ಮುಖಪುಟ /ಸುದ್ದಿ ಸಮಾಚಾರ   

ದೆಹಲಿಯಲ್ಲಿ ಜನವರಿ 6ರಂದು ಮುಖ್ಯಮಂತ್ರಿಗಳ ಸಭೆ

ಬೆಂಗಳೂರು, ಡಿ. ೧೯ : ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ೨೦೦೯ರ ಜನವರಿ ೬ರಂದು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಶ್ರೀ ಪಿ.ಚಿದಂಬರಂ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಈ ವಿಷಯ ತಿಳಿಸಿರುವ  ಚಿದಂಬರಂ, ಭಯೋತ್ಪಾದನೆ ನಿಗ್ರಹಕ್ಕೆ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ:

  • ರಾಜ್ಯ ಸರ್ಕಾರವು ಗುಪ್ತಚರ ಮಾಹಿತಿ ಸಂಗ್ರಹ ಹಾಗೂ ಹಂಚಿಕೆಗೆ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಿ, ಡಿವೈಎಸ್‌ಪಿ/ಎಸ್‌ಪಿ ಹಂತದ ಅಧಿಕಾರಿಯನ್ನು ನೇಮಕ ಮಾಡಬೇಕು.

  • ರಾಜ್ಯ ಗುಪ್ತಚರ ವಿಭಾಗವು ವಿಶ್ಲೇಷಕರ ತಂಡವನ್ನು ರಚಿಸಿ, ಸಂಗ್ರಹಿಸಲಾದ ಮಾಹಿತಿಯನ್ನು ವಿಶ್ಲೇಷಿಸಿ, ಸಲಹೆ, ಅಭಿಪ್ರಾಯಗಳನ್ನು ಮಂಡಿಸಬೇಕು.

  • ನಿಯಂತ್ರಣಾ ಕೊಠಡಿ ಹಾಗೂ ವಿಶ್ಲೇಷಕರ ತಂಡವು ತಮ್ಮಲ್ಲಿರುವ ಮಾಹಿತಿಯನ್ನು ಕ್ಷಿಪ್ರಗತಿಯಲ್ಲಿ ಕೇಂದ್ರ ಸರ್ಕಾರಕ್ಕೆ ರವಾನಿಸಬೇಕು.

  • ಮುಖ್ಯಮಂತ್ರಿಯವರು ಹಾಗೂ ಗೃಹ ಸಚಿವರು ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿಪಿ, ಗುಪ್ತಚರ ವಿಭಾಗದ ಮುಖ್ಯಸ್ಥರು ಹಾಗೂ ರಾಜಧಾನಿಯ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ ಭದ್ರತಾ ವಿಷಯಗಳ ಕುರಿತು ಪ್ರತಿ ದಿನ ಬೆಳಿಗ್ಗೆ ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು.

  • ಮುಖ್ಯಮಂತ್ರಿ ಅಥವಾ ಗೃಹ ಸಚಿವರು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು, ಐಜಿ, ಎಸ್‌ಪಿ ಅವರೊಂದಿಗೆ ಭದ್ರತಾ ವ್ಯವಸ್ಥೆ ಕುರಿತು ಸಭೆ ನಡೆಸಬೇಕು.

  • ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಮಾಫಿಯಾ ಗ್ಯಾಂಗ್, ಸುಲಿಗೆಕೋರರು, ಭೂಗಳ್ಳರು, ವಂಚಕರನ್ನು ಮಟ್ಟಹಾಕಬೇಕು.

  • ರಾಜ್ಯದ ಪ್ರಮುಖ ಸ್ಥಳಗಳು, ಸ್ಮಾರಕಗಳು, ಕಟ್ಟಡಗಳ ಭದ್ರತಾ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇಂಥ ಸ್ಥಳಗಳಲ್ಲಿ ಕಮಾಂಡೋಗಳ ಸಣ್ಣ ಪಡೆಯನ್ನು ನೇಮಕ ಮಾಡಬೇಕು. ಕಮಾಂಡೋ ತರಬೇತಿ ನೀಡಲು ಕೇಂದ್ರ ಸರ್ಕಾರ ನೆರವು ನೀಡುವುದು.

  • ರಾಜ್ಯದ ಪ್ರಮುಖ ನಗರಗಳಲ್ಲಿರುವ ಪ್ರಮುಖ ಖಾಸಗಿ ಸಂಸ್ಥೆಗಳು, ಹೆಚ್ಚು ಜನಸಂದಣಿಯಿರುವ ಸ್ಥಳಗಳನ್ನು ಗುರುತಿಸಿ, ಅವುಗಳ ಮಾಲೀಕರಿಗೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಬೇಕು.

ಮುಖಪುಟ /ಸುದ್ದಿ ಸಮಾಚಾರ