ಮುಖಪುಟ /ಸುದ್ದಿ ಸಮಾಚಾರ   

75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ
 ಡಾ.ಎಲ್. ಬಸವರಾಜು ಆಯ್ಕೆ

ಬೆಂಗಳೂರು, ಡಿ.19: ಚಿತ್ರದುರ್ಗದಲ್ಲಿ ಮುಂದಿನ ತಿಂಗಳು 29ರಿಂದ 4ದಿನಗಳ ಕಾಲ ನಡೆಯಲಿರುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಚಿಂತಕ, ವಿದ್ವಾಂಸ, ವಿಮರ್ಶಕ ಡಾ. ಎಲ್. ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಈ ವಿಷಯ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸವರಾಜು ಅವರನ್ನು ಸರ್ವಾನುಮತದಿಂದ ಹಾಗೂ ಒಕ್ಕೊರಲಿನಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.

ಅಮೃತ ಮಹೋತ್ಸವ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸಂಶೋಧಕ ಡಾ. ಚಿದಾನಂದಮೂರ್ತಿ, ಭಾಷಾ ಶಾಸ್ತ್ರಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ಸಾಹಿತಿ ದೇವನೂರು ಮಹಾದೇವ, ಹಂ.ಪ.ನಾಗರಾಜಯ್ಯ ಸೇರಿದಂತೆ 15ಕ್ಕೂ ಹೆಚ್ಚು ಜನರ ಹೆಸರು ಪ್ರಸ್ತಾಪಕ್ಕೆ ಬಂದಿತು ಅಂತಿಮವಾಗಿ ಬಸವರಾಜು ಅವರನ್ನು ಆಯ್ಕೆ ಮಾಡಲಾಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಟಿ.ಎಸ್. ದಕ್ಷಿಣಾ ಮೂರ್ತಿ, ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಸಂತಸ : ತಮ್ಮನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಬಗ್ಗೆ ಬಸವರಾಜು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿಂದು ಕನ್ನಡರತ್ನ.ಕಾಂ ಪ್ರತಿನಿಧಿಯೊಂದಿಗೆ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಸಂದಾಯವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಕನ್ನಡಿಗರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.

ತಮ್ಮನ್ನು ಆಯ್ಕೆ ಮಾಡಿದ ಕಾರ್ಯಕಾರಿ ಸಮಿತಿಗೂ ಸಮಸ್ತ ಕನ್ನಡಿಗರಿಗೂ ಅವರು ತಮ್ಮ ಕೃತಜ್ಞತೆ ಅರ್ಪಿಸಿದರು.

 ಮುಖಪುಟ /ಸುದ್ದಿ ಸಮಾಚಾರ