ಮುಖಪುಟ /ಸುದ್ದಿ ಸಮಾಚಾರ   

ಕಬ್ಬಿಣದ ಅದಿರು ನಿಷೇಧ ಅಸಾಧ್ಯ- ಕೇಂದ್ರ ಸರ್ಕಾರ

ಬೆಂಗಳೂರು, ಆ.27 - ಕಬ್ಬಿಣದ ಅದಿರು ರಫ್ತು ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಇಂದು ಸಾರಾಸಗಟಾಗಿ ತಿರಸ್ಕರಿಸಿದೆ. ರಾಜ್ಯ ಸರ್ಕಾರಗಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.

ರಾಜ್ಯ ಸಭೆಯಲ್ಲಿಂದು ಗಣಿ ವಿಚಾರದ ಕುರಿತು ನಡೆದ ಗಂಭೀರ ಚರ್ಚೆಯ ಬಳಿಕ, ಸರ್ಕಾರದ ಪರವಾಗಿ ಉತ್ತರ ನೀಡಿದ ಕೇಂದ್ರ ಗಣಿ ಸಚಿವ, ಬಿ.ಕೆ. ಹಂಡಿಕ್, ರಾಜ್ಯ ಸರ್ಕಾರಗಳು ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸಲು ವಿಫಲವಾಗಿವೆ ಎಂಬ ಒಂದೇ ಕಾರಣಕ್ಕೆ, ಕಬ್ಬಿಣದ ಅದಿರು ರಫ್ತಿಗೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಕ್ರಮ ಗಣಿಗಾರಿಕೆ ಅಪಾಯದ ಗಂಟೆ ಮೊಳಗಿಸುವ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯ ಸರ್ಕಾರಗಳಿಗೆ ಅಗತ್ಯವಾದ ಎಲ್ಲ ಬೆಂಬಲ ನೀಡಲು ಕೇಂದ್ರ ಸಿದ್ಧ ಎಂಬ ಆಶ್ವಾಸನೆ ನೀಡಿದರು.

ಕಬ್ಬಿಣದ ಅದಿರು ರಫ್ತನ್ನು ನಿಷೇಧಿಸುವುದಕ್ಕಿಂತಲೂ, ಅಕ್ರಮ ಅದಿರು ಉತ್ಪಾದನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಹಾಲಿ ಇರುವ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ ಎಂದು ಹಂಡಿಕ್ ಅಭಿಪ್ರಾಯಪಟ್ಟರು.

ದೇಶದಲ್ಲಿ ಕಬ್ಬಿಣದ ಅದಿರು ಉತ್ಪಾದಿಸುವ ಎರಡನೇ ರಾಜ್ಯವಾದ ಕರ್ನಾಟಕ ಕೂಡ ಕಬ್ಬಿಣದ ಅದಿರು ರಫ್ತು ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕರ್ನಾಟಕ ಬಂದರಿಗೆ ಕಬ್ಬಿಣದ ಅದಿರು ಸಾಗಾಣಿಕೆ ಮಾಡದಂತೆ ನಿರ್ಬಂಧ ಹೇರಿದೆ ಎಂದು ತಿಳಿಸಿದರು.

ವಿಶ್ವದಲ್ಲಿಯೇ ಭಾರತ ಅತಿ ಹೆಚ್ಚು ಕಬ್ಬಿಣ ಅದಿರು ಉತ್ಪಾದಿಸುವ ೩ನೇ ರಾಷ್ಟ್ರವಾಗಿದೆ. ೨೦೦೯-೧೦ನೇ ಸಾಲಿನಲ್ಲಿ ಭಾರತ ೨೧೮ ದಶಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದಿಸಿದ್ದು, ಈ ಪೈಕಿ ೧೨೮ ದಶಲಕ್ಷ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ ಎಂದು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ