ಮುಖಪುಟ /ಸುದ್ದಿ ಸಮಾಚಾರ   

ವೈದ್ಯಕಾಲೇಜು ನೇಮಕ ಕರ್ಮಕಾಂಡ: ತನಿಖೆಗೆ ಸಿದ್ಧ -ರಾಮಚಂದ್ರಗೌಡ

ಬೆಂಗಳೂರು ೨೬ :ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳಲ್ಲಿ ನೇಮಕ ಮಾಡಿದ್ದ ಸಿಬ್ಬಂದಿಯ ಆದೇಶವನ್ನು ಮುಖ್ಯಮಂತ್ರಿ ಅವರು ರದ್ದು ಮಾಡಿದ್ದಾರೆ. ಇದರ ಬಗ್ಗೆ ಯಾವುದೇ ತನಿಖೆಗೂ ಸಿದ್ಧ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ನಗರದಲ್ಲಿಂದು ಸ್ಪಷ್ಟಪಡಿಸಿದ್ದಾರೆ.

ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಈ ಆದೇಶ ಹೊರಡಿಸಿದ್ದಾರೆ. ನೇಮಕಾತಿಯಲ್ಲಿ ತಮ್ಮ ಯಾವುದೇ ಕೈವಾಡ ಇಲ್ಲ, ತಾವು ಪರಿಶುದ್ಧರು ಎಂದು ಹೇಳಿದರು.

ಮೆರಿಟ್ ರೋಸ್ಟರ್ ಆಧಾರದ ಮೇಲೆ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿತ್ತು. ಸ್ವಾಯತ್ತೆ ಸಂಸ್ಥೆಗಳಾಗಿ ಮಾಡಿರುವುದೇ ಸರ್ಕಾರದ ಹಸ್ತಕ್ಷೇಪ ತಡೆಗೆ ಅನುಕೂಲವಾಗುತ್ತದೆ. ನೇಮಕ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿರುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿಯವರಿಗೆ ತಾವು ಆಪ್ತರಾಗಿರುವುದರಿಂದ ಅನೇಕ ಆರೋಪಗಳು ಬಂದಿವೆ. ಅವರು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿ ಸಚಿವ ರಾಮಚಂದ್ರ ಗೌಡ ತಮ್ಮ ಅವಧಿಯಲ್ಲಿ ಯಾವುದೇ ಅವ್ಯಹಾರ ನಡೆದಿಲ್ಲ ಎಂದು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡರು.

ನೇಮಕಾತಿ ಮುನ್ನ ಹಣಕಾಸು ಇಲಾಖೆಯ ಅನುಮತಿ ಪಡೆದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇರುವ ಉನ್ನತಮಟ್ಟದ ಸಮಿತಿ ಎಲ್ಲವನ್ನೂ ಅಧ್ಯಯನ ಮಾಡಿ ನೇಮಕಾತಿ ಮಾಡಲಾಗಿತ್ತು. ಮುಖ್ಯಮಂತ್ರಿ ಅವರು ನೇಮಕಾತಿ ತನಿಖೆಗೆ ಆದೇಶಿಸಿದರೆ ಅದನ್ನು ತಾವು ಸ್ವಾಗತಿಸುವುದಾಗಿ ಹೇಳಿದ ಅವರು, ಮುಖ್ಯಮಂತ್ರಿ ಅವರ ಪ್ರವಾಸದ ನಂತರ ಎಲ್ಲ ದಾಖಲೆಗಳೊಂದಿಗೆ ಭೇಟಿ ಮಾಡಿ, ಚರ್ಚಿಸುವುದಾಗಿ ಸಚಿವ ರಾಮಚಂದ್ರ ಗೌಡ ತಿಳಿಸಿದರು.

ಆಯ್ಕೆಯನ್ನು ರದ್ದು ಮಾಡಿದಲ್ಲಿ ಮೆರಿಟ್ ಹಾಗೂ ರೋಸ್ಟರ್ ಪದ್ಧತಿಯಲ್ಲಿ ಆಯ್ಕೆಯಾಗಿರುವ ಕೆಳದರ್ಜೆಯ ನೌಕರರಿಗೆ ತೊಂದರೆಯಾಗುತ್ತದೆ. ಈಗ ಆಯ್ಕೆ ಆಗಿ ಕೆಲಸ ಮಾಡುತ್ತಿರುವ ನೌಕರರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತಿಯಿಂದ ವರ್ತಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.

 

 ಮುಖಪುಟ /ಸುದ್ದಿ ಸಮಾಚಾರ