ಮುಖಪುಟ /ಸುದ್ದಿ ಸಮಾಚಾರ   
      

ಹೊಸ ವರ್ಷದ ಕೊಡುಗೆ - ಸುರೇಶ್ ಕುಮಾರ್

suresh kumarಬೆಂಗಳೂರು, ಡಿ. ೩೦ : ಕೃಷ್ಣಾ ನ್ಯಾಯಾಧಿಕರಣ ನೀಡಿರುವ ಅಂತಿಮ ತೀರ್ಪು ರಾಜ್ಯಕ್ಕೆ ಹೊಸವರ್ಷದ ಕೊಡುಗೆಯಾಗಿದೆ ಎಂದು ರಾಜ್ಯದ ಕಾನೂನು ಸಚಿವ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಬಹುದಿನಗಳ ಬೇಡಿಕೆ ಇದರಿಂದ ಈಡೇರಿದಂತಾಗಿದೆ. ರಾಜ್ಯದ ಜನತೆಗೆ ತೀರ್ಪು ಹರ್ಷ ತಂದಿದೆ ಎಂದು ಹೇಳಿದ ಅವರು, ಆಲಮಟ್ಟಿ ಅಣೆಕಟ್ಟೆಯನ್ನು ೫೨೪.೨೬ ಮೀಟರ್‌ಗೆ ಏರಿಸಲು ಅವಕಾಶ ನೀಡಿರುವುದರಿಂದ ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಅನುವಾಗುತ್ತದೆ ಎಂದು ಹೇಳಿದರು.

ನ್ಯಾಯಮೂರ್ತಿ ಬ್ರಿಜೆಶ್ ಕುಮಾರ್ ಅವರು ರಾಜ್ಯದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ. ಬಿ ಸ್ಕೀಂನಲ್ಲಿ ರಾಜ್ಯಕ್ಕೆ ೧೭೭ ಟಿ.ಎಂ.ಸಿ. ನೀರು ಹೆಚ್ಚುವರಿಯಾಗಿ ದೊರೆತಿದ್ದು ಇದರಿಂದ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಹೇಳಿದರು.

ತೀರ್ಪು ಮೇಲ್ನೋಟಕ್ಕೆ ನಮ್ಮ ಪರವಾಗಿ ಕಂಡುಬಂದಿದೆ. ಆದಾಗ್ಯೂ ಹೆಚ್ಚುವರಿ ನೀರಿನ ಹಂಚಿಕೆ ಕುರಿತಂತೆ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಬಳಿಕ ರಾಜ್ಯ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲಿದೆ ಎಂದು ಹೇಳಿದರು.

ಪ್ರತಿವರ್ಷ ಜೂನ್ ಜುಲೈ ತಿಂಗಳಿನಲ್ಲಿ ಆಂಧ್ರಪ್ರದೇಶಕ್ಕೆ ೮ರಿಂದ ೧೦ ಟಿ.ಎಂ.ಸಿ. ಅಡಿ ನೀರು ಹರಿಸುವುದು ರಾಜ್ಯಕ್ಕೆ ಕಷ್ಟವಾಗುವುದಿಲ್ಲ ಎಂದೂ ಅವರು ಹೇಳಿದರು.

ಸ್ವಾಗತ: ನ್ಯಾಯಾಧೀಕರಣದ ತೀರ್ಪು ಒಟ್ಟಾರೆಯಾಗಿ ರಾಜ್ಯದ ಪರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾವೇರಿ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿತ್ತು. ಆದರೆ ಕೃಷ್ಣ ನ್ಯಾಯಾಧಿಕರಣದ ತೀರ್ಪು ಕೊಂಚ ತೃಪ್ತಿ  ತಂದಿದೆ ಎಂದರು.

ನ್ಯಾಯಮಂಡಳಿ ತೀರ್ಪು ಸಂತಸ ತಂದಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ  ಜಿ. ಪರಮೇಶ್ವರ್ ಹೇಳಿದ್ದಾರೆ. ರಾಜ್ಯಕ್ಕೆ ನ್ಯಾಯ ದೊರೆತಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಸರ್ಕಾರ ಕೂಡಲೇ ಬಜೆಟ್‌ನಲ್ಲಿ ಶೇ. ೩೦ ರಷ್ಟು ಹಣವನ್ನು ಮೀಸಲಿಟ್ಟು ಆಲಮಟ್ಟಿ ಅಣೆಕಟ್ಟೆ ಎತ್ತರಿಸಬೇಕು. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

 ಮುಖಪುಟ /ಸುದ್ದಿ ಸಮಾಚಾರ