ಮುಖಪುಟ /ಸುದ್ದಿ ಸಮಾಚಾರ   

ರಾಜ್ಯದ ೨೬ನೇ ಮುಖ್ಯ ನ್ಯಾಯಾಧೀಶರಾಗಿ
ಜಗದೀಶ್ ಸಿಂಗ್ ಖೇಹರ್ ಪ್ರಮಾಣ ವಚನ

ಜಗದೀಶ್ ಸಿಂಗ್ ಖೇಹರ್, ಮುಖ್ಯ ನ್ಯಾಯಮೂರ್ತಿಗಳು, Karnataka High court Chief Justice, Jagadesh singh keharಬೆಂಗಳೂರು, ಆಗಸ್ಟ್ ೮ : ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ೨೬ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಇಂದು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೂತನ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಸೇರಿದಂತೆ ಹಲವು ಸಚಿವರು, ಹೈಕೋರ್ಟ್ ನ್ಯಾಯಮೂರ್ತಿಗಳು, ಹಿರಿಯ ನ್ಯಾಯವಾದಿಗಳು ಪಾಲ್ಗೊಂಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಇಂದು ಖೇಹರ್‌ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಖೇಹರ್ ಅವರು ತಮ್ಮ ಅಮೂಲ್ಯವಾದ ಅನುಭವ ಹಾಗೂ ಪರಿಣತಿಯನ್ನು ನ್ಯಾಯಾಂಗ ವ್ಯವಸ್ಥೆಗೆ ಒದಗಿಸಿಕೊಡಲಿದ್ದಾರೆ ಎಂದರು. ನ್ಯಾಯಾಂಗ ವ್ಯವಸ್ಥೆಯ ಉನ್ನತೀಕರಣಕ್ಕೆ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದರು.

೧೯೫೨ರ ಆಗಸ್ಟ್ ೨೨ರಂದು ಜನಿಸಿದ ಜಗದೀಶ್ ಸಿಂಗ್ ಖೇಹರ್ ಅವರು ೧೯೭೭ರಲ್ಲಿ ಕಾನೂನು ಪದವಿ ಪಡೆದು, ನಂತರ ಎಲ್.ಎಲ್.ಎಂ. ಪೂರೈಸಿ ೧೯೭೯ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ೧೯೯೨ರಲ್ಲಿ ಪಂಜಾಬ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ ಅವರು, ಪಂಜಾಬ್, ಹರಿಯಾಣದ ನ್ಯಾಯಾಧೀಶರಾಗಿಯೂ ದುಡಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನಿಯುಕ್ತರಾಗುವ ಮುನ್ನ ಅವರು ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಈವರೆಗೆ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿದ್ದ ಪಿ.ಡಿ. ದಿನಕರನ್ ಅವರನ್ನು ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಸೋಮವಾರ ಜೆ.ಎಸ್. ಖೇಹರ್ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ಪದಗ್ರಹಣ ಮಾಡಲಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ