ಮುಖಪುಟ /ಸುದ್ದಿ ಸಮಾಚಾರ   

ರಾಜ್ಯ ಸರ್ಕಾರದ ವಜಾಕ್ಕೆ ಸಂಸತ್ತಿನಲ್ಲಿ ಒತ್ತಾಯ

ನವದೆಹಲಿ, ಆ.೧೮ - ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿಷಯ ಪ್ರಸ್ತಾಪವಾಗಿದ್ದಲ್ಲದೆ, ಚರ್ಚೆಯ ವೇಳೆ ಉಂಟಾದ ಗದ್ದಲದ ಪರಿಣಾಮವಾಗಿ ಕಲಾಪವನ್ನು ಮುಂದೂಡುವುದೂ ಅನಿವಾರ್ಯವಾಯ್ತು.

ಗಣಿಧೂಳಿನ ಜೊತೆಗೆ ಸಿ.ಬಿ.ಐ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸೊರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿರುವುದೂ ಸೇರಿ, ರಾಜ್ಯಸಭೆ, ಲೋಕಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಇದು ಪದೆ ಪದೇ ಕಲಾಪ ಮುಂದೂಡುವಂತೆ ಮಾಡಿತು.

ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿ.ಎಸ್.ಪಿ. ಸದಸ್ಯರು ಗುಂಪಾಗಿ ಸಭಾಧ್ಯಕ್ಷರ ಮುಂದಿನ ಬಾವಿಗೆ ತೆರಳಿ ಫಲಕ ಪ್ರದರ್ಶಿಸಿ ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರದ ವಜಾಕ್ಕೆ ಒತ್ತಾಯಿಸಿದರು. ಈ ಮಧ್ಯೆ ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲೂಪ್ರಸಾದ್ ಯಾದವ್ ಅವರು ಪತ್ರಿಕೆಗಳಲ್ಲಿ ನರೇಂದ್ರಮೋದಿ ನಿರ್ದೋಷಿ ಎಂದು ಬಂದಿರುವ ವರದಿ ಪ್ರದರ್ಶಿಸಿದ್ದು ಗದ್ದಲಕ್ಕೆ ಕಾರಣವಾಯಿತು. ಸಭಾಧ್ಯಕ್ಷರು ಪದೆಪದೇ ಮಾಡಿಕೊಂಡ ಮನವಿಗೆ ಬೆಲೆ ಬಾರದಿದ್ದಾಗ, ಕಲಾಪವನ್ನು ಮಧ್ಯಾಹ್ನ ೧೨ಕ್ಕೆ ಮುಂದೂಡಿದರು.

ನಂತರ ಸದನ ಸಮಾವೇಶಗೊಂಡಾಗಲೂ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ. ಈ ಎರಡು ವಿಷಯಗಳ ಜೊತೆಗೆ ಪರಮಾಣು ಹೊಣೆಗಾರಿಕೆ ವಿಧೇಯಕದ ವಿಷಯವೂ ಸೇರಿ ವಾತಾವರಣ ಮತ್ತಷ್ಟು ಗದ್ದಲಮಯವಾಯ್ತು. ಸದನ ಮತ್ತೆ ಮಧ್ಯಾಹ್ನ ೨ಕ್ಕೆ ಮುಂದೂಡಿಕೆಯಾಯ್ತು. ಮತ್ತೊಮ್ಮೆ ಸದನ ಸೇರಿದಾಗಲೂ ಪರಿಸ್ಥಿತಿ ಸುಧಾರಿಸದಿದ್ದಾಗ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಸದನ ಆರಂಭದಿಂದಲೇ ಗದ್ದಲದ ಸ್ಥಿತಿ. ಬಿಎಸ್‌ಪಿ ಸದಸ್ಯರು ಬ್ಯಾನರ್ ಹಿಡಿದು ಬಾವಿಗೆ ತೆರಳಿ, ಕರ್ನಾಟಕ ಸರ್ಕಾರದ ವಜಾಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಕರ್ನಾಟಕ ಸರ್ಕಾರ ಅಧಿಕಾರದ ದುರುಪಯೋಗ ಪಡಿಸಿಕೊಂಡು ಅಕ್ರಮಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದರು. ಇದು ಗದ್ದಲಕ್ಕೆ ಕಾರಣವಾದಾಗ ಸದನ ಮಧ್ಯಾಹ್ನಕ್ಕೆ ಮುಂದೂಡಿಕೆಯಾಯ್ತು.

ನಂತರ ಸೋಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ ಹಾಗೂ ನಾಗರಿಕ ಪರಮಾಣು ಹೊಣೆಗಾರಿಕೆ ಒಪ್ಪಂದದ ವಿಚಾರಗಳೂ ಗದ್ದಲದ ಕೇಂದ್ರಬಿಂದುವಾದವು. ಆರ್.ಜೆ.ಡಿ. ಎಲ್.ಜೆ.ಪಿ. ಎಡಪಕ್ಷಗಳೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು. ಸದನ ನಾಳೆಗೆ ಮುಂದೂಡಿಕೆಯಾಯ್ತು.

ನಾಳೆಯೂ ಸದನದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತೆ ಮಾರ್ದನಿಸುವ ಸಾಧ್ಯತೆಗಳಿವೆ.

 ಮುಖಪುಟ /ಸುದ್ದಿ ಸಮಾಚಾರ