ಮುಖಪುಟ /ಸುದ್ದಿ ಸಮಾಚಾರ   

ಹಾಡು ಮುಗಿಸಿದ ಗಾನಗಾರುಡಿಗ ಸಿ.ಅಶ್ವತ್ಥ್
ಹುಟ್ಟು ಹಬ್ಬದ ದಿನವೇ ಅಸ್ತಂಗತರಾದ ಕಂಚಿನ ಕಂಠದ ಗಾಯಕ

C.Ashwth, ಸಿ. ಅಶ್ವತ್ಥ್, ಗಾನ ಗಾರುಡಿಗ, sugamasangeetha singerಬೆಂಗಳೂರು, ಡಿಸೆಂಬರ್ 29: ಕನ್ನಡದ ಹೆಸರಾಂತ ಸುಗಮ ಸಂಗೀತಗಾರ, ಸಂಗೀತ ಸಂಯೋಜಕ, ಗಾಯಕ ಡಾ. ಸಿ. ಅಶ್ವತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ಬೆಳಗ್ಗೆ ನಿಧನ ಹೊಂದಿದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಅಶ್ವತ್ಥ್ ಪತ್ನಿ ಚಂದ್ರಾ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಸಂತ ಶಿಶುನಾಳ ಷರೀಫರ ತತ್ವ ಪದಗಳನ್ನು ಹಾಡಿ ಜನಪ್ರಿಯಗೊಳಿಸುವ ಮೂಲಕ ನಾಡಿನ ಜನತೆಗೆ ಚಿರಪರಿಚಿತರಾದ ಅಶ್ವತ್ಥ್, ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆದ ಕನ್ನಡವೇ ಸತ್ಯ ಗಾಯನ ಕಾರ್ಯಕ್ರಮದ ಮೂಲಕ ಮನೆ ಮಾತಾದರು.

ಮೂತ್ರಕೋಶ ಹಾಗೂ ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದ ಅಶ್ವತ್ಥ್ ಡಿ.17ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾಣದೆ ಇಂದು ಬೆಳಗ್ಗೆ 10-45ರ ಸುಮಾರಿನಲ್ಲಿ ಅವರು ನಿಧನ ಹೊಂದಿದರು.

ಅಶ್ವತ್ಥ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಹಸ್ರಾರು ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿದರು. ನಂತರ ಅಶ್ವತ್ಥ್ ಪಾರ್ಥಿವ ಶರೀರವನ್ನು ನರಸಿಂಹರಾಜ ಕಾಲೋನಿಯ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಅಷ್ಟುಹೊತ್ತಿಗಾಗಲೇ ಸಹಸ್ರಾರು ಅಭಿಮಾನಿಗಳು ಅಲ್ಲಿ ಸೇರಿದ್ದ ಕಾರಣ, ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರ ಬಳಿಯ ಸಂಸ ಬಯಲು ರಂಗಮಂದಿರಕ್ಕೆ ತೆಗೆದುಕೊಂಡು ಹೋಗಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.

ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಶ್ವತ್ಥ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿವಿಧಾನಗಳ ರೀತ್ಯ ನೆರವೇರಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಶ್ವತ್ಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ವಿಧಾನಮಂಡಳದ ಉಭಯ ಸದನಗಳಲ್ಲಿ ಅಶ್ವತ್ಥ್ ನಿಧನಕ್ಕೆ ಸಂತಾಪ ಸೂಚಿಸಿ ಕಲಾಪವನ್ನು ಒಂದು ದಿನ ಮುಂದೂಡಲಾಯಿತು. ವಿಧಾನಪರಿಷತ್ತಿನಲ್ಲಿ ಕವಿ ದೊಡ್ಡರಂಗೇಗೌಡ ಅವರು, ಆಶು ಕವಿತೆ ರಚಿಸಿ, ವಾಚಿಸಿ ಅಗಲಿದ ಗಾನಗಾರುಡಿಗನಿಗೆ ನುಡಿ ನಮನ ಅರ್ಪಿಸಿದರು.

ಡಾ.ಸಿ.ಅಶ್ವತ್ಥ್ ಕುರಿತು ಯುವ ಗಾಯಕ ಉಪಾಸನಾ ಮೋಹನ್  ಬರೆದ ಲೇಖನ

 ಮುಖಪುಟ /ಸುದ್ದಿ ಸಮಾಚಾರ