೀನಾಮೆ ಕೊಡಿಸಿ ಸ್ಪರ್ಧಿಸಿ ಆಯ್ಕೆ ಆಗುವ ಪ್ರಯತ್ನ ಹಿಂಬಾಗಿಲ ಪ್ರವೇಶ ತಾನೆ. 

ಈ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಮುಖ್ಯಮಂತ್ರಿ ಸದಾನಂದಗೌಡ ಗೆಲುವು ಖಚಿತ. ಕಾರಣ ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ೧೨೦ ಸದಸ್ಯ ಬಲ ಬಿಜೆಪಿಗಿದೆ. ಈ ಎಲ್ಲರೂ ಬಿಜೆಪಿಯ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸಿದರೆ ಸೋಲಿಸಲು ಯಾರಿಗೂ ಸಾಧ್ಯವಿಲ್ಲ. 

ಆದರೆ ಪ್ರಸಕ್ತ ರಾಜಕೀಯ ಸನ್ನಿವೇಶಗಳ ಲಾಭ ಪಡೆಯಲು ಕಾಂಗ್ರೆಸ್ ಪಕ್ಷ ಗಡ್ಡದೇವರ ಮಠ ಎಂಬ ಯುವ ಮುಖಂಡನನ್ನು ಕಣಕ್ಕೆ ಇಳಿಸಿದೆ. ವಾಸ್ತವವಾಗಿ ಕಾಂಗ್ರೆಸ್‌ಗೆ ಗೆಲ್ಲುವಷ್ಟು ಮತಗಳು ಇಲ್ಲ. ಆ ಪಕ್ಷದ ಬಲ ವಿಧಾನಸಭೆಯಲ್ಲಿ ಕೇವಲ ೭೧. ಇನ್ನು ಜೆಡಿಎಸ್‌ನ ೨೬ ಹಾಗೂ ಪಕ್ಷೇತರ ಸದಸ್ಯರ ಬಲ ೫. ಎಲ್ಲ ಸೇರಿದರೂ ಗೆಲುವಿಗೆ ಅಗತ್ಯವಾದಷ್ಟು ಮತ ದೊರಕುವುದಿಲ್ಲ. ಹೀಗಾಗಿ ಅಡ್ಡ ಮತದಾನವಾದರೆ ಅಂದರೆ ಬಿದೆಪಿಯ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದರೆ ಮಾತ್ರ ಇದು ಸಾಧ್ಯ. 

ಗೌಪ್ಯ ಮತದಾನ; ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಶಾಸಕರು ತಾವು ಯಾವ ವ್ಯಕ್ತಿಗೆ ಮತ ಚಲಾಯಿಸುತ್ತಿದ್ದೇವೆ ಎಂಬುದನ್ನು ಪಕ್ಷದ ಏಜೆಂಟರಿಗೆ ತೋರಿಸಿ ಮತ ಚಲಾಯಿಸಬೇಕು. ಆದರೆ ಇದೇ ೨೨ರಂದು ನಡೆಯಲಿರುವ ಚುನಾವಣೆಯಲ್ಲಿ ನಡೆಯುವುದು ಗುಪ್ತ ಮತದಾನ. 

ಶಾಸಕರು ತಮ್ಮ ಆತ್ಮಸಾಕ್ಷಿಗೆ ತೋಚಿದಂತೆ ಮತ ಹಾಕಲು ಅವಕಾಶ. ಅವರು ಯಾರಿಗೂ ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂದು ತೋರಿಸುವ ಅಗತ್ಯವೂ ಇಲ್ಲ. ಒಂದೊಮ್ಮೆ ಬಿಜೆಪಿಯ ಕೇವಲ ೧೦ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದರೆ, ಜೆಡಿಎಸ್ ಹಾಗೂ ಪಕ್ಷತರರು ಕಾಂಗ್ರೆಸ್ ಅಭ್ಯರ್ಥಿಗೇ ಬೆಂಬಲ ನೀಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಈ ನಿಟ್ಟಿನಲ್ಲಿ ಮುಂದಿನ ಒಂದು ವಾರದಲ್ಲಿ ಏನೇನು ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂಬುದರ ಮೇಲೆ ಮುಖ್ಯಮಂತ್ರಿ ಭವಿಷ್ಯ ನಿರ್ಧಾರವಾಗಲಿದೆ. 

ಮೇಲು ನೋಟಕ್ಕೆ ಸದಾನಂದಗೌಡ ಗೆಲವು ಖಚಿತ. ಆದರೆ, ಇಂದು ಬಳ್ಳಾರಿಯಲ್ಲಿ ಈಶ್ವರಪ್ಪ ಅವರು ಶ್ರೀರಾಮುಲು ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದು ಕೆರಳಿಸುವ ರೀತಿ ಹೇಳಿಕೆ ನೀಡಿರುವುದು, ಇದಕ್ಕೆ ಪ್ರತಿಯಾಗಿ ನಾನೇ ಒಂದು ಬೀಗ ಕೊಡುತ್ತೇನೆ. ಯಾರೂ ಬಾರದಂತೆ ಬೀಗ ಹಾಕಿಕೊಳ್ಳಲಿ ಎಂದು ಶ್ರೀರಾಮುಲು ಹೇಳಿರುವುದು. ಜೊತೆಗೆ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ತಾವು ಡಿ.೨೧ರಂದು ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುವುದು, ಇದೆಲ್ಲದರ ನಡುವೆ ಜೆಡಿಎಸ್ ಮೌನ ವಹಿಸಿರುವುದು, ಪಕ್ಷದಲ್ಲಿ ಉನ್ನತ ಹುದ್ದೆ ಸಿಗುತ್ತಿಲ್ಲ ಎಂದು ಯಡಿಯೂರಪ್ಪ ಅಸಮಾಧಾನಗೊಂಡಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲೋ ಮೂಲೆಯಲ್ಲಿ ಏನಾದರೂ ಎಡವಟ್ಟು ಆದರೂ ಆಗಬಹುದು ಎಂಬ ಅನುಮಾನ ಹುಟ್ಟು ಹಾಕಿದೆ. ಬಹುತೇಕ ಒಂದೆರೆಡು ದಿನಗಳಲ್ಲೇ ರಾಜಕೀಯ ಚಟುವಟಿಕೆ ಗರಿಗೆದರುವ ಸಾಧ್ಯತೆ ಹೆಚ್ಚಾಗಿದೆ.  ಎಲ್ಲ ಊಹಾಪೋಹಗಳಿಗೆ ಡಿ.೨೨ರಂದು ಸ್ಪಷ್ಟ ಉತ್ತರ ದೊರಕಲಿದೆ.

ಮೇಲ್ಮನೆ - ಕೆಳಮನೆ ಹುಟ್ಟಿದ್ದು ಹೇಗೆ?

ಇಂದು ನಾವು ಮೇಲ್ಮನೆ ಎನ್ನುವ ರಾಜ್ಯಸಭೆ ಮತ್ತು ವಿಧಾನಪರಿಷತ್ತು ಹಾಗೂ ಕೆಳಮನೆ ಎಂದು ಕರೆಯಲಾಗುವ ಲೋಕಸಭೆ ಮತ್ತು ವಿಧಾನಸಭೆಗಳು  ೧೬ರಿಂದ ೧೮ನೇ ಶತಮಾನದಲ್ಲಿ ಬ್ರಿಟನ್ನಿನ ಅರಮನೆಯಲ್ಲಿ ನಡೆದ ವಿಚಾರಕ್ರಾಂತಿಯ ಫಲ. ಮೇಲ್ಮನೆ ಹಾಗೂ ಕೆಳಮನೆ ಬ್ರಿಟಿಷ್ ಆಡಳಿತ ವ್ಯವಸ್ಥೆಯಿಂದ ಭಾರತಕ್ಕೆ ನೇರವಾಗಿ ಬಂದಿವೆ.

ಬ್ರಿಟನ್ ದೊರೆ ಜಾರ್ಜ್‌ನ ಅರಮನೆಯಲ್ಲಿ ಪ್ರಜೆಗಳಿಗಾಗಿ ನಿರ್ಮಿಸಿದ ಮೇಲ್ಮನೆ ಹಾಗೂ ಕೆಳಮನೆಗಳೇ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್.

೨೦೦ ವರ್ಷಗಳ ಕಾಲ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ಭಾರತದಲ್ಲಿ ಕೂಡ ಸ್ವಾತಂತ್ರ್ಯಾನಂತರ ಅನುಸರಿಸಿದ ಸಂಸದೀಯ ವ್ಯವಸ್ಥೆಯಲ್ಲಿ ಬ್ರಿಟಿಷ್ ಪದ್ಧತಿಗಳೇ ನೇರವಾಗಿ ಸ್ಥಾನ ಪಡೆದವು. ಹೌಸ್ ಆಫ್ ಲಾರ್ಡ್ಸ್ ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಸಭೆ ಎಂಬ ಹೆಸರು ಪಡೆದರೆ, ಹೌಸ್ ಆಫ್ ಕಾಮನ್ಸ್ ಲೋಕಸಭೆ ಎಂಬ ಹೆಸರು ಪಡೆಯಿತು. ಇದೇ ಮಾದರಿಯಲ್ಲಿಯೇ ವಿಧಾನಪರಿಷತ್ತು ಮತ್ತು ವಿಧಾನಸಭೆಗಳ ರಚನೆಯೂ ಆಯಿತು.

ಕೆಳಮನೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಜನಾದೇಶ ಪಡೆದು ಜನಪ್ರತಿನಿಧಿಗಳು ಶಾಸಕಾಂಗ ಪ್ರವೇಶಿಸಿದರೆ, ಹಿರಿಯರ, ವಿವಿಧ ಕ್ಷೇತ್ರಗಳ ಸಾಧಕರ, ಮೇಧಾವಿಗಳ ಅನುಭವ ಶಾಸನ ರಚನೆಯ ಕಾಲದಲ್ಲಿ ಸಿಗಲೆಂಬ ಉದ್ದೇಶದಿಂದ ಪ್ರಾಮಾಣಿಕರನ್ನು, ಶುದ್ಧಹಸ್ತರನ್ನು, ಹಿರಿಯರನ್ನು, ಜೀವನದ ವಿವಿಧ ಕ್ಷೇತ್ರಗಳ ಅದ್ವರ್ಯುಗಳನ್ನು, ಮುತ್ಸದ್ದಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ಬಂತು.

ಆದರೆ ಈಗ ಈ ಉದ್ದೇಶಗಳೇ ಕಣ್ಮರೆಯಾಗುತ್ತಿವೆ. ವಿಧಾನಪರಿಷತ್ತಿಗೆ ರಾಜ್ಯದವರಲ್ಲದ ರಾಜಕಾರಣಿಗಳು, ಉದ್ಯಮಿಗಳು, ಚಿತ್ರನಟರು (ಉದಾ. ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್, ಹೇಮಾಮಾಲಿನಿ) ಆಯ್ಕೆಯಾದರೆ, ವಿಧಾನಪರಿಷತ್ತಿಗೆ ಕೂಡ ರಾಜಕೀಯ ಪುನರ್ವಸತಿ ಕಲ್ಪಿಸುವ ರೀತಿಯಲ್ಲಿ ಆಯ್ಕೆ, ನಾಮಕರಣ ಮಾಡಲಾಗುತ್ತಿದೆ ಎಂಬುದು ವಿಷಾದದ ಸಂಗತಿ. 

ಮುಖಪುಟ /ಸುದ್ದಿ ಸಮಾಚಾರ