ಮುಖಪುಟ /ಸುದ್ದಿ ಸಮಾಚಾರ   

ಪ್ಲಾಸ್ಟಿಕ್ ನಿಷೇಧ: ಕೃಷ್ಣ ಪಾಲೇಮಾರ್

ಬೆಂಗಳೂರು ಆ. ೨೮: ರಾಜ್ಯಾಧ್ಯಂತ ೨೦ ಮೈಕ್ರಾನ್‌ಗಿಂತ ತೆಳುವಾಗಿರುವ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಪರಿಸರ ಜೀವಶಾಸ್ತ್ರ ಬಂದರು ಖಾತೆ ಸಚಿವ ಕೃಷ್ಣ ಪಾಲೇಮಾರ್ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನು ಮುಂದೆ ರಾಜ್ಯ ಸರ್ಕಾರ ನಿಷೇಧಿಸಿದರುವ ಪ್ಲಾಸ್ಟಿಕ್‌ನ್ನು ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡಿದರೆ ಅಂತಹ ವ್ಯಾಪಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

೪೦ ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯನ್ನು ಕೂಡ ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಅಂತಿಮ ಗೊಂಡ ನಂತರ ರಾಜ್ಯದಲ್ಲಿಯೂ ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಪರಿಸರಕ್ಕೆ ಮಾರಕವಾಗುವಂತಹ ಬಳಕೆಯ ನಂತರ ಜೈವಿಕವಾಗಿ ನಶಿಸಿಹೋಗುವ ಪ್ಲಾಸ್ಟಿಕ್ ಉತ್ಪಾದನೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.  ಇಂತಹ ಘಟಕಗಳ ಸ್ಥಾಪನೆಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಹೆಚ್ಚಿನ ಘಟಕಗಳು ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತದೆ. 

ರಾಜ್ಯಾದಂತ ಪರಿಸರ ಸಂರಕ್ಷಣೆಗೆ ಹಸಿರು ಪೊಲೀಸ್ ನೇಮಕ ಮಾಡಿ ಪ್ರಮುಖ ನಗರಗಳಲ್ಲಿ ಸರ್ಕಾರ ನಿಗಧಿಮಾಡಿರುವ ಮೈಕ್ರಾನ್‌ಗಿಂತ ಕಡಿಮೆ ತೂಕದ ಪ್ಲಾಸ್ಟಿಕ್‌ಅನ್ನು ಬಳಸದಂತೆ ನಿಗವಹಿಸಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪರಿಸರ ಬಗ್ಗೆ ಕಾಳಜಿ, ಜಾಗೃತಿ ವಹಿಸುವ ಶಿಕ್ಷಣ ಸಂಸ್ಥೆಗಳು ಮತ್ತು ಅಭಿವೃದ್ಧಿ ಘಟಕಗಳಿಗೆ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯ ಮಾಲಿನ್ಯ ಮಂಡಳಿಗೆ ಪಾವತಿಸಬೇಕಾದ ಚಾಲನಾ ಶುಲ್ಕದಿಂದ ವಿನಾಯಿತಿ ನೀಡಲಾಗುವುದು ಎಂದರು. ದೇಶಾಧ್ಯಂತ ಏಕರೂಪದ ನಿಯಂತ್ರಣಾ ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವನೆ ಕಳುಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಹಸಿರು ವರ್ಗಕ್ಕೆ ಸೇರಿದ ಸೇವಾ ವಲಯದ ಉದ್ಯಮೆಗಳು ಲೈಸೆನ್ಸ್ ಪಡೆದು ಕಾರ್ಯ ನಿರ್ವಹಿಸುತ್ತಿರುವುದರಿಂದ ಅಂತಹ ಘಟಕಗಳಿಗೆ ಆರ್ಥಿಕ ಹೊರೆ ತಪ್ಪಿಸಲು ನಾಮಮಾತ್ರ ಸಮ್ಮತಿ ಶುಲ್ಕ ವಿಧಿಸಲು ಮಾಲಿನ್ಯ ನಿಯಂತ್ರಣಾ ಮಂಡಳಿ ಮುಂದಾಗಿದೆ ಎಂದು ಹೇಳಿದರು. 

ರಾಜ್ಯಾಧ್ಯಂತ ಗಣೇಶ ವಿಗ್ರಹಗಳಿಗೆ ಅಪಾಯಕಾರಿ ಬಣ್ಣವನ್ನು ಲೇಪನ ಮಾಡದಂತೆ ಕಲಾವಿದರಿಗೆ ಸೂಚನೆ ನೀಡಲಾಗಿದೆ. ಗಣೇಶನ ವಿಗ್ರಹ ವಿಸರ್ಜನೆಗೆ ಅಗತ್ಯ ಕ್ರಮವನ್ನು ಹಾಗೂ ಮಾರ್ಗ ಸೂಚಿಯನ್ನು ಇಲಾಖೆ ಜಿಲ್ಲಾ ಆಡಳಿತಕ್ಕೆ ನೀಡಿದೆ.

ಗಣೇಶ ವಿಗ್ರಹವನ್ನು ಪರಿಸರ ಸ್ನೇಹಿ ಸಾಮಾಗ್ರಿಗಳಿಂದ ಬಳಸಿ ಪ್ರಕೃತಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ