ಮುಖಪುಟ /ಸುದ್ದಿ ಸಮಾಚಾರ   

ಗೋಹತ್ಯೆ ನಿಷೇಧ ಮಸೂದೆ :ನಾಳೆ
ರಾಷ್ಟ್ರಪತಿ ಬಳಿಗೆ ನಿಯೋಗ - ಸಿಎಂ

ಬೆಂಗಳೂರು, ಆಗಸ್ಟ್ ೮ : ವಿಧಾನಮಂಡಳದ ಉಭಯ ಸದನಗಳ ಅನುಮೋದನೆ ಪಡೆದಿರುವ ಗೋಹತ್ಯೆ ನಿಷೇಧ ಕಾಯಿದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ನಾಳೆ ರಾಷ್ಟ್ರಪತಿಗಳ ಬಳಿಗೆ ನಿಯೋಗ ತೆರಳಿ, ಮಸೂದೆಗೆ ಅಂಗೀಕಾರ ನೀಡುವಂತೆ ಕೋರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಎಕ್ಸೆಲ್ ಕೇರ್ ಹೈಟೆಕ್ ಆಸ್ಪತ್ರೆ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ, ಈ ಹಿನ್ನೆಲೆಯಲ್ಲಿ ರಾಜ್ಯದ ಸಂಸತ್ ಸದಸ್ಯರು ಹಾಗೂ ಸಂಪುಟ ಸಹೋದ್ಯೋಗಿಗಳ ಜೊತೆ ಇಂದು ದೆಹಲಿಗೆ ತೆರಳಿ, ನಾಳೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಮಸೂದೆಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಾಗುವುದು ಎಂದರು.

ತಲೆ ಕೆಡಿಸಿಕೊಳ್ಳುವುದಿಲ್ಲ

ರಾಜ್ಯದ ಜನತೆ ಗಣಿಗಾರಿಕೆ ಪ್ರಸ್ತಾಪ, ಪಾದಯಾತ್ರೆ, ಸಮಾವೇಶಗಳಿಂದ ರೋಸಿ ಹೋಗಿದ್ದಾರೆ, ಹೀಗಾಗಿ ತಾವು ಇನ್ನು ಮುಂದೆ ಪಾದಯಾತ್ರೆಗಳ ಬಗ್ಗೆಯೂ ಮಾತನಾಡುವುದಿಲ್ಲ, ಗಣಿಗಾರಿಕೆಯ ಬಗ್ಗೆಯೂ ಮಾತನಾಡುವುದಿಲ್ಲ. ಈ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಮಾತ್ರವೇ ಚಿಂತಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಹಿಂದುಳಿದವರು, ಶೋಷಿತರ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿದೆ. ಅನುಷ್ಠಾನಕ್ಕೆ ತಂದಿದೆ. ಆದರೆ, ಕೆಲವು ಮಾಧ್ಯಮಗಳು ಈ ವಿಚಾರಗಳನ್ನು ಬಿಟ್ಟು, ಸಣ್ಣ ಪುಟ್ಟ ವಿಚಾರಗಳನ್ನು ಬಿಕ್ಕಟ್ಟಿನ ರೀತಿಯಲ್ಲಿ ಬಿಂಬಿಸುತ್ತಿವೆ ಎಂದರು.

ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಯಿಂದ ರಾಜ್ಯದ ಸ್ವರೂಪವನ್ನೇ ಬದಲಾಯಿಸಲು ಪಣತೊಟ್ಟಿರುವುದಾಗಿ ಹೇಳಿದ ಅವರು, ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಅದೇ ರೀತಿ ಎಲ್ಲ ನೆರೆ ಸಂತ್ರಸ್ತರಿಗೂ ಮನೆಗಳನ್ನು ಒದಗಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಲಾಗುವುದು ಉಳಿದ ವಿಚಾರಗಳೆಲ್ಲ ಗೌಣ ಎಂದರು.

ಉತ್ತಮ ಆರೋಗ್ಯಸೇವೆ ನೀಡಲು ಕರೆ

ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರಾಜ್ಯದ ಎಲ್ಲ ಜನತೆಗೂ ಉತ್ತಮ ಆರೋಗ್ಯ ಸೇವೆಗಳು ದೊರಕಬೇಕು. ಈ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ರಾಜ್ಯದೆಲ್ಲೆಡೆ ಹೈಟೆಕ್ ಆಸ್ಪತ್ರೆ ತೆರೆಯಲು ಮುಂದಾಗಬೇಕು ಎಂದರು.

ಉತ್ತಮ ಗುಣಮಟ್ಟದ ಆಸ್ಪತ್ರೆಗಳ ಸೌಲಭ್ಯ ಕೇವಲ ಶ್ರೀಮಂತರ ಸ್ವತ್ತಾಗಬಾರದು. ಶ್ರೀಸಾಮಾನ್ಯನಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಚಿಂತಿಸಬೇಕು ಎಂದು ಕರೆ ನೀಡಿದರು.

 ಮುಖಪುಟ /ಸುದ್ದಿ ಸಮಾಚಾರ