ಮುಖಪುಟ /ಸುದ್ದಿ ಸಮಾಚಾರ   
 

ಶ್ರೀರಾಮುಲು ರಾಜ್ಯದ ಉಪಮುಖ್ಯಮಂತ್ರಿ ಆಗುವರೇ?

(ಕನ್ನಡರತ್ನ ವರದಿ)
ಬಳ್ಳಾರಿ
; ಡಿ.9: ದಕ್ಷಿಣ ಭಾರತದ ಪ್ರಪ್ರಥಮ ಬಿ.ಜೆ.ಪಿ. ಸರ್ಕಾರ ಕರ್ನಾಟಕದಲ್ಲಿ ಸಾಕಾರಗೊಂಡಿದೆ. ಈ ಸಾಕಾರಕ್ಕೆ ಕಾರಣ ಯಾರು ಎಂಬ ಪ್ರಶ್ನೆ ಆಗಿದ್ದಾಗ್ಗೆ ಏಳುತ್ತಿದೆ?  ರಾಜ್ಯದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣರಾರು? ಬಿ.ಎಸ್.ಯಡಿಯೂರಪ್ಪನವರೇ, ಬಿ.ಜೆ.ಪಿ.ಯ ಸಂಘಟನಾ ಶಕ್ತಿಯೇ ಅಥವಾ ಬಳ್ಳಾರಿಯ ಪ್ರಭಾವಿ ರಾಜಕಾರಣಿಗಳೇ?

ಕೆಲವೇ ತಿಂಗಳುಗಳ ಹಿಂದೆ ರೆಡ್ಡಿ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಚಿವ ಜನಾರ್ದನ ರೆಡ್ಡಿ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ದ್ಯೇಯವಾಗಿತ್ತು. ಅದನ್ನು ನಾವು ಮಾಡಿ ತೋರಿಸಿದ್ದೇವೆ ಎಂದರು.

ಈಚೆಗೆ ವಾಲ್ಮೀಕಿ ಜನಾಂಗದ ಸಮಾರಂಭದಲ್ಲಿ ಮಾತನಾಡಿದ್ದ ಸಚಿವ  ಜನಾರ್ಧನರೆಡ್ಡಿ ಅವರು ಬಿ. ಶ್ರೀರಾಮುಲು ರಾಜ್ಯದ ಮುಂದಿನ ಆದರ್ಶ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿ ಎಲ್ಲರ ಹುಬ್ಬೇರಿಸಿದ್ದರು.

ಇಂಥ ಹೇಳಿಕೆಗಳು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಎಲ್ಲೋ ಅಸಮಧಾನದ ಹೊಗೆ ಆಡುತ್ತಿದೆ. ಭಿನ್ನಮತದ ಹೊಗೆಯಾಡುತ್ತಿದೆ ಎಂಬ ಅನುಮಾನ ಮೂಡಿಸಿದೆ.

ಈಗ ಬಳ್ಳಾರಿಯಿಂದ ಬಂದಿರುವ ಸುದ್ದಿಗಳ ಪ್ರಕಾರ, ರೆಡ್ಡಿ ಸಹೋದರರ ಆಪ್ತರಾದ  ಸಚಿವ ಬಿ. ಶ್ರೀರಾಮುಲು ರಾಜ್ಯದ ಬಿಜೆಪಿ ಸರ್ಕಾರದ ಪ್ರಪ್ರಥಮ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆಗಳೂ ಕಾಣಿಸುತ್ತಿವೆ.

ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಆಪರೇಷನ್ ಕಮಲದ ಮೂಲಕ ಶಾಸಕರ ಬೆಂಬಲ ತಂದುಕೊಟ್ಟಿರುವ ಜಿ. ಜನಾರ್ಧನರೆಡ್ಡಿ ಅವರು ಈಚೆಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಶಾಸಕರ ಸಭೆಯಲ್ಲಿಯೂ ಪಾಲ್ಗೊಂಡಿರಲಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ. ಈ ಮಧ್ಯೆ ರೆಡ್ಡಿ ಸಹೋದರರಿಗೆ 45-50 ಶಾಸಕರ ಬೆಂಬಲವೂ ಇದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ಸತ್ಯವಾಗಿದೆ.

ಈ ನಡುವೆ ಶ್ರೀರಾಮುಲು ಅವರನ್ನು ರಾಜ್ಯ ಉಪ ಮುಖ್ಯಮಂತ್ರಿಯನ್ನಾಗಿ  ಮಾಡಿದಲ್ಲಿ ಉತ್ತರ ಕರ್ನಾಟಕದ ೯ ಜಿಲ್ಲೆಗಳಲ್ಲಿ ಪಕ್ಷ ಬಲಗೊಳ್ಳುವುದಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗುವ ಸಾಧ್ಯತೆಗಳು ಇವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ಎಲ್ಲ ವಿಧ್ಯಮಾನಗಳ ಹಿನ್ನೆಲೆಯಲ್ಲಿ ವಿಧಾನಸಭೆಯ ಉಪ ಚುನಾವಣೆಗಳ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯ ಗುರುತರ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ನೀಡುತ್ತಾರೆ ಎನ್ನಲಾಗಿದೆ. ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ. ನಾವೂ ಕಾದು ನೋಡೋಣ.

ಮುಖಪುಟ /ಸುದ್ದಿ ಸಮಾಚಾರ