ಮುಖಪುಟ /ಸುದ್ದಿ ಸಮಾಚಾರ

 ಬೆಳಗಾವಿ ಪಾಲಿಕೆ ವಿಸರ್ಜನೆ

ಬೆಂಗಳೂರು, ಡಿ. ೧೫: ಕೊನೆಗೂ ಕನ್ನಡಿಗರ ಹೋರಾಟಕ್ಕೆ ಜಯ ಸಿಕ್ಕಿದೆ. ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜನೆಮಾಡುವ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿದ್ದು, ಇಂದು ವಿಧಾನಸಭೆಯಲ್ಲೇ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇದನ್ನು ಅಧಿಕೃತವಾಗಿ ಪ್ರಕಟಿಸಿದರು. 

ಕೃಷ್ಣ ನದಿ ನೀರಿನ ಬಗ್ಗೆ ನಿಯಮ ೬೯ರಡಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಅವರು, ಹೇಳಿಕೆ ನೀಡಿ ಈ ವಿಷಯವನ್ನು ಸದನದಲ್ಲಿ ಪ್ರಕಟಿಸುತ್ತಿದ್ದಂತೆ, ಸದಸ್ಯರು ಮೇಜು ತಟ್ಟಿ ಅಭಿನಂದನೆ ಸಲ್ಲಿಸಿದರು. 

ಮುಖ್ಯಮಂತ್ರಿ ಹೇಳಿಕೆ ನೀಡಿ, ಬೆಳಗಾವಿ ಮಹಾನಗರ ಪಾಲಿಕೆ ರಾಜ್ಯದ ಹಿತಕ್ಕೆ ವಿರುದ್ಧವಾಗಿ ವರ್ತಿಸಿದ ಕಾರಣ, ಸರ್ಕಾರ ಹಲವು ಬಾರಿ ಸೂಚನೆ ನೀಡಿದರೂ ಪಾಲಿಸದ ಕಾರಣ, ರಾಜ್ಯ ಸರ್ಕಾರ ತನಗೆ ಪ್ರದತ್ತವಾದ ಅಧಿಕಾರ ಬಳಸಿ ಬೆಳಗಾವಿ ಪಾಲಿಕೆಯನ್ನು ವಿಸರ್ಜಿಸಲಾಯಿತು ಎಂದು ಹೇಳಿದರು. 

ಬೆಳಗಾವಿ ನಗರ ಪಾಲಿಕೆಯ ವರ್ತನೆ ಕನ್ನಡನಾಡಿನ ಸದ್ಬಾವನೆಗೆ ಧಕ್ಕೆಯಾಗುವಂತಿತ್ತು. ಅಲ್ಲಿನ ಮೇಯರ್ ಹಾಗೂ ಉಪ ಮೇಯರ್ ಕನ್ನಡಿಗರ ಭಾವನೆಗೆ ವಿರುದ್ಧವಾಗಿ ವರ್ತಿಸಿದ್ದರು. ಬೆಳಗಾವಿ ನಗರ ಪಾಲಿಕೆಯ ಸಭೆ ಮತ್ತು ಮಹಾಪೌರರ ಎಲ್ಲ ನಡೆವಳಿಕೆಗಳೂ ಕನ್ನಡ ನಾಡಿನ ಹಿತಕ್ಕೆ ವಿರುದ್ಧವಾಗಿತ್ತು. 

ಈ ಹಿನ್ನೆಲೆಯಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ ೭೬ ಕಲಂ ೯೯(೧)ರ ಅನ್ವಯ ದತ್ತವಾದ ಅಧಿಕಾರವನ್ನು ಬಳಸಿ ನೋಟಿಸ್ ನೀಡಲಾಗಿತ್ತು. ಅವರು ಕಳುಹಿಸಿದ ಉತ್ತರ ಪರಾಂಬರಿಸಿ. ಆದರೆ ಅಧಿನಿಯಮದಲ್ಲಿ ನಗರ ಪಾಲಿಕೆ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟವಾದ ಸೂಚನೆ ಇದ್ದರೂ ಆ ಸೂಚನೆಗಳನ್ವಯ ಬೆಳಗಾವಿ ನಗರ ಪಾಲಿಕೆ ತನ್ನ ಆದ್ಯ ಕರ್ತವ್ಯಗಳನ್ನು ನಿಬಾಯಿಸುವುದರಲ್ಲಿ ವಿಫಲವಾಗಿತ್ತು, ಈ ಹಿನ್ನೆಲೆಯಲ್ಲಿ ಪಾಲಿಕೆ ವಿಸರ್ಜಿಸಲಾಗಿದೆ ಎಂದು ಹೇಳಿಕೆ ನೀಡಿದರು.

ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಯಲ್ಲಿ ಬೆಳಗಾವಿ ಮೇಯರ್, ಉಪಮೇಯರ್ ಪಾಲ್ಗೊಂಡ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಸರ್ಕಾರ ವಿಸರ್ಜನೆ ಮಾಡಿದೆ.  

ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ದಮನಕ್ಕೆ ಕೊನೆಗೂ ಸರ್ಕಾರ ದೃಢ ನಿರ್ಧಾರ ತಳೆದಿದ್ದು, ಸಮಸ್ತ ಕನ್ನಡಿಗರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

ಕನ್ನಡಿಗರ ಹಿತಕ್ಕೆ ವಿರುದ್ಧವಾಗಿ ವರ್ತಿಸಿದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಕ್ರಮ ನಾಡಿನಾದ್ಯಂತ ಟೀಕೆಗೆ ಗುರಿಯಾಗಿತ್ತು. ಜೊತೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಾಗೂ ಬೆಳಗಾವಿ ಜಿಲ್ಲೆಯವರೇ ಆದ ಡಾ. ಚಂದ್ರಶೇಖರ ಕಂಬಾರರಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಲೂ ವಿರೋಧ ವ್ಯಕ್ತಪಡಿಸಿತ್ತು. ಕನ್ನಡ ನಾಡಿನಲ್ಲಿಯೇ ಕನ್ನಡ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವಂತೆ ಸರ್ವತ್ರ ಒತ್ತಾಯ ಕೇಳಿಬಂದಿತ್ತು. 

ಈ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬೆಳಗಾವಿಯಲ್ಲಿನ ಎಂ.ಇ.ಎಸ್. ಪುಂಡಾಟಿಕೆ, ಇದಕ್ಕೆ ಪೂರಕವಾಗಿ ಶಿವಸೇನೆಯ ಮುಖಂಡ ಬಾಳಾ ಠಾಕ್ರೆ ಹೇಳಿಕೆಗಳು ಕನ್ನಡಿಗರನ್ನು ಕೆರಳಿಸಿದ್ದವು.

ಇತ್ತೀಚೆಗೆ ನಡೆದ ಗಂಗಾವತಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಕೂಡ ಬೆಳಗಾವಿ ಪಾಲಿಕೆ ವಿಸರ್ಜನೆಮಾಡುವಂತೆ ಒತ್ತಾಯ ಕೇಳಿಬಂದಿತ್ತು. 

ಈ ಮಧ್ಯೆ ಬೆಳಗಾವಿ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಮಾಡಿದ ತಪ್ಪಿಗೆ ಪಾಲಿಕೆಯನ್ನು ವಿಸರ್ಜನೆಮಾಡುವುದು ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಪಾಲಿಕೆಯ ಕನ್ನಡ ಸದಸ್ಯರು ಮಾಡಿದ್ದರು.

ಆದರೆ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವಂತೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದೂ ಸಹ ಪ್ರತಿಭಟನೆ ನಡೆಸಿದ್ದರು. ಸರ್ಕಾರ ಪಾಲಿಕೆ ವಿಸರ್ಜನೆಮಾಡಲು ಮೀನಾ ಮೇಷ ಎಣಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ ಇಂದು ಕನ್ನಡ ವಿಚಾರದಲ್ಲಿ ರಾಜಿ ಇಲ್ಲ ಎಂಬ ತನ್ನ ಬದ್ಧತೆ ಪ್ರದರ್ಶಿಸಿದ ರಾಜ್ಯ ಸರ್ಕಾರ ಪಾಲಿಕೆ ವಿಸರ್ಜನೆಮಾಡಿ ಬೆಳಗಾವಿಯಲ್ಲಿ ನಿಮ್ಮ ಆಟ ನಡೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಎಂ.ಇ.ಎಸ್. ಹಾಗೂ ಶಿವಸೇನೆಗೆ ನೀಡಿತು.

ಇಂದು ವಿಸರ್ಜನೆನಿರ್ಧಾರವನ್ನು ಪ್ರಕಟಿಸುವ ಮುನ್ನ ರಾಜ್ಯ ಸರ್ಕಾರ ಕಾನೂನು ರೀತ್ಯ ಹಾಗೂ ನಿಯಮಾನುಸಾರ ಬೆಳಗಾವಿ ಪಾಲಿಕೆಗೆ ವಿವರಣೆ ಕೋರಿ ಶೋಕಾಸ್ ನೊಟೀಸ್ ನೀಡಿತ್ತು. ಸರ್ಕಾರ ನೀಡಿದ್ದ ನೋಟೀಸ್‌ಗೆ ಉತ್ತರ ನೀಡಲು ಬೆಳಗಾವಿ ಮೇಯರ್ ಮಂದಾ ಬಾಳೇಕುಂದ್ರಿ ಮೊದಲಿಗೆ ನಿರಾಕರಿಸಿದ್ದರು.

ನಂತರ ಕಾನೂನು ತಜ್ಞರ ಸಲಹೆ ಪಡೆದು, ತಾವು, ರಾಜ್ಯದ ಹಿತಕ್ಕೆ ವಿರುದ್ಧವಾಗಿ ವರ್ತಿಸಿಲ್ಲ. ಹೀಗಾಗಿ ಬೆಳಗಾವಿ ಪಾಲಿಕೆಯನ್ನು ವಿಸರ್ಜನೆಮಾಡಬೇಡಿ ಎಂದು ಇಂಗ್ಲೀಷ್‌ನಲ್ಲಿ ಉತ್ತರ ನೀಡಿದ್ದರು. ಈ ಉತ್ತರವನ್ನು ಕೂಲಂಕಷವಾಗಿ ಪರಿಶೀಲಿಸಿದ ನಗರಾಭಿವ್ರದ್ಧಿ ಇಲಾಖೆ ಹೆಚ್ಚುವರಿ ಕಾರ‍್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡ, ಬೆಳಗಾವಿ ಪಾಲಿಕೆಯನ್ನು ವಿಸರ್ಜನೆಮಾಡುವುದು ಸೂಕ್ತ ಎಂದು ಸರ‍್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಮಧ್ಯೆ ತಮ್ಮ ತಪ್ಪನ್ನು ಅರಿತ ಬಾಳೆಕುಂದ್ರಿ ಮತ್ತೊಂದು ಪತ್ರವನ್ನು ಕನ್ನಡದಲ್ಲಿಯೂ ಬರೆದಿದ್ದರು.

ಆದರೂ, ಕೆಲವೊಂದು ಒತ್ತಡಗಳಿಗೆ ಮಣಿದಿದ್ದಿ ಸರ್ಕಾರ ಬೆಳಗಾವಿ ಪಾಲಿಕೆಗೆ ಮತ್ತೊಂದು ಅವಕಾಶ ನೀಡಲು ಮುಂದಾಗಿತ್ತು. ಇಡೀ ಪಾಲಿಕೆಯನ್ನು ವಿಸರ್ಜನೆಮಾಡುವ ಬದಲು ಕೇವಲ ಮೇಯರ್, ಉಪಮೇಯರ್ ಹಾಗೂ ರಾಜ್ಯವಿರೋಧಿ ಧೋರಣೆ ಪ್ರದರ್ಶಿಸಿದ ಸದಸ್ಯರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿತ್ತು.

ಆದರೆ, ವೈಯಕ್ತಿಕವಾಗಿ ಯಾವುದೇ ಸದಸ್ಯರ ವಿರುದ್ಧ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಅಂತಿಮವಾಗಿ ಬೆಳಗಾವಿ ಪಾಲಿಕೆಯನ್ನು ವಿಸರ್ಜನೆ ಮಾಡುವ ನಿರ್ಧಾರ ಕೈಗೊಳ್ಳುವುದು  ಸರ್ಕಾರಕ್ಕೆ ಅನಿವಾರ್ಯವಾಯಿತು.  

ಮುಖಪುಟ /ಸುದ್ದಿ ಸಮಾಚಾರ