ಮುಖಪುಟ /ಸುದ್ದಿ ಸಮಾಚಾರ   
      

ಪುಟ್ಟಣ್ಣ ಪ್ರಶಸ್ತಿ - ಗಿರೀಶ್ ಕಾರ್ನಾಡ್ ನಿರಾಕರಣೆ

Girish Karnadಬೆಂಗಳೂರು, ನ.4: ಖ್ಯಾತ ಚಿತ್ರ ನಿರ್ದೇಶಕ ಭಾರ್ಗವ ನೇತೃತ್ವದಲ್ಲಿ 2008-09ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳಿಗೆ ಮತ್ತು ಜೀವಿತಾವಧಿ ಸಾಧನೆಗೆ ಪ್ರಶಸ್ತಿಗೆ ಆಯ್ಕೆ ಮಾಡಲು ರಚಿಸಲಾಗಿದ್ದ ಪ್ರಶಸ್ತಿ ಆಯ್ಕೆ ಸಮಿತಿ ಪ್ರತಿಷ್ಠಿತ ದಿ.ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಕೆ.ಎಸ್.ಆರ್. ದಾಸ್ ಅವರನ್ನು ಆಯ್ಕೆ ಮಾಡಿ, ವಿರೋಧ ಬಂದ ಹಿನ್ನೆಲೆಯಲ್ಲಿ ದಿಢೀರ್ ಎಂದು ತನ್ನ ನಿರ್ಧಾರ ಬದಲಿಸಿ ಗಿರೀಶ್ ಕಾರ್ನಾಡ್ ಹೆಸರು ಪ್ರಕಟಿಸಿ ಪ್ರಮಾದ ಎಸಗಿತ್ತು.

ಈಗ ಇದು ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಖ್ಯಾತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಗಿರೀಶ್ ಕಾರ್ನಾಡ್ ತಾವು ಈ ಪ್ರಶಸ್ತಿ ಪಡೆಯಲು ಆಗುತ್ತಿಲ್ಲ ಎಂದು ವಾರ್ತಾ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ನನಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಕೊಟ್ಟಿರುವುದು ಗೌರವ ಎಂದು ಭಾವಿಸುತ್ತೇನೆ. ಆದರೆ ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಕಾರ್ನಾಡ್ ಅವರ ಹೆಸರು ಮೊದಲಿಗೇ ಆಯ್ಕೆ ಸಮಿತಿಯ ಸಭೆಯಲ್ಲಿ ಮೂಡಿಬಂದಿದ್ದರೂ ಅದಕ್ಕೆ ಎಲ್ಲರೂ ವಿರೋಧ ಪಡಿಸಿದ್ದರು ಎಂದು ಸಮಿತಿಯ ಅಧ್ಯಕ್ಷರೇ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದು ಕಾರ್ನಾಡ್ ಅವರಿಗೆ ನೋವುಂಟು ಮಾಡಿದೆ.

ಪತ್ರಕರ್ತರ ಬಲವಂತಕ್ಕೆ ತಮಗೆ ಕಾಟಾಚಾರಕ್ಕೆ ಪ್ರಶಸ್ತಿ ನೀಡಲಾಗಿದೆ ಎಂಬ ನೋವು ಮೂಡಿದೆ. ಜೊತೆಗೆ ಯಾರಿಗೋ ನೀಡಿದ್ದ ಪ್ರಶಸ್ತಿಯನ್ನು ಕೊನೆ ಕ್ಷಣದಲ್ಲಿ ತಮಗೆ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಮತ್ತು ಗೊಂದಲದ ಹಿನ್ನೆಲೆಯಲ್ಲಿ ತಾವು ಪ್ರಶಸ್ತಿ ಸ್ವೀಕರಿಸುವುದು ಸೂಕ್ತವೇ ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಕರುನಾಡಿನ ಹೆಮ್ಮೆಯ ಪರಿಪೂರ್ಣ ನಾಟಕಕಾರ ಕಾರ್ನಾಡ್
 

  ಮುಖಪುಟ /ಸುದ್ದಿ ಸಮಾಚಾರ