ಮುಖಪುಟ /ಸುದ್ದಿ ಸಮಾಚಾರ   

ರೆಡ್ಡಿ ಸವಾಲಿಗೆ ಸಿದ್ದರಾಮಯ್ಯ ಪ್ರತಿ ಸವಾಲು

ತುಮಕೂರು, ಆ ೧ -  ಕೆ.ಎಂ.ಎಫ್. ಅಧ್ಯಕ್ಷ, ಶಾಸಕ ಸೋಮಶೇಖರ ರೆಡ್ಡಿ ಅವರ ರಾಜೀನಾಮೆ ಕೊಡಿಸುತ್ತೇವೆ. ತಾಕತ್ತಿದ್ದರೆ ಬಂದು ಬಳ್ಳಾರಿಯಲ್ಲಿ ಚುನಾವಣೆಗೆ ನಿಂತು ಗೆಲ್ಲಿ ಎಂದು ಸವಾಲು ಹಾಕಿರುವ ಜನಾರ್ದನರೆಡ್ಡಿ ಅವರ ಸವಾಲು ಸ್ವೀಕರಿಸಿರುವುದಾಗಿ ಹೇಳಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಲಿ ನಾನು ೨೨೪ ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ ಎಂದು ಪ್ರತಿ ಸವಾಲು ಹಾಕಿದ್ದಾರೆ.

ನಾಡಿನ ರಕ್ಷಣೆಗೆ ನಡಿಗೆ ಬಳ್ಳಾರಿವರೆಗಿನ ಪಾದಯಾತ್ರೆಯ ವೇಳೆ ಹಿರಿಯೂರು ಮಾರ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲು ಸಿದ್ಧವಿದ್ದರೆ, ತಾವೂ ಸಿದ್ದ ಎಂದು ಹೇಳಿದರು.

ಇಂದು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಬಳ್ಳಾರಿವರೆಗೆ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ, ಕೇವಲ ಅಕ್ರಮ ಗಣಿಗಾರಿಕೆಯ ವಿರುದ್ಧ ಮಾತ್ರವೇ ಅಲ್ಲ, ರಾಜ್ಯ ಬಿಜೆಪಿ ಸರ್ಕಾರ ಎಲ್ಲ ರಂಗದಲ್ಲೂ ಸೋತಿದೆ. ಕೊಲೆ ಸುಲಿಗೆ ಹಾಡು ಹಗಲೇ ನಡೆಯುತ್ತಿದೆ. ಭ್ರಷ್ಟಾಚಾರವಂತೂ ತಾಂಡವವಾಡುತ್ತಿದೆ. ಈ ನಿಟ್ಟಿನಲ್ಲಿ ಜನತೆಗೆ ವಾಸ್ತವ ಅಂಶ ತಿಳಿಯಪಡಿಸಲು ಈ ಪಾದಯಾತ್ರೆ ಸಹಕಾರಿ ಎಂದು ಬಣ್ಣಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸದಾ ಸಿದ್ಧವಿದೆ. ಯಾರೋ ಚುನಾವಣೆಗೆ ಸವಾಲು ಎಸೆದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಈ ಸವಾಲು ಹಾಕಲಿ ನಿಂತ ಕಾಲಲ್ಲಿ ಚುನಾವಣೆ ಎದುರಿಸಲು ನಾವು ಸಿದ್ಧ ಎಂದರು.

ಮೊದಲಿಗೆ ನಮ್ಮ ಪಾದಯಾತ್ರೆಗೆ ಪ್ರತಿಯಾಗಿ ಮೈಸೂರುವರೆಗೆ ಪಾದಯಾತ್ರೆ ನಡೆಸುವುದಾಗಿ ರೆಡ್ಡಿ ಸೋದರರು ಹೇಳಿದರು. ಅದಕ್ಕೆ ಅವರ ಪಕ್ಷವೇ ಅನುಮತಿ ನೀಡಲಿಲ್ಲ. ಅವರಿಗೆ ಅವರ ಮಾತಿಗೆ ಪಕ್ಷದಲ್ಲೇ ಬೆಲೆ ಇಲ್ಲದಿರುವಾಗ ನಾವೇಕೆ ಬೆಲೆ ಕೊಡಬೇಕು ಎಂದು ಪ್ರಶ್ನಿಸಿದರು.

ಕೆ.ಪಿ.ಸಿ.ಸಿ. ಅಧ್ಯಕ್ಷ ಆರ್.ವಿ. ದೇಶಪಾಂಡೆ ರಾಜ್ಯದಲ್ಲಿ ಅದಿರು ರಫ್ತು, ಸಾಗಣೆ ನಿಷೇಧಿಸಿದ್ದರೂ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿದೆ ಎಂದರು. ತಮ್ಮ ಪಾದಯಾತ್ರೆ ಗುರಿ ಮುಟ್ಟುತ್ತದೆ. ಜನತೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಮತ್ತಿತರ ಗಣ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ