ಮುಖಪುಟ /ಸುದ್ದಿ ಸಮಾಚಾರ   

ಭಯೋತ್ಪಾದಕ ನಿಗ್ರಹ ಪೊಲೀಸರ ಜವಾಬ್ದಾರಿ- ಪಾಶಾ

ಗುಲಬರ್ಗಾ, ಡಿ. ೨೩:  ಭಯೋತ್ಪಾದಕ ದಾಳಿಗಳು ದೇಶದ ಆಂತರಿಕ ರಕ್ಷಣೆ ವ್ಯವಸ್ಥೆಗೆ ಸವಾಲಾಗಿವೆ. ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವ ನೀಡಿ, ಉಗ್ರಗಾಮಿ ಚಟುವಟಿಕೆಗಳನ್ನು ಆರಂಭದಲ್ಲೇ ಹದ್ದುಬಸ್ತಿನಲ್ಲಿ ಇರಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಎಂ.ಎಫ್.ಪಾಶಾ ಅಭಿಪ್ರಾಯಪಟ್ಟಿದ್ದಾರೆ.

ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ನೂತನ ಪರೇಡ್ ಮೈದಾನದಲ್ಲಿ  ಆಯೋಜಿಸಲಾಗಿದ್ದ ನಾಲ್ಕನೇ ತಂಡದ ನಾಗರಿಕ ಪೊಲೀಸ್ ಪೇದೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಬಹುಮಾನ ವಿತರಣೆ ಮಾಡಿದ ನಂತರ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿ ಉಗ್ರರ ದಾಳಿಗಳನ್ನು ಪೊಲೀಸರು ನಿಯಂತ್ರಿಸಿದಲ್ಲಿ ನೌಕಾಪಡೆ, ವಾಯುಪಡೆಯ ಸಹಕಾರದೊಂದಿಗೆ ಉಗ್ರರೊಂದಿಗೆ ಜಯ ಸಾಧಿಸಬಹುದಾಗಿದೆ ಎಂದರು.

ಇತ್ತೀಚಿಗೆ ಮುಂಬೈನಲ್ಲಿ ಜರುಗಿದ ಉಗ್ರರ ದಾಳಿಯಲ್ಲಿ ಒಬ್ಬ ಉಗ್ರನನ್ನು ಜೀವಸಹಿತವಾಗಿ ಹಿಡಿಯುವಲ್ಲಿ ಪೊಲೀಸರು ಯಶಸ್ಸು ಸಾಧಿಸಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಕಾರ್ಯಹಿಸುವ ಪೊಲೀಸ್ ಪೇದೆಗಳ ಕರ್ತವ್ಯ ಮಹತ್ವದ್ದಾಗಿದೆ. ಪೊಲೀಸರು ತಮ್ಮ ದಿನನಿತ್ಯದ ಕರ್ತವ್ಯದಲ್ಲಿ ತಂತ್ರಜ್ಞಾನದ ಸಹಾಯದೊಂದಿಗೆ ಜ್ಞಾನ, ಪರಿಣಿತಿಯನ್ನು ಬಳಿಸಿಕೊಂಡು ಸವಾಲುಗಳನ್ನು ಎದುರಿಸಬೇಕು ಎಂದು ತಿಳಿಸಿದರು.

ನಾಗರಿಕರು ದೂರು ನೀಡಲು ಬಂದಾಗ ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಿ ಕಾನೂನಿನ ನೆರವು ಒದಗಿಸಬೇಕು. ಜನಸಾಮಾನ್ಯರೊಂದಿಗೆ  ವಿನಯತೆಯಿಂದ, ಜವಾಬ್ದಾರಿಯಿಂದ  ವರ್ತಿಸಿ ಮೆಚ್ಚುಗೆ ಪಡೆಯಬೇಕು. ದರ್ಪ, ಅಹಂಕಾರ ತೋರದೆ, ಅಧಿಕಾರದ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಡಿ.ಐ.ಜಿ.ಪಿ. ಡಾ|| ಕೆ.ರಾಮಚಂದ್ರರಾವ್ ವರದಿ ವಾಚನ ಮಾಡಿ, ನಾಲ್ಕನೇ ತಂಡದ ಒಟ್ಟು ೪೮೬ ನಾಗರಿಕ ಪೊಲೀಸ್ ಪೇದೆ ಪ್ರಶಿಕ್ಷಣಾರ್ಥಿಗಳಿಗೆ ೯ ತಿಂಗಳ ಮೂಲ ತರಬೇತಿಯನ್ನು ನೀಡಲಾಗಿದೆ. ಈ ಪೈಕಿ ಬೆಂಗಳೂರಿನ ಆಯುಕ್ತಾಲಯದ ೩೦೬, ಬೆಳಗಾವಿ ಜಿಲ್ಲೆಯ ೧೨೩, ರೈಲ್ವೇ ಪೊಲೀಸ್‌ನ ೫೬ ಹಾಗೂ ಬಾಗಲಕೋಟ ಜಿಲ್ಲೆಯ ಒಬ್ಬ ನಾಗರಿಕ ಪೊಲೀಸ್ ಪೇದೆಗಳಿದ್ದಾರೆ ಎಂದರು.

ಇದಕ್ಕೂ ಮುನ್ನ ಪೊಲೀಸ್ ಮಹಾನಿರೀಕ್ಷಕ(ತರಬೇತಿ) ಎಂ.ಎಫ್.ಪಾಶಾ ಅವರು ನೂತನ ಪರೇಡ್ ಮೈದಾನದ ಉದ್ಘಾಟನೆ ನೆರವೇರಿಸಿದರು.           ಕಾರ್ಯಕ್ರಮದಲ್ಲಿ  ಬಾನು ಪಾಶಾ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮುರ್ತಿ, ಪೊಲೀಸ್ ಅಧೀಕ್ಷಕ ದೇವಜ್ಯೋತಿ ರೇ, ಕೆ.ಎಸ್.ಆರ್.ಪಿ. ಕಮಾಂಡೆಂಟ್ ರಹೀಮ್ ಮತ್ತಿತರರು ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ