ಮುಖಪುಟ /ಸುದ್ದಿ ಸಮಾಚಾರ   
      

ಯಡಿಯೂರಪ್ಪ ಬದಲಾವಣೆಗೆ ಕ್ಷಣ ಗಣನೆ...

*ಟಿ.ಎಂ.ಸತೀಶ್

Yadiyurappaಬೆಂಗಳೂರು, ಡಿ.೨೩ - ಡಿನೋಟಿಫಿಕೇಷನ್, ಭೂಹಗರಣ, ಸ್ವಜನ ಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ಬೀಸೋದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಮತ್ತೆ ಅಲುಗಾಡತೊಡಗಿದೆ. ಬಿಜೆಪಿ ಮೂಲಗಳ ಪ್ರಕಾರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕ್ಷಣ ಗಣನೆಯೂ ಆರಂಭವಾಗಿದೆ.

ಮುಂದಿನ ೨೦ ವರ್ಷ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಯಡಿಯೂರಪ್ಪ ನಿನ್ನೆ ತಮ್ಮ ತವರೂರು  ಶಿಕಾರಿಪುರದಲ್ಲಿ ದಿಢೀರ್ ರಾಗ ಬದಲಾಯಿಸಿ, ತಾವು ರಾಜ್ಯ ರಾಜಕಾರಣಕ್ಕೆ ಗುಡ್‌ಬೈ ಹೇಳಿ ರಾಷ್ಟ್ರ ರಾಜಕಾರಣದಲ್ಲಿ ಸೇವೆ ಸಲ್ಲಿಸುವುದಾಗಿ ಪ್ರಕಟಿಸಿರುವುದು ಈ ಎಲ್ಲ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಬಿಜೆಪಿ ವರಿಷ್ಠರಿಗೆ ಇರುಸು ಮುರುಸು

ಕೇಂದ್ರ ಸರ್ಕಾರದಲ್ಲಿ ನಡೆದಿರುವ ೭೦ ಸಾವಿರ ಕೋಟಿ ರೂಪಾಯಿಗಳ ಕಾಮನ್‌ವೆಲ್ತ್ ಕ್ರೀಡಾಕೂಟ ಸಿದ್ಧತೆ ಹಗರಣ, ೧ಲಕ್ಷ ೭೬ ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತದ ೨ ಜಿ ಸ್ಪೆಕ್ಟ್ರಂ ಹಗರಣದಂಥ  ದೊಡ್ಡ ಅಸ್ತ್ರವೇ ಬಿಜೆಪಿಗೆ ದೊರಕಿದ್ದರೂ, ಅದು ಕೇಂದ್ರ ಸರ್ಕಾರದ ಮೇಲೆ ಸೂಕ್ತವಾಗಿ ಹೋರಾಟ ಮಾಡುವ ನೈತಿಕತೆ ಕಳೆದುಕೊಳ್ಳಲು ರಾಜ್ಯದ ಹಗರಣ ಕಾರಣವಾಗಿದೆ.

ಈ ಬಹುಕೋಟಿ ರೂಪಾಯಿಗಳ ಹಗರಣದ ಬಗ್ಗೆ ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಎನ್.ಡಿ.ಎ. ಸದನದಲ್ಲಿ ಮತ್ತು ಸದನದ ಹೊರಗೆ ಪ್ರಸ್ತಾಪಿಸಿದರೂ, ಕಾಂಗ್ರೆಸ್ ಪಕ್ಷ ಪದೇ ಪದೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಜನ ಪಕ್ಷಪಾತ, ಭೂಹಗರಣದ ಪ್ರಸ್ತಾಪ ಮಾಡಿ, ತಮ್ಮ ಎಲೆಯಲ್ಲಿ ಹೆಗ್ಗಣೆವೇ ಸತ್ತು ಬಿದ್ದಿರುವಾಗ, ಪಕ್ಕದ ಎಲೆಯಲ್ಲಿರುವ ನೊಣ ಓಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿ ಬಿಜೆಪಿ ವರಿಷ್ಠರನ್ನು ಪೇಚಿಗೆ ಸಿಲುಕಿಸುತ್ತಿದೆ.

ನಿನ್ನೆ ದೆಹಲಿಯಿಂದ ರಾಷ್ಟ್ರವ್ಯಾಪಿ ಹೋರಾಟಕ್ಕೆ ಚಾಲನೆ ನೀಡಿದ ಬಿಜೆಪಿಗೆ ಕಾಂಗ್ರೆಸ್ ನಾಯಕರು ಮತ್ತೆ ಕರ್ನಾಟಕದ ಪ್ರಸ್ತಾಪ ಮಾಡಿ ಉತ್ತರ ನೀಡಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ ಕಾಂಗ್ರೆಸ್‌ನ ೧೨೫ನೇ ವರ್ಷಾಚರಣೆ ಹಾಗೂ ೮೩ನೇ ಮಹಾಧಿವೇಶನದಲ್ಲಿ ಕೂಡ ಕರ್ನಾಟಕದ ಪ್ರಸ್ತಾಪ ಬಂದಿದೆ.

ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರೇ ಸ್ವತಃ ಈ ವಿಷಯ ಪ್ರಸ್ತಾಪಿಸಿ, ಭೂಹಗರಣದಲ್ಲಿ ಮುಳುಗಿರುವ ಯಡಿಯೂರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದ ಬಿಜೆಪಿಗೆ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ೨ಜಿ ಸ್ಪೆಕ್ಟ್ರಂ ಹಗರಣ ಹಾಗೂ ಕರ್ನಾಟಕದ ಭೂ ಹಗರಣಕ್ಕೂ ಹೋಲಿಸಲಾಗದು ಎಂದು ಹೇಳುತ್ತಿದೆಯಾದರೂ, ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಅದರ ಹೋರಾಟಕ್ಕೆ ಕರ್ನಾಟಕದ ಹಗರಣ ಅಡ್ಡಿಯಾಗಿರುವುಂದರೂ ಸ್ಪಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಸಂಕಷ್ಟದಿಂದ ಪಾರಾಗಲು ಮತ್ತು ನೈತಿಕತೆಯಿಂದ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿರುವ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯ ಬಳಿಕ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಗೌರವಯುತವಾಗಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುವಂತೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.

ರಾಜ್ಯಸಭಾ ಸದಸ್ಯ ಸ್ಥಾನ

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಆಶ್ವಾಸನೆಯನ್ನೂ ನೀಡಲಾಗಿದ್ದು, ನೀವು ರಾಷ್ಟ್ರೀಯ ರಾಜಕಾರಣಕ್ಕೆ ಬನ್ನಿ ಎಂಬ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಬಳಿಕ ಸಿ.ಎಂ. ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂದೇ ಬಿಜೆಪಿ ಮೂಲಗಳು ಹೇಳಿವೆ.

ಗಣಿ, ಭೂ ಹಗರಣಗಳ ವರದಿಯ ಸಂಕಷ್ಟ... 

ರಾಜ್ಯಕ್ಕೆ ಆಗಮಿಸಿ ಭೂಹಗರಣಗಳ ಕುರಿತು ಆಂತರಿಕ ತನಿಖೆ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಫ್ರಧಾನ್ ಅವರಿಗೆ ಭೂಹಗರಣ, ಸ್ವಜನ ಪಕ್ಷಪಾತದ ಸಾಕಷ್ಟು ದಾಖಲೆ ಸಿಕ್ಕಿದ್ದು, ಅವರು ವರಿಷ್ಠರಿಗೆ ಈ ಕುರಿತು ಪ್ರಾಥಮಿಕ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಮುಂದಿನ ತಿಂಗಳಿನಿಂದ ವರದಿಗಳ ಸಂಕಷ್ಟ ಬಿಜೆಪಿಗೆ ಉರುಳಾಗಲಿದೆ ಎಂದೇ ನಿರೀಕ್ಷಿಸಲಾಗುತ್ತಿದೆ. ಕಾರಣ, ಭೂಹಗರಣಗಳ ಕುರಿತು ಈಗಾಗಲೇ ತನಿಖೆ ಆರಂಭಿಸಿರುವ ಲೋಕಾಯುಕ್ತರು ಮುಂಬರುವ ಜನವರಿಯಲ್ಲಿ ಮತ್ತು ಫೆಬ್ರವರಿಯಲ್ಲಿ ತಮ್ಮ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಜೊತೆಗೆ ರಾಜ್ಯದಲ್ಲಿ ನಡೆದಿರುವ ಗಣಿ ಅಕ್ರಮಗಳ ಕುರಿತಂತೆ ಮಾರ್ಚ್ ತಿಂಗಳಿನಲ್ಲಿ ವರದಿ ನೀಡುವುದಾಗಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರೇ ಪ್ರಕಟಿಸಿದ್ದು, ಮುಂದಿನ ೨-೩ ತಿಂಗಳಲ್ಲಿ ಹೊರಬೀಳಲಿರುವ ಹಗರಣಗಳ ವರದಿಗಳು ಸರ್ಕಾರವನ್ನು ಮತ್ತಷ್ಟು ಪೇಚಿಗೆ ಸಿಲುಕಿಸುವ ಸಾಧ್ಯತೆಗಳೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದೆ ಹಗರಣಗಳ ವರದಿಯಿಂದ ಎದುರಾಗಲಿರುವ ಸಂಕಷ್ಟಗಳಿಗೆ ಈಗಲೇ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ನಿಶ್ಚಯಿಸಿದೆ ಎಂದು ಹೇಳಲಾಗಿದೆ.

ಮುಂದಿನ ಮುಖ್ಯಮಂತ್ರಿ ಯಾರು?

ಒಂದು ಪ್ರಶ್ನೆಗೆ ಉತ್ತರ ಸಿಕ್ಕರೆ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಯಡಿಯೂರಪ್ಪ ನಾಯಕತ್ವ ಬದಲಾದರೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಸಹಜವಾಗೇ ಉದ್ಭವಿಸುತ್ತದೆ. ವಾಸ್ತವವಾಗಿ ರಾಜ್ಯದಲ್ಲಿ ಲಿಂಗಾಯಿತ ಸಮುದಾಯದ ಒಲವನ್ನು ಹಾಗೆಯೇ ಉಳಿಸಿಕೊಳ್ಳಲು ಜಗದೀಶ ಶೆಟ್ಟರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಬಹುದು ಎಂದು ಎಲ್ಲರೂ ಹೇಳುತ್ತಿದ್ದಾರೆ.

ಆದರೆ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳೂ ಮುಗಿಯುವ ಕಾರಣ ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಚುನಾವಣೆ ಇಲ್ಲದ ಕಾರಣ, ಸಮರ್ಥವಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂಥ ನಾಯಕ ಬೇಕೆಂದು ಹುಡುಕುತ್ತಿರುವ ಬಿಜೆಪಿ ವರಿಷ್ಠರು ಅನಂತಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡುವ ಇರಾದೆ ಹೊಂದಿದ್ದಾರೆ ಎಂದು ಗೊತ್ತಾಗಿದೆ. ಅನಂತ್‌ಕುಮಾರ್ ಅವರಿಗೆ ಅಡ್ವಾಣಿ ಅವರ ಮತ್ತು ಗಣಿ ದಣಿಗಳ ಪೂರ್ಣ ಬೆಂಬಲ ಇದೆ. ಆದರೆ, ಯಡಿಯೂರಪ್ಪ ಅವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೂ ಅನಂತ್‌ಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆಗಳೇ ಹೆಚ್ಚು.

ಎನ್.ಡಿ.ಎ. ಆಡಳಿತದಲ್ಲಿದ್ದ ಸಂದರ್ಭದಲ್ಲಿ ಹುಡ್ಕೋ ಹಗರಣದಲ್ಲಿ ಅನಂತ್‌ಕುಮಾರ್ ಸಿಲುಕಿದ್ದ ಕಾರಣ, ಅವರ ನಾಯಕತ್ವಕ್ಕೆ ವಿರೋಧ ಕಂಡು ಬಂದರೆ, ಆರ್.ಎಸ್.ಎಸ್. ಪ್ರಭಾವದಿಂದ ಸಚಿವ ಸುರೇಶ್ ಕುಮಾರ್ ಅಥವಾ ವಿ.ಎಸ್. ಆಚಾರ್ಯ ಮುಖ್ಯಮಂತ್ರಿ ಆದರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಮುಂದಿನ ತಿಂಗಳು ಮತ್ತೆ ನಾಟಕ ನಡೆಯಲಿದೆ. ಜನತೆಗೆ ಪುಕ್ಕಟೆ ಮನರಂಜನೆ ದೊರಕಲಿದೆ ಎಂದೇ ನಿರೀಕ್ಷಿಸಲಾಗಿದೆ.    

 ಮುಖಪುಟ /ಸುದ್ದಿ ಸಮಾಚಾರ