ಮುಖಪುಟ /ಸುದ್ದಿ ಸಮಾಚಾರ   

ಆರ್ಥಿಕ ಹಿಂಜರಿತ 50ಸಾವಿರ ಐ.ಟಿ.ಉದ್ಯೋಗ ಕಡಿತ
ಮುಂದಿನ 6 ತಿಂಗಳಲ್ಲೇ 50 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್....

ಬೆಂಗಳೂರು, ಡಿ.26: ಇನ್ನು ನಾಲ್ಕು ದಿನ ಕಳೆದರೆ 2008 ಕಾಲಗರ್ಭ ಸೇರುತ್ತದೆ. 2009ರ ಪ್ರಥಮ ಸೂರ್ಯೋದಯವಾಗುತ್ತದೆ. ಎಲ್ಲರೂ 2008ರ ಕಹಿ ಮರೆತು, ಹರುಷ ತರಬಹುದೆನ್ನುವ ನಂಬಿಕೆಯಿಂದ ಹೊಸ ವರ್ಷದತ್ತ ಮುಖ ಮಾಡಿದ್ದಾರೆ.

ಪ್ರಸಕ್ತ ವರ್ಷ ಜಗತ್ತನ್ನೇ ಕಾಡಿದ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಐ.ಟಿ. ಕ್ಷೇತ್ರ ಸಹ ಹೊಸ ನಿರೀಕ್ಷೆಗಳೊಂದಿಗೆ 2009ನ್ನು ಕಾತರದಿಂದ ನಿರೀಕ್ಷಿಸುತ್ತಿತ್ತು.

ಆದರೆ, ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಉದ್ದಿಮೆಗಳ ಉದ್ಯೋಗಿಗಳ ಸಂಘಟನೆ ಯುನೈಟ್ಸ್ ಸಮೀಕ್ಷಾ ವರದಿ ಜಾಗತಿಕ ಆರ್ಥಿಕ ಹಿಂಜರಿತದ ಪ್ರಸಕ್ತ ಸನ್ನಿವೇಶದಲ್ಲಿ 2009 ಸಹ ಶುಭದಾಯಕವಲ್ಲ ಎಂಬ ಅಂಶವನ್ನು ಹೊರಹಾಕಿ ಮತ್ತಷ್ಟು ಆತಂಕ ಮೂಡಿಸಿದೆ.

ಯುನೈಟ್ಸ್ ನುಡಿದಿರುವ ಭವಿಷ್ಯದ ಪ್ರಕಾರ ಮುಂದಿನ 6 ತಿಂಗಳ ಅವಧಿಯಲ್ಲೇ ದೇಶದಲ್ಲಿ 50ಸಾವಿರಕ್ಕೂ ಹೆಚ್ಚು ಐ.ಟಿ. ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರಫ್ತು ಮತ್ತು ಹೊರಗುತ್ತಿಗೆಯನ್ನೇ ಆವಲಂಬಿಸಿರುವ ಐ.ಟಿ.ಕ್ಷೇತ್ರದ ಸ್ಥಿತಿ ಮುಂದಿನ 6 ತಿಂಗಳಲ್ಲಿ ಮತ್ತಷ್ಟು ಬಿಗಡಾಯಿಸಲಿದೆ ಎನ್ನುತ್ತದೆ ಯುನೈಟ್ಸ್.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವ್ಯಾಪಕವಾದ ಜಾಗತಿಕ ಆರ್ಥಿಕ ಹಿನ್ನಡೆಯ ಫಲವಾಗಿ ಕಳೆದ 3 ತಿಂಗಳ ಅವಧಿಯಲ್ಲೇ ಬಿಪಿಓ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಸರಿಹೋಗಬಹುದು ಎಂಬ ಆಶಾವಾದದಿಂದ ನೌಕರರ ಹೊರೆ ಸಹಿಸಿಕೊಂಡಿದ್ದ ಮಧ್ಯಮ ಗಾತ್ರದ ಕಂಪನಿಗಳು ಈಗ ವಿಧಿಯಿಲ್ಲದೆ ತಮ್ಮ ನೌಕರರಿಗೆ ಪಿಂಕ್ ಸ್ಲಿಪ್ ನೀಡಲಿವೆ ಎಂದು ಯುನೈಟ್ಸ್ ಇಂಡಿಯಾ ಕಳವಳ ವ್ಯಕ್ತಪಡಿಸಿದೆ.

ಮುಖಪುಟ /ಸುದ್ದಿ ಸಮಾಚಾರ