ಮುಖಪುಟ /ಸುದ್ದಿ ಸಮಾಚಾರ   
      

ಸುಪ್ರೀಂನಲ್ಲಿ ಪಕ್ಷೇತರ ಶಾಸಕರ ಅನರ್ಹತೆ ವಿಚಾರಣೆ ೬ಕ್ಕೆ ಮುಂದೂಡಿಕೆ

ಬೆಂಗಳೂರು, ಡಿ.೩: ಅನರ್ಹಗೊಂಡಿರುವ ಐವರು ಪಕ್ಷೇತರ ಶಾಸಕರು ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂಲ ಅರ್ಜಿಗೆ ತಿದ್ದುಪಡಿ ಮಾಡಲು ಹೈಕೋರ್ಟ್ ಪೀಠ ನೀಡಿರುವ ಅನುಮತಿ ಪ್ರಶ್ನಿಸಿ ಮುಖ್ಯ ಸಚೇತಕ ಡಿ.ಎನ್. ಜೀವರಾಜ್ ಹಾಗೂ ಶಾಸಕ ಸಿ.ಟಿ.ರವಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದೂ ನಡೆಸಿತು.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಅಲ್ತಾಮಸ್ ಕಬೀರ್ ಹಾಗೂ ಸಿರಿಯಾಕ್ ಜೋಸೆಫ್ ಅವರನ್ನೊಳಗೊಂಡ ಪೀಠ ಮುಂದಿನ ವಿಚಾರಣೆಯನ್ನು ಸೊಮವಾರಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ಮುಕುಲ್ ರೋಹಟಗಿ ಹಾಗೂ ಪಕ್ಷೇತರ ಶಾಸಕರ ಪರ ಪಿ.ಪಿ.ರಾವ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು.

ತಾವು ಎಂದೂ ಬಿಜೆಪಿ ತೊರೆದಿಲ್ಲ ಎಂದು ಪಕ್ಷೇತರ ಶಾಸಕರು ತಮ್ಮ ಮೂಲ ಅರ್ಜಿಯಲ್ಲಿ ಹೇಳಿದ್ದರು. ಆನಂತರ ಇದು ಕಂಪ್ಯೂಟರ್‌ನಲ್ಲಿ ಕಟ್ ಅಂಡ್ ಪೇಸ್ಟ್ ಮಾಡುವಾಗ ಆಗಿರುವ ಲೋಪ, ಹೀಗಾಗಿ ಎಂದೂ ಬಿಜೆಪಿ ಸೇರಿಲ್ಲ ಎಂದು ಬದಲಾಯಿಸಲು ಅವಕಾಶ ಕೊಡಿ ಎಂದು ಅನರ್ಹ ಪಕ್ಷೇತರ ಶಾಸಕರು ಮಾಡಿದ್ದ ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ಮಾನ್ಯ ಮಾಡಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ಸಚೇತಕರು ಮೇಲ್ಮನವಿ ಸಲ್ಲಿಸಿದ್ದರು.

ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ನೇರ ಪಕ್ಷಕಾರರಾಗಿ ಪರಿಗಣಿಸಿರುವ ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

 ಮುಖಪುಟ /ಸುದ್ದಿ ಸಮಾಚಾರ