ಮುಖಪುಟ /ಸುದ್ದಿ ಸಮಾಚಾರ   
      

ಸಿಎಂ ರಾಜೀನಾಮೆಗೆ ಸಿದ್ದು ಆಗ್ರಹ

siddaramaiahಬೆಂಗಳೂರು, ಡಿ.೩: ಕೋಟ್ಯಂತರ ರೂಪಾಯಿ ಭೂ ಹಗರಣ ಹಿನ್ನೆಲೆಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜೀನಾಮೆ ನೀಡಿದ್ದಾರೆ. ಆದರೆ, ಇಷ್ಟು ದೊಡ್ಡ ವ್ಯವಹಾರ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ನಡೆದಿರಲು ಸಾಧ್ಯವೇ ಇಲ್ಲ. ಹೀಗಾಗಿ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ನಾಶಮಾಡುವ ಸಾಧ್ಯತೆಯಿರುವುದರಿಂದ ಎಲ್ಲ ದಾಖಲೆ ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಅವ್ಯವಹಾರದ ಕುರಿತು ದಾಖಲೆ ಹೊಂದಿದ್ದು ಇಷ್ಟರಲ್ಲೇ ಅವುಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಹಲವಾರು ಭೂ ಹಗರಣಗಳಿಗೆ ಕಾರಣವಾಗಿದ್ದು, ಈ ಸಂಸ್ಥೆಯನ್ನು ತಕ್ಷಣ ಮುಚ್ಚಬೇಕೆಂದೂ ಸಿದ್ದರಾಮಯ್ಯ ಆಗ್ರಹಿಸಿದರು.

ಇನ್ನು ಮುಂದೆ ಕೈಗಾರಿಕೆಗಳಿಗೆ ಬೇಕಾಗುವ ಅಗತ್ಯ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿಸುವ ವ್ಯವಸ್ಥೆ ಬರಬೇಕು. ಈ ದಿಕ್ಕಿನಲ್ಲಿ ಉಚ್ಚ ನ್ಯಾಯಾಲಯದ ಅನಿಸಿಕೆಯನ್ನು ಸರ್ಕಾರ ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರು.

 ಮುಖಪುಟ /ಸುದ್ದಿ ಸಮಾಚಾರ