ಮುಖಪುಟ /ಸುದ್ದಿ ಸಮಾಚಾರ   

ಉಪಾಸನದಿಂದ ರಜತ ಗೀತ ಸಂಭ್ರಮ

Upasana Mohanಬೆಂಗಳೂರು: ಸುಗಮ ಸಂಗೀತವನ್ನು ಮನೆ ಮನಗಳಿಗೆ ತಲುಪಿಸುತ್ತಿರುವ ಸಂಗೀತ ಶಾಲೆ ಉಪಾಸನಾ ಡಿ.25ರಂದು ಸಂಜೆ ಬಸವನಗುಡಿಯ ಕೋಹಿನೂರ್ ಆಟದ ಮೈದಾನದಲ್ಲಿ ಬೃಹತ್ ಗೀತ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಿದೆ.

ಪ್ರತಿ ತಿಂಗಳ ಎರಡನೇ ಶನಿವಾರ ಮನೆಯಂಗಳದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ರೂಪಿಸುತ್ತಿರುವ ಉಪಾಸನಾ ಸಂಸ್ಥೆ ಈ ಸರಣಿಯ ಗೀತವಾಹಿನಿಯ ಮೂಲಕ ಬೆಂಗಳೂರಿನ ವಿವಿಧ ಬಡಾವಣೆಗಳ ಮನೆಗಳಿಗೇ ಹೋಗಿ ಸಂಗೀತದ ರಸಧಾರೆ ಹರಿಸಿ, ಇಂದಿನ ಪೀಳಿಗೆಗೆ ಸುಗಮ ಸಂಗೀತದ ಹಿರಿಮೆಯನ್ನು ಪರಿಚಯಿಸುತ್ತಿದೆ.

ಈ ಸಂಸ್ಥೆಯ ಸ್ಥಾಪಕರೂ ಹೆಸರಾಂತ ಸುಗಮ ಸಂಗೀತ ಗಾಯಕರೂ ಆದ ಜೆ. ಮೋಹನ್ ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳ ಹಾಗೂ ಉದಯೋನ್ಮುಖ ಕವಿಗಳ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಧ್ವನಿಸುರುಳಿಗಳಾಗಿ ಹೊರ ತರುವ ಮೂಲಕ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಈಗ ಆಯೋಜಿಸಿರುವ ರಜತ ಗೀತ ಸಂಭ್ರಮದಲ್ಲಿ ಉಪಾಸನಾ ಸಂಸ್ಥೆ ಹೊರತರುತ್ತಿರುವ 25ನೇ ಸಿ.ಡಿಯ ಬಿಡುಗಡೆಯೂ ನಡೆಯಲಿದೆ.

ಈ ಬೃಹತ್ ಗೀತ ನೃತ್ಯ ಕಾರ್ಯಕ್ರಮವನ್ನು ರಾಜ್ಯದ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದು, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ವೈಕೆ. ಮುದ್ದುಕೃಷ್ಣ, ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ಲಹರಿ ರೆಕಾರ್ಡಿಂಗ್ ಸಂಸ್ಥೆ ಮಾಲಿಕರಾದ ತುಳಸೀರಾಮ ನಾಯ್ಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

shimoga subbanna, halibandi, dixit, kashyapಇದೇ ಸಂದರ್ಭದಲ್ಲಿ ಕನ್ನಡ ನಾಡಿನ ಕವಿಶ್ರೇಷ್ಠರಾದ ಡಾ.ಜಿ.ಎಸ್.ಶಿವರುದ್ರಪ್ಪ, ಡಾ. ಸುಮತೀಂದ್ರ ನಾಡಿಗ್, ಡಾ.ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ, ಎಚ್.ಎಸ್. ವೆಂಕಟೇಶಮೂರ್ತಿ, ಸುಬ್ರಾಯ ಚೊಕ್ಕಾಡಿ, ಬಿ.ಆರ್. ಲಕ್ಷ್ಮಣರಾವ್, ಡಾ.ದೊಡ್ಡರಂಗೇಗೌಡ, ಡುಂಡಿರಾಜ್, ಚಂದ್ರಶೇಖರ ತಾಳ್ಯ ಹಾಗೂ ರಂಜನಿಪ್ರಭು ಅವರನ್ನು ಸನ್ಮಾನಿಸಲಾಗುತ್ತಿದೆ.

ಸಂಗೀತ ರಸಧಾರೆ ಇದೇ ಸಂದರ್ಭದಲ್ಲಿ ನಡೆಯಲಿರುವ ಗೀತಗಾಯನ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸುಬ್ಬಣ್ಣ, ಯಶವಂತ ಹಳಿಬಂಡಿ, ರಮೇಶ್ಚಂದ್ರ, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ನರಹರಿ ದೀಕ್ಷಿತ, ದಿವಾಕರ ಕಶ್ಯಪ, ಅರ್ಚನಾ ಉಡುಪ, ಕೆ.ಎಸ್. ಸುರೇಖಾ, ಎಂ.ಡಿ. ಪಲ್ಲವಿ, ದಿವ್ಯಾ ರಾಘವನ್, ಪಿ.ಎ. ಮಂಗಳಾ, ನಾಗಚಂದ್ರಿಕಾ ಭಟ್ ಮತ್ತಿತರರು ರಸಧಾರೆಯನ್ನೇ ಹರಿಸಲಿದ್ದರೆ, ನಮಿತಾ ಶಂಕರ್ ಅವರ ಶಿಷ್ಯವೃಂದ ತಮ್ಮ ಅಮೋಘ ನೃತ್ಯದ ಮೂಲಕ ಪ್ರೇಕ್ಷಕರ ಮನಸೆಳೆಯಲಿದೆ.

ಉಪಾಸನಾ ಸುಗಮ ಸಂಗೀತ ಸಂಸ್ಥೆ ನಡೆದು ಬಂದ ದಾರಿ...

ಮುಖಪುಟ /ಸುದ್ದಿ ಸಮಾಚಾರ