ಮುಖಪುಟ /ಸುದ್ದಿ ಸಮಾಚಾರ   

ಶಿಲಾಯುಗದಿಂದ ವಿಧಾನಸೌಧದವರೆಗೆ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು, ಡಿ. ೧೭ : ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾದ ಬಿ. ಆರ್. ಜಯರಾಮರಾಜೇ ಅರಸ್  ಅವರು ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವು ಏರ್ಪಡಿಸಿದ್ದ ಕರ್ನಾಟಕ ಸ್ಮಾರಕಗಳ ಪರಂಪರೆಯ ಛಾಯಾಚಿತ್ರ ಪ್ರದರ್ಶನವನ್ನು ಇಂದು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಉದ್ಫಾಟಿಸಿದರು.

ಕರ್ನಾಟಕವು ವೈವಿಧ್ಯಪೂರ್ಣ ಮತ್ತು ಶ್ರೀಮಂತ ವಾಸ್ತು ಪರಂಪರೆಯನ್ನು ಹೊಂದಿದೆ.  ಪ್ರಾಗೈತಿಹಾಸಿಕ ಯುಗದಿಂದ ಇಲ್ಲಿಯವರೆಗೆ ಸಾವಿರಾರು ಆಕರ್ಷಕ ಕಲಾತ್ಮಕ ವಾಸ್ತು ಕೃತಿಗಳು ರಚಿತವಾಗಿದ್ದು ಅವುಗಳನ್ನು ಪ್ರದರ್ಶಿಸಲಾಗಿತ್ತು.  ಕ್ರಿ. ಪೂ. ಸು ೧೦೦೦ ವರ್ಷಗಳಷ್ಟು ಹಳೆಯದಾದ ಬೃಹತ್ ಶಿಲಾ ಸಮಾಧಿಗಳು, ಗಣಿಗಳಿಂದ ಕಲ್ಲನ್ನು ತಂದು ಕಟ್ಟಡಗಳಿಗೆ ಉಪಯೋಗಿಸಿರುವ ಮೊದಲ ಪ್ರಯತ್ನಗಳಾಗಿವೆ.  ಪ್ರಭಾವಶಾಲೀ ರಾಜ ಮನೆತನಗಳಾದ ಶಾತವಾಹನ, ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಚೋಳ, ಹೊಯ್ಸಳ, ವಿಜಯನಗರ, ಬಹಮನೀ, ಆದಿಲ್‌ಶಾಹೀ, ಬರಿದ್‌ಶಾಹೀ, ಕೆಳದಿ, ಮೈಸೂರು ಒಡೆಯರು ಹಾಗೂ ಪಾಳೆಯಗಾರರು ಮತ್ತು ಬ್ರಿಟೀಷ್ ವಸಾಹತುಶಾಹಿ ಆಡಳಿತವು ಕರ್ನಾಟಕ ವಾಸ್ತು ಪರಂಪರೆಯ ಮೇಲೆ ಶಾಶ್ವತವಾದ ಮುದ್ರೆಯನ್ನೊತ್ತಿದ್ದಾರೆ.  ಕರ್ನಾಟಕದಲ್ಲಿ ಅಸಂಖ್ಯಾತ ಸ್ಮಾರಕಗಳಿದ್ದು ಇವು ಈ ಪರಂಪರೆಯ ಜೀವಂತ ದಾಖಲೆಗಳಾಗಿವೆ.

ಗುಲ್ಬರ್ಗಾದ ರಣಗಣಹಳ್ಳಿಯಲ್ಲಿ ದೊರೆತಿರುವ ಬೌದ್ಧ ಸ್ಥೂಪಗಳು, ಮೌರ್ಯ ಚಕ್ರವರ್ತಿ ಅಶೋಕನ ಅಪರೂಪದ ಭಾವಶಿಲ್ಪವಿರುವುದು ವಿಶೇಷ ಅಂಶ. ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿರುವ ಚಾಲುಕ್ಯರ ದೇವಾಲಯಗಳು, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಕುಸುರಿ ಕೆತ್ತನೆಗಳಿರುವ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇವಾಲಯಗಳು, ಹಂಪಿಯ ಬೃಹತ್ ಕಟ್ಟಡಗಳು, ಬಿಜಾಪುರದ ಗೋಳಗುಮ್ಮಟ, ಕಲಾತ್ಮಕ ವಿನ್ಯಾಸಗಳಿರುವ ಬೀದರ್‌ನ ಸ್ಮಾರಕಗಳು, ಮೂಡಬಿದ್ರಿಯ ವಿಶಿಷ್ಟ ರೀತಿಯ ಜೈನ ಬಸದಿ ಇತ್ಯಾದಿಗಳು ಅವುಗಳ ಸೌಂದರ್ಯ ಮತ್ತು ಭವ್ಯತೆಗೆ ವಿಶ್ವ ಪ್ರಸಿದ್ಧವಾಗಿವೆ.

೧೯ ನೇ ಶತಮಾನದ ಮಂಗಳೂರಿನ ಸೇಂಟ್ ಅಲಾಯಿಯಸ್ ಚರ್ಚ್, ಬೆಂಗಳೂರಿನ ಸೇಂಟ್ ಮೇರಿ ಚರ್ಚ್ ಮತ್ತು ಅನೇಕ ಸರ್ಕಾರಿ ಕಟ್ಟಡಗಳು ಈ ಪರಂಪರೆಗೆ ಹೊಸ ಆಯಾಮವನ್ನು ನೀಡಿವೆ.  ಈ ವೈವಿಧ್ಯಮಯ ವಾಸ್ತು ರಚನಾ ಅನುಭವದ ಗಾಢ ಪ್ರಭಾವ ಮುಂದುವರೆಯುತ್ತಿರುವುದನ್ನು ಕಳೆದ ಶತಮಾನದ ಕೃತಿಗಳಾದ ಮೈಸೂರು ಮತ್ತು ಬೆಂಗಳೂರಿನ ಅರಮನೆಗಳು, ವಿಧಾನಸೌಧ, ಸಂಡೂರಿನ ಅರಮನೆ ಮತ್ತು ಬೀದರಿನ ನಾನಕ್ ಝರಾ ಗುರುದ್ವಾರ ಮುಂತಾದವುಗಳಲ್ಲಿ ಗಮನಿಸಬಹುದು.  ಶಿಲಾಯುಗದಿಂದ ವಿಧಾನಸೌಧದವರೆಗೆ ನಮ್ಮ ಪಾರಂಪರಿಕ ವಾಸ್ತುಶಿಲ್ಪದ  ಶ್ರೀಮಂತಿಕೆಯನ್ನು ಕಾಣಬಹುದಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖಾ ನಿರ್ದೇಶಕರಾದ ಮನು ಬಳಿಗಾರ್, ವಾರ್ತಾ ಇಲಾಖಾ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶಕರಾದ ಡಾ. ಗೋಪಾಲ್ ಎಂ. ಎನ್. ಸಿದ್ಧನಗೌಡರ್ ಅವರು ಉಪಸ್ಥಿತರಿದ್ದರು.

ಮುಖಪುಟ /ಸುದ್ದಿ ಸಮಾಚಾರ