ಮುಖಪುಟ /ಸುದ್ದಿ ಸಮಾಚಾರ   
      

ವಿಕಿಲೀಕ್ಸ್ ಮಾಹಿತಿ ಸೋರಿಕೆ ಪ್ರತಿಕ್ರಿಯೆಗೆ ಕೃಷ್ಣ ನಕಾರ

smkಬೆಂಗಳೂರು, ಡಿ.೩: ವಿಕಿಲೀಕ್ಸ್‌ನಿಂದ ಮಾಹಿತಿ ಸೋರಿಕೆ ವರದಿಯ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸಾಧುವಲ್ಲ. ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮಂಡ್ಯದಲ್ಲಿಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

೨೦೦೮ರ ನವೆಂಬರ್ ೨೬ರ ಘಟನೆಯಲ್ಲಿ ಪಾಕ್ ಹಾಗೂ ಐಎಸ್‌ಐ ಕೈವಾಡವಿರುವುದನ್ನು ವಿಕಿಲೀಕ್ಸ್ ಸಾಕ್ಷ್ಯಾಧಾರಗಳ ಸಹಿತ ಸಮರ್ಥಿಸಿದೆ. ಇದನ್ನು ಭಾರತ ಮೊದಲೇ ಸ್ಪಷ್ಟಪಡಿಸಿತ್ತು ಎಂದು ಕೃಷ್ಣ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಂಸತ್ತಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ನಮಗೆ ದೊಡ್ಡ ಬೆಂಬಲ ದೊರೆತಂತಾಗಿದೆ ಎಂದು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಅವರಿಗೆ ವೀಸಾ ನೀಡುವುದು ಸೂಕ್ತವಲ್ಲ ಎಂದು ಭಾರತ ತಿಳಿಸಿದೆ ಎಂದು ಕೃಷ್ಣ ಹೇಳಿದರು.

ನ್ಯಾಯಾಂಗ ತನಿಖೆ ಸ್ವಾಗತ:  ಭೂಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ತಾವು ಸ್ವಾಗತಿಸುವುದಾಗಿ ಎಸ್.ಎಂ. ಕೃಷ್ಣ ಹೇಳಿದರು.

ವಿಧಾನಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿದ ನಂತರ ತಮ್ಮ ಅವಧಿಯಲ್ಲಿ ಡಿನೋಟಿಫೈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ನ್ಯಾಯಾಂಗ ತನಿಖೆ ಅಗತ್ಯವಾಗಿ ಆಗಬಹುದು ಎಂದು ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಇಂದಿನ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ಏನೂ ಮಾಡಲು ಬರುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ