ಮುಖಪುಟ /ಸುದ್ದಿ ಸಮಾಚಾರ   

ನೀರಾವರಿ ತಜ್ಞ, ಮಾಜಿ ಸಚಿವ ಎಚ್.ಎನ್.ನಂಜೇಗೌಡರ ನಿಧನ
ಮುಖ್ಯಮಂತ್ರಿ ಹಾಗೂ ಗಣ್ಯರ  ಸಂತಾಪ

ಬೆಂಗಳೂರು ಡಿಸೆಂಬರ್ ೧೮ : ಹೆಸರಾಂತ ನೀರಾವರಿ ತಜ್ಞ, ಮಾಜಿ ಸಚಿವ ಹಾಗೂ ಮಾಜಿ ಸಂಸತ್ ಸದಸ್ಯ ಎಚ್. ಎನ್. ನಂಜೇಗೌಡ ಬೆಂಗಳೂರಿನಲ್ಲಿಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 76ವರ್ಷ ವಯಸ್ಸಾಗಿತ್ತು.  

ಸಂತಾಪ :  ಎಚ್.ಎನ್. ನಂಜೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ವಿಧಾನಸಭಾಧ್ಯಕ್ಷ  ಜಗದೀಶ್ ಶೆಟ್ಟರ್, ಸಾರಿಗೆ ಸಚಿವ  ಆರ್. ಅಶೋಕ, ನಗರಾಭಿವೃದ್ಧಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವ  ಎಸ್. ಸುರೇಶ್ ಕುಮಾರ್, ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಚ್. ಎನ್. ನಂಜೇಗೌಡ ಅವರು ಕರ್ನಾಟಕ ನೀರಾವರಿ ವಿಚಾರಗಳ ಬಗ್ಗೆ ಅಳವಾದ ಅರಿವು ಹೊಂದಿದ್ದರು.  ಜಲವಿವಾದಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದ ಇವರು ನೇರ ನುಡಿಗೆ ಹೆಸರಾದ ರಾಜಕಾರಣಿ.

ಲೋಕಸಭಾ ಸದಸ್ಯರಾಗಿದ್ದಾಗ ಹಾಗೂ ಶಾಸನ ಸಭೆ ಸದಸ್ಯರಾಗಿದ್ದಾಗ ಅತ್ಯುತ್ತಮ ಸಂಸದೀಯ ಪಟು ಎನಿಸಿಕೊಂಡಿದ್ದ ಎಚ್.ಎನ್. ನಂಜೇಗೌಡರು ಕರ್ನಾಟಕ್ಕೆ ನ್ಯಾಯಯುತವಾಗಿ ಸಿಗಬೇಕಾದ ನದಿ ನೀರಿನ ಪಾಲಿನ ಬಗ್ಗೆ ನಿಖರವಾದ ಮಾಹಿತಿಯನ್ನು ಮಂಡಿಸುತ್ತಿದ್ದರು.

ನಂಜೇಗೌಡರ ನಿಧನದಿಂದ ಸಾರ್ವಜನಿಕ ಕ್ಷೇತ್ರಕ್ಕೆ ಹಾಗೂ ಕರ್ನಾಟಕದ ನೀರಾವರಿ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟಂಬ ವರ್ಗಕ್ಕೆ ನೀಡಲೆಂದು  ಪ್ರಾರ್ಥಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ