ಮುಖಪುಟ /ಸುದ್ದಿ ಸಮಾಚಾರ   
 

ರಾಜಿನಾಮೆ ಪಾಪ ಪರಿಹಾರವಲ್ಲ - ಲೋಕಾಯುಕ್ತ

ಬೆಂಗಳೂರು, ಡಿ.೩: ರಾಜೀನಾಮೆ ಕೊಟ್ಟ ಮಾತ್ರಕ್ಕೆ ಪಾಪ ಪರಿಹಾರವಾಗುವುದಿಲ್ಲ, ತಪ್ಪನ್ನು ಕ್ಷಮಿಸಲು ಆಗುವುದಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.

ನಗರದಲ್ಲಿಂದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜೀನಾಮೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ, ಅದು ಪ್ರಾಯಶ್ಚಿತ್ತವಾಗುವುದಿಲ್ಲ. ಕಾನೂನಿನಲ್ಲಿ ಕ್ಷಮೆ ಸಿಗುವುದಿಲ್ಲ ಎಂದರು.

ಎಫ್.ಐ.ಆರ್ ದಾಖಲಾದ ಮಾತ್ರಕ್ಕೆ ಬಂಧಿಸಬೇಕಾಗಿಲ್ಲ. ಅವರನ್ನು ಬಂದಿಸಬೇಕೋ ಬೇಡವೋ ಎಂಬುದನ್ನು ಲೋಕಾಯುಕ್ತ ಪೊಲೀಸರು ನಿರ್ಧರಿಸಲಿದ್ದಾರೆ ಎಂದರು.

ಆರೋಪಿ ಸಾಕ್ಷಿ ಹಾಗೂ ದಾಖಲೆಗಳನ್ನು ನಾಶ ಪಡಿಸಲು ಯತ್ನಿಸಿದರೆ, ಸಾಕ್ಷಿಗಳಿಗೆ ಪ್ರಭಾವ ಬೀರಿದರೆ, ವಿಚಾರಣೆಗೆ ಸಹಕರಿಸದಿದ್ದರೆ ಆಗ ಅವರನ್ನು ಬಂಧಿಸಬಹುದಾಗಿದೆ. ಇಂತಹ ಪರಿಸ್ಥಿತಿ ಬಂದಿದೆಯೇ ಎಂಬುದನ್ನು ತನಿಖಾ ಸಂಸ್ಥೆ ನಿರ್ಧರಿಸುತ್ತದೆ ಎಂದು ಹೇಳಿದರು.

ಕೆಐಎಡಿಬಿ ಭೂಹಗರಣ ಕುರಿತು ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ. ಆದರೆ ಲೋಕಾಯುಕ್ತ ಸಂಸ್ಥೆ ಈಗಾಗಲೇ ಇದರ ತನಿಖೆ ಆರಂಭಿಸಿರುವುದರಿಂದ ಪ್ರತ್ಯೇಕ ತನಿಖೆಯ ಅಗತ್ಯ ಕಂಡು ಬರುವುದಿಲ್ಲ. ಈ ಸಂಬಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು. ಹೈಕೋರ್ಟ್ ತೀರ್ಪಿಗೆ ತಾವು ಬದ್ಧ ಎಂದರು.

 ಮುಖಪುಟ /ಸುದ್ದಿ ಸಮಾಚಾರ