ಮುಖಪುಟ /ಸುದ್ದಿ ಸಮಾಚಾರ   

ವಿವಿಗಳಲ್ಲಿ ವಿದ್ಯುನ್ಮಾನ ಆಡಳಿತ: ಬಿ.ಎಲ್.ಶ್ರೀಧರ್

ಗುಲಬರ್ಗಾ, ಡಿ.೧೯:ಇಲಾಖೆಗಳ ಕಾರ್ಯಕ್ಷಮತೆ ಹೆಚ್ಚಿಸಲು ಇ-ಆಡಳಿತ ನೆರವಾಗಿದ್ದು, ಬೋಧಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇ-ಯೂನಿವರ್ಸಿಟಿ, ಇ-ಲೈಬ್ರರಿ, ಆನ್‌ಲೈನ್ ಸಂವಾದ, ಇ-ಎಕ್ಸಾಮಿನೇಷನ್, ಇ-ಇವ್ಯಾಲುವೇಷನ್ ಮುಂತಾದ ಯೋಜನೆಗಳು ಬರಬೇಕಾಗಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಶ್ರೀಧರ್ ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದಲ್ಲಿ ಇ-ಆಡಳಿತದ ಚಟುವಟಿಕೆಗಳು ಹಾಗೂ ಹೊಸ ಪಾಲಿಸಿಗಳು ಕುರಿತು ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದಲ್ಲಿ ಇ-ಆಡಳಿತ; ಉತ್ತಮ ಆಡಳಿತದ ಮಾರ್ಗಸೂಚಿ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.

ಇ-ಆಡಳಿತವು ಉತ್ತಮ ಆಡಳಿತದ ಕೀಲಿಕೈ ಇದ್ದಂತೆ. ವಿಶ್ವವಿದ್ಯಾಲಯಗಳು ತಮ್ಮ ಆಡಳಿತ ಕ್ರಮದೊಂದಿಗೆ ಇ-ಆಡಳಿತ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಇ-ಆಡಳಿತದಿಂದ ಆಡಳಿತ ಸುಗಮ ಹಾಗೂ ಸುಲಲಿತವಾಗುತ್ತದೆಯಲ್ಲದೆ, ಸಮಯದ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಹೆಚ್‌ಆರ್‌ಎಂಎಸ್. ಭೂಮಿ, ನೆಮ್ಮದಿ, ಸಚಿವಾಲಯ ವಾಹಿನಿ, ಬೆಂಗಳೂರು ಒನ್ ಮುಂತಾದ ವಿದ್ಯುನ್ಮಾನ ಯೋಜನೆಗಳು ಚಾಲ್ತಿಯಲ್ಲಿದ್ದು, ಹೆಚ್ಚು ಜನಪ್ರಿಯವಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಸುರಂಜನ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಡೆಪ್ಯೂಟಿ ಡೈರೆಕ್ಟರ್ ಜನರಲ್ ವಿ.ಪಿ.ಗೋಯಲ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ   ಡಾ|| ಎಸ್.ಕೆ. ಸೈದಾಪೂರ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶೆರಿಗಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕುಮಾರ್ ನಾಯಕ್, ಸರ್ವ ಶಿಕ್ಷಣ ಅಭಿಯಾನದ ಸ್ಟೇಟ್ ಪ್ರೊಜೆಕ್ಟ್ ಡೈರೆಕ್ಟರ್ ಸೆಲ್ವಕುಮಾರ್, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಜಿ.ಮೂಲಿಮನಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪ್ರತಾಪ್‌ಸಿಂಗ್ ತಿವಾರಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮುಂತಾದವರು ಉಪಸ್ಥಿತರಿದ್ದರು.  

ಮುಖಪುಟ /ಸುದ್ದಿ ಸಮಾಚಾರ