ಮುಖಪುಟ /ಸುದ್ದಿ ಸಮಾಚಾರ   

೨೦೦೯ರ ಮಳೆಗಾಲದಲ್ಲಿ ಬೃಹತ್ ಅರಣ್ಯೀಕರಣ

ಗುಲಬರ್ಗಾ,ಡಿ.೧೫:ಗುಲಬರ್ಗಾ ಅರಣ್ಯ ವೃತ್ತದ ವ್ಯಾಪ್ತಿಗೊಳಪಡುವ ಬೀದರ, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ೨೦೦೯ರ ಮಳೆಗಾಲದಲ್ಲಿ ವ್ಯಾಪಕ ಮತ್ತು ಬೃಹತ್ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಆಸಕ್ತ ಸಂಘ ಸಂಸ್ಥೆಗಳನ್ನು, ವ್ಯಕ್ತಿಗಳನ್ನು, ಸಾಹಿತಿಗಳನ್ನು, ಶಾಲಾ ಮಕ್ಕಳನ್ನು ಹಾಗೂ ಮಹಿಳೆಯರನ್ನು ಗುರುತಿಸಿ ಕಾರ್ಯ ಯೋಜನೆ ರೂಪಿಸಬೇಕೆಂದು ಪಶ್ಚಿಮಘಟ್ಟ (ಸಹ್ಯಾದ್ರಿ) ಸಂರಕ್ಷಣಾ ವಿಶೇಷ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶಿಸರ್ ಅವರು ಹೇಳಿದರು.

ಅವರು ಸೋಮವಾರ ಗುಲಬರ್ಗಾ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯು ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಜೀವಿ ವೈವಿಧ್ಯ ಸಂರಕ್ಷಣಾ ಯೋಜನೆಯಡಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬೃಹತ್ ಅರಣ್ಯೀಕರಣ ಕಾರ್ಯಕ್ರಮದ ಯಶಸ್ವಿಗಾಗಿ  ಆಸಕ್ತಿಯಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯ ಸಹಭಾಗಿತ್ವ ವಹಿಸುವಂತಾಗಲು ಗ್ರಾಮಗಳಲ್ಲಿ ಜಾಥಾ, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿ ಜನ ಸಮುದಾಯವನ್ನು ಆಕರ್ಷಿಸಬೇಕು. ಮುಂಬರುವ ದಿನಗಳಲ್ಲಿ ಕೃಷಿ-ಅರಣ್ಯ, ಜೈವಿಕ ಮತ್ತು ಔಷಧಿ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಗಮನ ನೀಡಲಿದೆ ಎಂದರು.

ಗ್ರಾಮ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಸಮಿತಿಗಳನ್ನು ರಚಿಸಲು ಯೋಜಿಸಲಾಗಿದ್ದು, ಅರಣ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಳಹಂತದ ಅರಣ್ಯ ಅಧಿಕಾರಿಗಳು, ಅರಣ್ಯ ಸಮಿತಿಯವರು ಶಾಲಾ ಕಾಲೇಜು ಮಕ್ಕಳಿಗಾಗಿ, ಸ್ವಸಹಾಯ ಗುಂಪಿನ ಮಹಿಳೆಯರಿಗಾಗಿ ವಿಶೇಷ ಮತ್ತು ಉತ್ತಮ ಕಾರ್ಯ ಯೋಜನೆ ರೂಪಿಸಬೇಕೆಂದರು. ಕೆಳಹಂತದಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಪರಿಹಾರ ಕೈಗೊಳ್ಳಲಾಗುವುದು. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಬಯಲು ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು. ಈ ನಿಟ್ಟಿನಲ್ಲಿ ಸದರಿ ಕಾರ್ಯಾಗಾರವು ಹೆಚ್ಚು ಪ್ರಯೋಜನಕಾರಿಯಾಗಿದೆ. ವ್ಯಾಪಕ ಅರಣ್ಯೀಕರಣ ಮತ್ತು ಅರಣ್ಯ ರಕ್ಷಣೆಯ ವಿಶೇಷ ಕಾರ್ಯಕ್ರಮ ರೂಪಿಸಲು ಜಂಟಿ ಅರಣ್ಯ ಯೋಜನೆಯನ್ನು ಬೃಹತ್ ಪ್ರಮಣದಲ್ಲಿ ಕಾರ್ಯಗತಗೊಳಿಸಲಾಗುವುದು. ಇದಕ್ಕಾಗಿ ಗ್ರಾಮ ಅರಣ್ಯ ಸಮಿತಿಗಳನ್ನು ಬಲಗೊಳಿಸಲು ಹಾಗೂ ಜನಸಮುದಾಯ ಸಕ್ರಿಯ ಸಹಭಾಗಿತ್ವ ವಹಿಸುವಂತೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಗುಲಬರ್ಗಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ|| ವೀರೇಂದ್ರ ಸಿಂಗ್ ಅಧ್ಯಕ್ಷತೆವಹಿಸಿದ್ದರು. ವಿವಿಧ ಅರಣ್ಯ ಸಮಿತಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಅರಣ್ಯ ಭೂಮಿ ಒತ್ತುವರಿಯಾಗುವುದನ್ನು ತಪ್ಪಿಸಲು ಪುನರ್ ಸಮೀಕ್ಷೆ ಕಾರ್ಯ ಕೈಗೊಳ್ಳುವ ಬಗ್ಗೆ, ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಾಗಾರ ಏರ್ಪಡಿಸುವ ಬಗ್ಗೆ, ಅರಣ್ಯ ರಕ್ಷಕರ ನೇಮಕಾತಿ ಮುಂತಾದ ವಿಷಯಗಳ ಬಗ್ಗೆ   ಅಭಿಪ್ರಾಯಗಳನ್ನು ನೀಡಿದರು. ಗುಲಬರ್ಗಾ ಬೀದರ, ರಾಯಚೂರು ಪ್ರಾದೇಶಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಾಧಾದೇವಿ, ದಿಲೀಪಕುಮಾರ ದಾಸ್ , ಬಿ. ಶಿವಪ್ರಸಾದ ಹಾಗೂ ಮೂರು ಜಿಲ್ಲೆಗಳ ಸಾಮಾಜಿಕ ಅರಣ್ಯ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುಟ್ಟಸ್ವಾಮಿ, ಪಂಚಲಿಂಗೇಗೌಡ, ಪಿ. ದೌಲತ್ ಹುಸೇನ್ ಅವರು ಮುಖ್ಯ ಅತಿಥಿಯಾಗಿದ್ದರು. ಯಾದಗಿರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ. ಸಿಂದಗಿ ಸ್ವಾಗತಿಸಿದರು. ಚಿಂಚೋಳಿಯ ವಲಯ ಅರಣ್ಯಾಧಿಕಾರಿ ಆರ್. ಆರ್. ಯಾದವ್ ವಂದಿಸಿದರು. ಬೀದರ, ಗುಲಬರ್ಗಾ, ರಾಯಚೂರು ಜಿಲ್ಲೆಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯಾರಣ್ಯ ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿಗಳ ಅಧ್ಯಕ್ಷರುಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ