ಮುಖಪುಟ /ಸುದ್ದಿ ಸಮಾಚಾರ   

ಕನ್ನಡಚಿತ್ರರಂಗದ ಸಾಹಸಸಿಂಹ, ಕರುಣಾಮಯಿ ಇನ್ನಿಲ್ಲ
1952ರಲ್ಲಿ ಮೈಸೂರಿನಲ್ಲೇ ಹುಟ್ಟಿದ ಕನ್ನಡದ ಹೆಸರಾಂತ ಚಿತ್ರನಟ, ವಿಷ್ಣುವರ್ಧನ್ ಡಿ.30ರಂದು ಮೈಸೂರಿನಲ್ಲೇ ಇಹವನ್ನು ತ್ಯಜಿಸಿದರೆಂದು ತಿಳಿಸಲು ವಿಷಾದಿಸುತ್ತೇವೆ...

ಡಾ. ವಿಷ್ಣುವರ್ಧನ್ ಇನ್ನಿಲ್ಲಬೆಂಗಳೂರು, ಡಿಸೆಂಬರ್ 30: ಕನ್ನಡ ಚಿತ್ರರಂಗದ ಹೆಸರಾಂತ ನಟ ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಡಾ. ವಿಷ್ಣುವರ್ಧನ್ ಅವರು ಪತ್ನಿ ಭಾರತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ವಿಷ್ಣುವರ್ಧನ್ ಅವರು ನಿನ್ನೆ ರಾತ್ರಿ ಹೃದಯಾಘಾತಕ್ಕೆ ತುತ್ತಾದರು. ತತ್ ಕ್ಷಣವೇ ಅವರಿಗೆ ವೈದ್ಯೋಪಚಾರ ಮಾಡಲಾಯಿತಾದರೂ ಫಲಕಾರಿ ಆಗಲಿಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ವಿಷ್ಣುವರ್ಧನ್ ಅವರ ಪಾರ್ಥಿವ ಶರೀರವನ್ನು ಜಯನಗರ ಅವರ ನಿವಾಸಕ್ಕೆ ತರಲಾಯಿತು.  ಸುದ್ದಿ ತಿಳಿಯುತ್ತಿದ್ದಂತೆಯೇ ಸಹಸ್ರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸಾಹಿತಿಗಳು ಜಯನಗರದ ಅವರ ನಿವಾಸದ ಬಳಿ ಸೇರಿ ತಮ್ಮ ನಾಯಕನ ಅಂತಿಮ ದರ್ಶನ ಮಾಡಿ ಕಂಬನಿಗರೆದರು.

ವಂಶವೃಕ್ಷ, ನಾಗರಹಾವು, ಸಾಹಸಸಿಂಹ, ಚಿನ್ನ ನಿನ್ನ ಮುದ್ದಾಡುವೆ, ಕರುಣಾಮಯಿ, ದಿಗ್ಗಜರು, ಸಿಂಹಾದ್ರಿಯ ಸಿಂಹ, ಯಜಮಾನ, ಬಳ್ಳಾರಿ ನಾಗ ಸೇರಿದಂತೆ 197ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ.

vishnuvardhanಮಡುಗಟ್ಟಿದ ಶೋಕ: ತಮ್ಮ ನೆಚ್ಚಿನ ನಾಯಕ ನಟ ವಿಷ್ಣುವರ್ಧನ್ ಹಠಾತ್ ಕಣ್ಮರೆ ಆದ ಸುದ್ದಿ ತಿಳಿಯುತ್ತಿದ್ದಂತೆ, ಹಲವಾರು ಅಭಿಮಾನಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ ಸುದ್ದಿಗಳೂ ಬರುತ್ತಿವೆ. ಜನತೆ ಶಾಂತಿ ಕಾಪಾಡುವಂತೆ ನಟಿ ಹಾಗೂ ಡಾ.ವಿಷ್ಣುವರ್ಧನ್ ಅವರ ಪತ್ನಿ ಭಾರತಿವಿಷ್ಣುವರ್ಧನ್ ಮನವಿ ಮಾಡಿದ್ದಾರೆ. ಇಡೀ ಕನ್ನಡ ನಾಡಿನಲ್ಲಿ ಈಗ ಶೋಕ ಮಡುಗಟ್ಟಿದೆ. ಕನ್ನಡ ಚಿತ್ರೋದ್ಯಮಕ್ಕೆ ಇಂದು ಒಂದು ದಿನದ ರಜೆ ಘೋಷಿಸಲಾಗಿದೆ. ಬೆಂಗಳೂರಿನ ಶಾಲೆ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.

ಮುಖ್ಯಮಂತ್ರಿ ಕಂಬನಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಷ್ಣುವರ್ಧನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಡಾ. ರಾಜ್ ಕುಮಾರ್ ಅವರ ನಂತರ ಡಾ. ವಿಷ್ಣುವರ್ಧನ್ ಕನ್ನಡದ ದೊಡ್ಡ ನಾಯಕರಾಗಿದ್ದರು. ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಅಭಿನವ ಭಾರ್ಗವನನ್ನು ಕಳೆದುಕೊಂಡು ನಾಡು ಬಡವಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿಧಾನಮಂಡಳ ಶ್ರದ್ಧಾಂಜಲಿ ಸಲ್ಲಿಸಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಸುರೇಶ್ ಕುಮಾರ್ ಮೊದಲಾದವರು ವಿಷ್ಣುವರ್ಧನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ವಿಷ್ಣುವರ್ಧನ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಇರಿಸಲಾಗಿತ್ತು. ಲಕ್ಷಾಂತರ ಅಭಿಮಾನಿಗಳು ಬೆಳಗ್ಗೆ 10ಗಂಟೆಯಿಂದ ಸರತಿಯ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಸಂಜೆ ನಾಲ್ಕು ಗಂಟೆಗೆ ಮೈಸೂರು ರಸ್ತೆಯ ಅಭಿಮಾನಿ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೊರಟಾಗ ದರ್ಶನ ಸಿಗದೆ ಆಕ್ರೋಶಗೊಂಡ ಅಭಿಮಾನಿಗಳು ಗಾಂಧಿಬಜಾರ್, ಗವಿಪುರ, ಹನುಮಂತನಗರ, ಚಾಮರಾಜಪೇಟೆ ಮೊದಲಾದೆಡೆ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಾರಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ರಾತ್ರಿ 8 ಗಂಟೆ ಹೊತ್ತಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ. ವಿಷ್ಣುವರ್ಧನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅಭಿಮಾನ್ ಸ್ಟುಡಿಯೋದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.
ಮರೆಯಲಾಗದ ಮಾಣಿಕ್ಯ ವಿಷ್ಣುವರ್ಧನ್

 ಮುಖಪುಟ /ಸುದ್ದಿ ಸಮಾಚಾರ