ಮುಖಪುಟ /ಸುದ್ದಿ ಸಮಾಚಾರ   

ಕೆ.ಆರ್. ದಂಪತಿಗೆ ವಿವಾಹ ಮಹೋತ್ಸವದ ಸುವರ್ಣ ಸಂಭ್ರಮ...

Kaduru Ramaswamy, Smt.Shilaja 50th year Anniversaryಬೆಂಗಳೂರು, ಡಿ.21: ಮದುವೆ ಎರಡು ಕುಟುಂಬಗಳನ್ನು, ಎರಡು ಜೀವಗಳನ್ನು ಬೆಸೆಯುವ ಬಂಧ, ಅನುಬಂಧ. ಆದರೆ, ಇಂದು ಪಾಶ್ಚಾತ್ಯ ಅನುಕರಣೆ, ಆಧುನೀಕರಣದ ತುಳಿತಕ್ಕೆ ಸಿಲುಕಿ ಹಲವು ಸಂಸಾರಗಳು ಅರಳುವ ಮುನ್ನವೇ ಬಾಡುತ್ತಿವೆ. ಮಾನವ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ.

ಮಾರ್ನಿಂಗ್ ಮ್ಯಾರೇಜ್, ನೂನ್ ಹನಿಮೂನ್, ನೈಟ್ ಡೈವರ್ಸ್ ಎನ್ನುವಂತಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಯಾರಾದರೂ ಮದುವೆಯ 50ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಾರೆಂದರೆ ಹುಬ್ಬೇರಿಸುವವರ ಸಂಖ್ಯೆಗೂ ಕಡಿಮೆ ಇಲ್ಲ.

ಇಂದು ಬೆಂಗಳೂರಿನಲ್ಲಿ ಅಂಥ ಒಂದು ಅಪರೂಪದ ಕಾರ್ಯಕ್ರಮ. ಖ್ಯಾತ ಕಥೆಗಾರ, ಸಾಹಿತಿ, ಲೇಖಕ, ಬರಹಗಾರ, ಚಿಂತಕ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮೆಚ್ಚಿನ ಮೇಷ್ಟ್ರು ಕಡೂರು ರಾಮಸ್ವಾಮಿ ಅವರು ತಮ್ಮ ಧರ್ಮಪತ್ನಿ ಶೈಲಜಾ ಅವರನ್ನು ಕೈಹಿಡಿದ 50ನೇ ವರ್ಷದ ಸಂತಸದಲ್ಲಿದ್ದರು.

ಸಂಜೆ ಅವರ ಮನೆಯಲ್ಲೊಂದು ಸಂಭ್ರಮದ ಚಿಕ್ಕ ಚೊಕ್ಕ ಸಮಾರಂಭ. ಬಂಧು, ಮಿತ್ರರು, ಹಿತೈಷಿಗಳು, ಆಪ್ತೇಷ್ಟರ ಜೊತೆಗೆ ಅವರ ಶಿಷ್ಯರು ಕಡೂರು ರಾಮಸ್ವಾಮಿ ದಂಪತಿಗೆ ಶುಭಕೋರಲು ಆಗಮಿಸಿದ್ದರು.

ನಟ, ನಿರ್ದೇಶಕ ಸಿಹಿಕಹಿ ಚಂದ್ರು ತಾವು ಓದಿದ ಮೊದಲ ಕನ್ನಡ ಕೃತಿಯೇ ಕಡೂರು ರಾಮಸ್ವಾಮಿ ಅವರ ಲವ್ವು  ಅವರು ತಮ್ಮ ಮಾನಸಿಕ ಗುರು ಎಂದರೆ, ಹೆಸರಾಂತ ನಾಟಕಕಾರ ಯುವ ಕವಿ ಎಲ್.ಎನ್. ಮುಕುಂದರಾಜ್ ಶಿಷ್ಯರನ್ನು ರೂಪಿಸುವಲ್ಲಿ  ಗುರುವಿನ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಪ್ರತಿಪಾದಿಸಿದರು.ಕುವೆಂಪು ಅವರಿಗೆ ಬಿ.ಎಂ.ಶ್ರೀ, ವೆಂಕಣ್ಣಯ್ಯನವರಿದ್ದಂತೆ ತಮಗೆ ಕೆ.ಆರ್. ಎಂದರು.

ಕನ್ನಡರತ್ನ.ಕಾಂ ಗೌರವ ಪ್ರಧಾನ ಸಂಪಾದಕ, ಪತ್ರಕರ್ತ ಟಿ.ಎಂ. ಸತೀಶ್, ತಮಗೆ ಬರವಣಿಗೆಯನ್ನು ಕಲಿಸಿದ ಗುರುಗಳಿಗೆ ಕೃತಜ್ಞತೆ ಅರ್ಪಿಸಿದರು. ತಮ್ಮ ನೆಚ್ಚಿನ ಗುರುಗಳ 50ನೇ ವಿವಾಹ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಎಷ್ಟು ಶಿಷ್ಯರಿಗೆ ದೊರಕಲು ಸಾಧ್ಯ. ಕೆ.ಆರ್.ರಂಥ ಗುರುವನ್ನು ಪಡೆದ ತಾವು ಧನ್ಯರೆಂದರು.

ಪ್ರಾಧ್ಯಾಪಕ ಚಂದ್ರಮೌಳಿ, ಅಶ್ವತ್ಥನಾರಾಯಣ್, ಕೆ.ಆರ್. ಅವರ ಪುತ್ರ ಶ್ರೀಕಂಠ ಪ್ರಸಾದ್ ಕೆ.ಆರ್. ಅವರ ಬಗ್ಗೆ ಬರೆದ ಸ್ವರಚಿತ ಕವನ ವಾಚಿಸಿದರು. ಕಡೂರು ರಾಮಸ್ವಾಮಿ ಅವರು ಕಾರ್ಯಕ್ರಮದ ಕೊನೆಯಲ್ಲಿ ಕವನದ ಮೂಲಕವೇ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. 

ಮುಖಪುಟ /ಸುದ್ದಿ ಸಮಾಚಾರ