ಮುಖಪುಟ /ಸುದ್ದಿ ಸಮಾಚಾರ   

ಮುಖ್ಯಮಂತ್ರಿಗಳಿಂದ ನೀತಿ ಸಂಹಿತೆ ಉಲ್ಲಂಘನೆ - ಕಾಂಗ್ರೆಸ್

ಬೆಂಗಳೂರು, ಆ.೨೭: ಉಪಚುನಾವಣೆಗಳ ಹಿನ್ನೆಲೆಯಲ್ಲಿ ಆದಿಬಲಿಜರನ್ನು ಹಿಂದುಳಿದ ಪ್ರವರ್ಗ ೨ಎ ಗೆ ಸೇರಿಸುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ಶಿಗಾರರ ಜತೆ ಮಾತನಾಡಿದ ಅವರು, ಆದಿ ಬಲಿಜರನ್ನು ಹಿಂದುಳಿದ ಪ್ರವರ್ಗ ೨ಎ ಗೆ ನೇರಾ ನೇರವಾಗಿ ಸೇರಿಸುವುದು ಸರ್ಕಾರದ ಕೆಲಸವಲ್ಲ ಎಂದರು.

ಯಾವ ಜಾತಿಗಳನ್ನು ಪ್ರವರ್ಗ ೨ಎ ಗೆ ಸೇರಿಸಬೇಕು, ಹೀಗೆ ಸೇರಿಸಬೇಕೆಂದರೆ ಯಾವ ಕಾರಣಗಳಿರಬೇಕು? ಎಂಬುದನ್ನೆಲ್ಲ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ಮಾಡಬೇಕು.

ಈ ವಿಷಯದಲ್ಲಿ ಅದು ಅಧ್ಯಯನ ಮಾಡಿ ವರದಿ ನೀಡಿದ ನಂತರ ರಾಜ್ಯ ಸರ್ಕಾರ ಇಂತಹ ಜಾತಿಯನ್ನು ಪ್ರವರ್ಗ ೨ಎ ಗೆ ಸೇರಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಇಂತಹ ಯಾವ ಕ್ರಮಗಳನ್ನೂ ಕೈಗೊಳ್ಳದೇ ಮುಖ್ಯಮಂತ್ರಿ ಯಡಿಯೂರಪ್ಪ ಆದಿ ಬಲಿಜರನ್ನು ಹಿಂದುಳಿದ ಪ್ರವರ್ಗ ೨ಎ ಗೆ ಸೇರಿಸುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಅವರು ಗಿಮಿಕ್ ಮಾಡಲು ಹೊರಟಿದ್ದಾರೆ. ಅದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಚುನಾವಣಾ ಆಯೋಗ ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಡೂರು ಹಾಗೂ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಹಣ ಹಂಚುವಂತಹ ಕೆಲಸಗಳಿಗೆ ಮುಂದಾಗಬಹುದು. ಹೀಗಾಗಿ ಆಯೋಗ ಕಟ್ಟೆಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದಿನ ಯಾವ ಸರ್ಕಾರವೂ ಆಡಳತ ಯಂತ್ರವನ್ನು ಬಿಜೆಪಿ ಸರ್ಕಾರದಂತೆ ದುರುಪಯೋಗಪಡಿಸಿಕೊಂಡಿರಲಿಲ್ಲ ಎಂದೂ ಅವರು ಹೇಳಿದರು.

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾದ ಪ್ರಕರಣದಲ್ಲಿ ಸಚಿವ ಆನಂದ್ ಆಸ್ನೋಟಿಕರ್ ಭಾಗಿಯಾಗಿದ್ದರೆ, ಲೋಕಾಯುಕ್ತರು ತಮ್ಮ ವರದಿಯಲ್ಲಿ ಹಾಗೆಂದು ಹೇಳಿದ್ದರೆ ತಕ್ಷಣವೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಇದೇ ಸಂಧರ್ಭದಲ್ಲಿ ಅವರು ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

 ಮುಖಪುಟ /ಸುದ್ದಿ ಸಮಾಚಾರ