ಮುಖಪುಟ /ಸುದ್ದಿ ಸಮಾಚಾರ   
      

ಕೃಷ್ಣಾ ನ್ಯಾಯಮಂಡಳಿ ಐತೀರ್ಪು, ರಾಜ್ಯಕ್ಕೆ

Alamatti damಬೆಂಗಳೂರು, ಡಿ. ೩೦ : ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತಂತೆ ನ್ಯಾ.ಬ್ರಿಜೆಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣ ಇಂದು ತನ್ನ ಐತೀರ್ಪು ಪ್ರಕಟಿಸಿದ್ದು, ಆಲಮಟ್ಟಿ ಅಣೆಕಟ್ಟೆಯನ್ನು ೫೧೯ ಮೀಟರ್‌ಗಳಿಂದ ೫೨೪.೨೬ ಮೀಟರ್‌ಗೆ ಏರಿಕೆ ಮಾಡಲು ಅನುಮತಿ ನೀಡಿದೆ. ಈ ಮೂಲಕ ಕರ್ನಾಟಕಕ್ಕೆ ಹೊಸವರ್ಷದ ಕೊಡುಗೆ ನೀಡಿದೆ.

ಐತೀರ್ಪಿನನ್ವಯ ಕರ್ನಾಟಕಕ್ಕೆ ಎ ಸ್ಕೀಂನಲ್ಲಿ ೭೩೪ ಟಿಎಂಸಿ ಮತ್ತು ಬಿ. ಸ್ಕೀಂನಲ್ಲಿ ೧೭೭ ಟಿ.ಎಂ.ಸಿ. ನೀರು ದೊರಕಲಿದ್ದು ಎರಡೂ ಸ್ಕೀಂಗಳಿಂದ ಒಟ್ಟು ೯೧೧ ಟಿ.ಎಂ.ಸಿ. ನೀರು ಲಭ್ಯವಾಗಲಿದೆ.

ಆಂಧ್ರಪ್ರದೇಶಕ್ಕೆ ಎ ಸ್ಕೀಂನಡಿ ೮೧೧ ಮತ್ತು ಬಿ ಸ್ಕೀಂನಡಿ ೧೯೦ ಟಿ.ಎಂ.ಸಿ. ನೀರು ದೊರಕಲಿದ್ದು ಕೃಷ್ಣ ನದಿಯಿಂದ ಗರಿಷ್ಠ ಮಟ್ಟದ ಅಂದರೆ ೧೦೦೧ ಟಿಎಂಸಿ ನೀರು ಬಳಸಿಕೊಳ್ಳುವ ಅವಕಾಶವನ್ನು ಪಡೆದಿದೆ.

ಮಹಾರಾಷ್ಟ್ರಕ್ಕೆ ಎ ಸ್ಕೀಂನಡಿ ೫೮೫ ಮತ್ತು ಬಿ ಸ್ಕೀಂನಲ್ಲಿ ೮೧ ಸೇರಿ ಒಟ್ಟು ೬೬೬ ಟಿಎಂಸಿ ನೀರು ಹಂಚಿಕೆ ಮಾಡಿ ನ್ಯಾಯಾಧಿಕರಣ ತನ್ನ ಐತೀರ್ಪು ಪ್ರಕಟಿಸಿದೆ. ಬಜಾವತ್ ನ್ಯಾಯಮಂಡಳಿಯ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಧಿಕರಣ ಬಿ ಸ್ಕೀಂ ನೀರಿನ ಹಂಚಿಕೆಯನ್ನು ಮಾತ್ರವೇ ಮಾಡಿದೆ. ಈ ತೀರ್ಪು ೩೧-೦೫-೨೦೫೦ವರೆಗೆ ಜಾರಿಯಲ್ಲಿದ್ದು, ೨೦೫೦ರ ಬಳಿಕ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಿಸಲು ಅವಕಾಶವಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ತುಂಗಭದ್ರಾ ಯೋಜನೆಯಿಂದ ೩೬೦ ಟಿ.ಎಂ.ಸಿ. ನೀರು ಬಳಸಿಕೊಳ್ಳಲು ಕೂಡ ನ್ಯಾಯಮಂಡಳಿ ಅನುಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಆಲಮಟ್ಟಿ ಅಣೆಕಟ್ಟೆಯ ಎತ್ತರ ಮಾಡುವ ಕುರಿತಂತೆ ತಕರಾರು ತೆಗೆದಿದ್ದ ಆಂಧ್ರಪ್ರದೇಶದ ಬೇಡಿಕೆಯನ್ನು ನ್ಯಾಯಮಂಡಳಿ ತಿರಸ್ಕರಿಸಿದೆ. ಆಲಮಟ್ಟಿ ಎತ್ತರವನ್ನು ೫೦೯ ಮೀಟರ್‌ಗೆ ತಗ್ಗಿಸಬೇಕೆಂದು ಆಂಧ್ರಪ್ರದೇಶದ ಬೇಡಿಕೆಯನ್ನೂ ತಿರಸ್ಕರಿಸಿದೆ.

ಆಂಧ್ರಪ್ರದೇಶ ಅಕ್ರಮವಾಗಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ಹೆಚ್ಚುವರಿ ನೀರು ಕೇಳುತ್ತಿದೆ. ಇದು ಸಮರ್ಥನೀಯವಲ್ಲ ಎಂದು ರಾಜ್ಯ ಹೇಳಿತ್ತು.

ಈ ಮಧ್ಯೆ ಪ್ರತಿವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಆಂಧ್ರಪ್ರದೇಶಕ್ಕೆ ೮ರಿಂದ ೧೦ ಟಿಎಂಸಿ ಅಡಿ ನೀರು ಬಿಡುವಂತೆ ಕೂಡ ತೀರ್ಪಿನಲ್ಲಿ ತಿಳಿಸಲಾಗಿದೆ.

೩ ತಿಂಗಳ ಬಳಿಕ ಅನುಷ್ಠಾನ ಮಂಡಳಿ

ಈ ಮಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಕೃಷ್ಣ ನದಿ ನೀರಿನ ಕುರಿತ ನ್ಯಾಯಮಂಡಳಿಯ ತೀರ್ಪನ್ನು ಜಾರಿಗೆ ತರಲು ಇನ್ನು ಮೂರು ತಿಂಗಳುಗಳ ನಂತರ ಅನುಷ್ಠಾನ ಮಂಡಳಿ ರಚಿಸುವುದಾಗಿ ಹೇಳಿದೆ.

 ಮುಖಪುಟ /ಸುದ್ದಿ ಸಮಾಚಾರ