ಮುಖಪುಟ /ಸುದ್ದಿ ಸಮಾಚಾರ   

ನಾಡಿನ ಕಲೆ ಸಂಸ್ಕೃತಿ ರಕ್ಷಣೆಗೆ ಡಾ. ಜೋಶಿ ಕರೆ

ಡಾ.ಮಹೇಶ್ ಜೋಶಿಬೆಂಗಳೂರು, ಡಿ.25: ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಪ್ರಕಾಶಕ್ಕೆ ತರಲು ಶಾಲಾ ವಾರ್ಷಿಕೋತ್ಸವಗಳು ಹಾಗೂ ಸಾಂಸ್ಕೃತಿಕ ಮೇಳಗಳು ಸಹಕಾರಿ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಗಿರಿನಗರದ ಎಂ.ಎಲ್.ಪಿ.ಎಸ್. ಹಾಗೂ ಎಂ.ಎಲ್.ಇ.ಎಸ್. ಶಿಕ್ಷಣ ಸಂಸ್ಥೆಯ 16ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ ಸಾಂಸ್ಕೃತಿಕ ರಾಯಭಾರಿಗಳಾಗಿ, ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.

ಪತ್ರಕರ್ತೆ ರಾಧಿಕಾ ಭಾರದ್ವಾಜ್, ಇಂದಿನ ಸ್ಪರ್ಧಾ ಯುಗದ ಪೈಪೋಟಿಯಲ್ಲಿ ಮಕ್ಕಳಿಗೆ ಒತ್ತಡ ಹೆಚ್ಚಾಗುತ್ತಿದೆ. ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಒತ್ತಡ ಮುಕ್ತ ಸನ್ನಿವೇಶದಲ್ಲಿ ಶಿಕ್ಷಣ ಕಲಿಯುವ ವಾತಾವರಣ ಕಲ್ಪಿಸಬೇಕು ಎಂದರು.

ಪತ್ರಕರ್ತ ಸತೀಶ್, ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಕನ್ನಡ ಕಲಿಕೆಗೆ ಪ್ರಾಧಾನ್ಯತೆ ನೀಡುತ್ತಿರುವ ಎಂ.ಎಲ್.ಇ.ಎಸ್. ಶಿಕ್ಷಣ ಸಮೂಹವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸ್ಥಾಪಕರಾದ ಡಾ. ಸಿ. ಸುನಿಲ್ ಕುಮಾರ್, ಗಿರಿನಗರ ಸುತ್ತಮುತ್ತಲ ಪ್ರದೇಶದಲ್ಲಿ ಸಿ.ಬಿ.ಎಸ್.ಇ., ಐ.ಸಿ.ಎಸ್.ಇ. ಹಾಗೂ ರಾಜ್ಯ ಪರೀಕ್ಷಾ ಮಂಡಳಿಯ ಮಾನ್ಯತೆ ಪಡೆದ ಏಕೈಕ ಶಾಲೆ ತಮ್ಮದಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.  

ಸರ್.ಎಂ. ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಶ್ರೀನಿವಾಸ್, ಪ್ರಾಂಶುಪಾಲರಾದ ಡಾ.ಸುಧಾ ಪ್ರಸನ್ನ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆಯಿತು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆಯ ಯಶೋಗಾಥೆ

 ಮುಖಪುಟ /ಸುದ್ದಿ ಸಮಾಚಾರ