ಮುಖಪುಟ /ಸುದ್ದಿ ಸಮಾಚಾರ   

ಮೂರು ವರ್ಷ ಪೂರೈಸುತ್ತೇವೆ - ಸಿ.ಎಂ.

Yadiyurappa, C.M.ಮೈಸೂರು, ಆ ೧ - ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆ ಸಂಪೂರ್ಣ ಬಹುಮತ ನೀಡಿದ್ದಾರೆ. ೫ ವರ್ಷ ಆಡಳಿತ ನಡೆಸುವಂತೆ ಆದೇಶ ನೀಡಿದ್ದಾರೆ. ಯಾರು ಏನೇ ತಂತ್ರ ಮಾಡಿದರೂ ನಾವು ನಿರಾತಂಕವಾಗಿ ಉಳಿದ ಮೂರು ವರ್ಷ ಆಡಳಿತಾವಧಿಯನ್ನು ಪೂರೈಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿಂದು ನಾಡ ದೇವಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾದೇಶಕ್ಕೆ ತಾವು ಬೆಲೆ ನೀಡುತ್ತೇವೆ. ಸರ್ಕಾರದ ಸಾಧನೆ ಸಹಿಸಲಾರದೆ  ಕಾಂಗ್ರೆಸ್ ಪಕ್ಷದವರು ಅನಗತ್ಯವಾಗಿ ಜನರಲ್ಲಿ ಗೊಂದಲ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ಸೇತರ ರಾಜ್ಯಗಳ ವಿರುದ್ಧ ಸಿ.ಬಿ.ಐ. ದುರ್ಬಳಕೆ ನಡೆಯುತ್ತಿದೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದರು.

ಜನತೆ ನಮಗೆ ೫ ವರ್ಷ ಆಡಳಿತ ನಡೆಸಲು ಜನಾದೇಶ ನೀಡಿದ್ದಾರೆ. ೫ ವರ್ಷ ಯಶಸ್ವಿಯಾಗಿ ಅಧಿಕಾರ ನಡೆಸಿ, ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಮತ್ತೆ ೫ ವರ್ಷ ರಾಜ್ಯದಲ್ಲಿ ಬಿಜೆಪಿಯನ್ನು ಆಡಳಿತಕ್ಕೆ ತರಲು ಪಕ್ಷವನ್ನು ಸಂಘಟಿಸುತ್ತೇನೆ ಎಂದರು.

ನಾಳೆ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಇದೆ. ಇದಕ್ಕೆ ಸಕಲ ಸಿದ್ಧತೆ ಸಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಸಾಧನೆಯನ್ನು ಜನರ ಮುಂದೆ ತೆರೆದಿಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ದೇಶದ ರಕ್ಷಣೆಗೆ ಮತ್ತು ಕಾಂಗ್ರೆಸ್ ಕುತಂತ್ರಕ್ಕೆ ಪ್ರತಿಯಾಗಿ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ ಎಂದು ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಜೆಡಿಎಸ್ ಜೊತೆ ಮತ್ತೆ ಮೈತ್ರಿ ಸರ್ಕಾರ ರಚಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಯಾವ ಉದ್ದೇಶದಿಂದ ಹಾಗೂ ಯಾವ ಸಂದರ್ಭದಲ್ಲಿ ಈಶ್ವರಪ್ಪ ಮೈತ್ರಿ ಬಗ್ಗೆ ಮಾತನಾಡಿದ್ದಾರೋ ಗೊತ್ತಿಲ್ಲ. ಅವರೊಂದಿಗೆ ಸಮಾಲೋಚಿಸಿದ ಬಳಿಕ ಈ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಜಾರಿಗೊಂಡರು.

ಪಕ್ಷಕ್ಕೆ ಸಂಪೂರ್ಣ ಬಹುಮತವಿದೆ. ನಮಗೆ ಯಾರ ಬೆಂಬಲದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗುತ್ತಿವೆ. ಪ್ರಕೃತಿ ದೇವಿ ಹಾಗೂ ದೇವರ ಕೃಪೆ ನಮ್ಮಮೇಲಿದೆ. ನಾವು ಸುಗಮವಾಗಿ ಸರ್ಕಾರ ನಡೆಸುತ್ತೇವೆ. ನಾವೆಲ್ಲ ಒಂದಾಗಿದ್ದೇವೆ. ರಾಜ್ಯ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ ಎಂದರು.

 ಮುಖಪುಟ /ಸುದ್ದಿ ಸಮಾಚಾರ