ಮುಖಪುಟ /ಸುದ್ದಿ ಸಮಾಚಾರ   
 

ಸೆ.1ರಂದು ourtemples.in ಉದ್ಘಾಟನೆ
ಅಂತರ್ಜಾಲದ ಸುದ್ದಿವಾಹಿನಿ ಕನ್ನಡರತ್ನ.ಕಾಂ ರಾಜ್ಯದ ಎಲ್ಲ ಹಾಗೂ ದೇಶದ ಪ್ರಮುಖ ದೇವಾಲಯಗಳ  ಸಚಿತ್ರ ಮಾಹಿತಿ ನೀಡುವ www.ourtemples.inವೆಬ್ ಸೈಟ್ ಅನ್ನು ನಿರ್ಮಿಸುತ್ತಿದೆ, ಈ ವೆಬ್ ಸೈಟ್ ನಲ್ಲಿ  ತಮ್ಮ ಊರಿನ  ದೇವಾಲಯಗಳ ಸಚಿತ್ರ ಮಾಹಿತಿ ಸೇರಿಸಬಯಸುವವರು ಹೆಚ್ಚಿನ ಮಾಹಿತಿಗೆ 9845989533 ಅಥವಾ 9449510235 ದೂರವಾಣಿ ಸಂಪರ್ಕಿಸಬಹುದು.

ಬೆಂಗಳೂರು, ಆಗಸ್ಟ್  27: ಕರುನಾಡು ಮತ್ತು ಹೊರನಾಡ ಕನ್ನಡಿಗರ ನಡುವೆ ಸ್ನೇಹ ಸೇತುವಾಗಿ, ಕಳೆದ 7 ವರ್ಷಗಳಿಂದಲೂ ಅಂತರ್ಜಾಲ ವಿಶ್ವದಲ್ಲಿ ಕನ್ನಡ ಸೇವೆ ಮಾಡುತ್ತಿರುವ ಕನ್ನಡರತ್ನ.ಕಾಂ ಇದೀಗ ನಮ್ಮ ದೇವಾಲಯಗಳ ಬಗ್ಗೆ  ಸಚಿತ್ರ ಮಾಹಿತಿ ನೀಡುವ www.ourtemples.in ಎಂಬ ವೆಬ್ ಸೈಟ್ ನಿರ್ಮಾಣಕ್ಕೆ ಕೈಹಾಕಿದೆ. ಈ ವೆಬ್ ಸೈಟ್ ಅನ್ನು ದಿನಾಂಕ 1-09-2009ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಾಜ್ಯ ಜವಳಿ, ಯುವಜನಸೇವೆ ಹಾಗೂ ಕ್ರೀಡಾ ಸಚಿವ ಶ್ರೀ ಗೂಳಿಹಟ್ಟಿ ಡಿ. ಶೇಖರ್ ಉದ್ಘಾಟಿಸಲಿದ್ದಾರೆ.

ಕರ್ನಾಟಕದ ಕಲಾಶ್ರೀಮಂತಿಕೆ, ಸ್ಥಳಪುರಾಣ, ಐತಿಹ್ಯ, ಇತಿಹಾಸ ಹಾಗೂ ದೇವಾಲಯಗಳ ಮಾಹಿತಿಯನ್ನು ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರೆ ತಲುಪಿಸುವುದು ಕನ್ನಡರತ್ನ.ಕಾಂ ಉದ್ದೇಶವಾಗಿದೆ. ಈ ಅಂತರ್ಜಾಲ ತಾಣದಲ್ಲಿ ದೇವಾಲಯಗಳ ಸಚಿತ್ರ ಮಾಹಿತಿಯನ್ನು ಲೇಖನ ರೂಪದಲ್ಲಿ ಪ್ರಕಟಿಸಲಾಗುತ್ತಿದೆ.

www.ourtemples.inನಲ್ಲಿ ಜನಪ್ರಿಯ ದೇವಾಲಯಗಳ ಮಾಹಿತಿಯ ಜೊತೆಗೆ ಸ್ಥಳೀಯರಿಗಷ್ಟೇ ಪರಿಚಿತವಿದ್ದು ಎಲೆಮರೆಯ ಕಾಯಿಯಂತಿರುವ ದೇವಾಲಯಗಳ ಮಾಹಿತಿಯನ್ನೂ ನೀಡುತ್ತಿದೆ. ಗೋಕರ್ಣ, ಅರಳುಗುಪ್ಪೆ,  ಧರ್ಮಸ್ಥಳ, ನಂಜನಗೂಡು,  ಚಾಮರಾಜನಗರ, ಮುರುಡೇಶ್ವರ,  ಬೇಲೂರು, ಹಳೆಬೀಡು, ತುರುವೇಕೆರೆ, ವಿಘ್ನಸಂತೆ, ಕುಕ್ಕೆ, ಘಾಟಿ, ಬೆಂಗಳೂರು ದೊಡ್ಡಗಣಪ, ಧರ್ಮರಾಯಸ್ವಾಮಿ, ಗವಿಗಂಗಾಧರೇಶ್ವರ, ಕೊಲ್ಲೂರು ಮೂಕಾಂಬಿಕೆ, ಉಡುಪಿ, ಹೊರನಾಡು, ತಿರಮಕೂಡಲು ನರಸೀಪುರ, ಕೂಡಲಸಂಗಮ,  ಇಕ್ಕೇರಿ, ಸುತ್ತೂರು, ಎಡತೊರೆ, ಮಲೆ ಮಹದೇಶ್ವರಬೆಟ್ಟ ಸೇರಿದಂತೆ  150ಕ್ಕೂ ಹೆಚ್ಚು ದೇವಾಲಯಗಳ ಸಚಿತ್ರ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ಈಗಾಗಲೇ ಅಳವಡಿಸಲಾಗಿದೆ.

ಈ ತಾಣ ದೇವಾಲಯಗಳ ಮಾಹಿತಿಯ ಜೊತೆಗೆ ದ್ವಾದಶ ಜ್ಯೋತಿರ್ಲಿಂಗಗಳು, ದಶಾವತಾರ, ನಮ್ಮ ಹಬ್ಬಗಳು, ಅವುಗಳನ್ನು ಆಚರಿಸುವ ಬಗೆ ಇತ್ಯಾದಿ ಮಹತ್ವದ ಮಾಹಿತಿಗಳನ್ನೂ ಒಳಗೊಂಡಿದೆ.

ourtemples.in ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದ 1,500 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಸೌಲಭ್ಯ ನೀಡುತ್ತಿರುವ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಕರುನಾಡಿನ ಇತಿಹಾಸ ಹಾಗೂ ಸ್ಥಳಪುರಾಣ, ಐತಿಹ್ಯ, ಕರುನಾಡನ್ನಾಳಿದ ರಾಜ ವಂಶಗಳು, ಪ್ರವಾಸಿ ತಾಣಗಳು, ನಮ್ಮ ಕಲೆ, ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿಯಲು ಅನುವಾಗುವಂತೆ ಕನ್ನಡದಲ್ಲಿ ಈ ವೆಬ್ ಸೈಟ್ ನಿರ್ಮಿಸಲಾಗುತ್ತಿದೆ ಎಂದು ಕನ್ನಡರತ್ನ.ಕಾಂ ಸ್ಥಾಪಕ ಸಂಪಾದಕಿ ಶೋಭಾ.ಎನ್. ತಿಳಿಸಿದ್ದಾರೆ.

ಮುದ್ರಣ ಮತ್ತು ವಿದ್ಯುನ್ಮಾನ ಪತ್ರಿಕೋದ್ಯಮದಲ್ಲಿ 20 ವರ್ಷಗಳ ಅನುಭವ ಹೊಂದಿರುವ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ  ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಟಿ.ಎಂ. ಸತೀಶ್ ಸಂಪಾದಕತ್ವದಲ್ಲಿ ಈ ಅಂತರ್ಜಾಲ ತಾಣ ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ 34ಸಾವಿರ ದೇವಾಲಯಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡದ ಲಕ್ಷಾಂತರ ಚಿಕ್ಕ ದೊಡ್ಡ ದೇವಾಲಯಗಳಿದ್ದು ಈ ಎಲ್ಲ ಮಾಹಿತಿಯನ್ನು ಅಳವಡಿಸಲು ಕನಿಷ್ಠ 10 ವರ್ಷಗಳಾದರೂ ಬೇಕಾದೀತು ಎಂದು ಅವರು ಹೇಳುತ್ತಾರೆ.

ವಿಷಾದ : ರಾಜ್ಯ ಮುಜರಾಯಿ ಇಲಾಖೆ  ದೇವಾಲಯಗಳ ಮಾಹಿತಿಯನ್ನು ಕೇವಲ ಇಂಗ್ಲಿಷ್ ನಲ್ಲಿ ವೆಬ್ ಸೈಟ್ ಗೆ ಅಳವಡಿಸಲು ದೇವಾಲಯವೊಂದಕ್ಕೆ 37ಸಾವಿರ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡುತ್ತಿದೆ. ಕೇವಲ 75 ದೇವಾಲಯಗಳ ಮಾಹಿತಿಯ ವೆಬ್ ಸೈಟ್ ನಿರ್ಮಾಣಕ್ಕೆ 28 ಲಕ್ಷ ರೂಪಾಯಿಗೂ ಹೆಚ್ಚು ಹಣ ವೆಚ್ಚಮಾಡಿದೆ.  ಆದರೆ, ದೇವಾಲಯಗಳ ಮಾಹಿತಿಯನ್ನು ಕನ್ನಡದಲ್ಲಿ ಅಳವಡಿಸಲು ದೇವಾಲಯವೊಂದಕ್ಕೆ ಕೇವಲ 500 ರೂಪಾಯಿ (ಐನೂರು ರೂಪಾಯಿ) ಪ್ರೋತ್ಸಾಹ ಧನ ಕೇಳಿದ ಕನ್ನಡರತ್ನ.ಕಾಂಗೆ ಕನ್ನಡದ ಅವಶ್ಯಕತೆ ಬಿದ್ದಾಗ ಸಂಪರ್ಕಿಸಲಾಗುವುದು ಎಂದು ತಿಳಿಸಿದೆ ಕನ್ನಡ ಅನುಷ್ಠಾನ ವರ್ಷದಲ್ಲಿ ಕನ್ನಡ ವೆಬ್ ಸೈಟ್ ಅಗತ್ಯ ಇಲ್ಲವೇ ಎಂದು ಸಂಪಾದಕ ಟಿ.ಎಂ.ಸತೀಶ್ ಪ್ರಶ್ನಿಸುತ್ತಾರೆ.

ಮುಜರಾಯಿ ಇಲಾಖೆಯ  ಸಹಾಯವಿಲ್ಲದೆಯೇ ಸ್ವಂತ ಖರ್ಚಿನಲ್ಲಿ ಸಾಧ್ಯವಾದಷ್ಟು ದೇವಾಲಯಗಳ ಮಾಹಿತಿ ನೀಡಲು ಕನ್ನಡರತ್ನ ಮುಂದಾಗಿದೆ ಎಂದೂ ಅವರು ಹೇಳುತ್ತಾರೆ. ತಮ್ಮ ಈ ಮಹತ್ಕಾರ್ಯಕ್ಕೆ ಬೆಂಬಲ ನೀಡಲಿಚ್ಛಿಸುವವರು ಯಾವುದೇ ದೇವಾಲಯ ಪುಟದ ಪ್ರಾಯೋಜಕರಲ್ಲಿ ಒಬ್ಬರಾಗಬಹುದು. ಅವರ ಜಾಹೀರಾತನ್ನು ನಿರ್ದಿಷ್ಟ ಪುಟದಲ್ಲಿ ಪ್ರಕಟಿಸಲಾಗುವುದು. ಈ ಸತ್ಕಾರ್ಯಕ್ಕೆ ಸಹಾಯ ಮಾಡಲು ಸಾರ್ವಜನಿಕರನ್ನು, ಸಂಘ ಸಂಸ್ಥೆ, ಉದ್ದಿಮೆಗಳನ್ನು ಕೋರಲಾಗುವುದು ಎಂದು ತಿಳಿಸಿದ್ದಾರೆ.

ಈ ವೆಬ್ ಸೈಟ್ ನಲ್ಲಿ  ಯಾವುದೇ ದೇವಾಲಯಗಳ ಸಚಿತ್ರ ಮಾಹಿತಿ ಸೇರಿಸಬಯಸುವವರು ಹೆಚ್ಚಿನ ಮಾಹಿತಿಗೆ 9845989533 ಅಥವಾ 9449510235 ದೂರವಾಣಿ ಸಂಪರ್ಕಿಸಬಹುದು, ದಾನಿಗಳು, ಭಕ್ತರು, ದೇವಾಲಯ ಆಡಳಿತ ಮಂಡಳಿ, ಮುಜರಾಯಿ ಅಭಿವೃದ್ಧಿ ಮಂಡಳಿ, ಸರ್ಕಾರ ಆರ್ಥಿಕ ಸಹಾಯ ಮಾಡಿದರೆ, ತ್ವರಿತವಾಗಿ ಈ ಯೋಜನೆ ಪೂರ್ಣಗೊಳಿಸಲು ಸಾಧ್ಯ  ಎಂದು ಅವರು ತಿಳಿಸುತ್ತಾರೆ.

 ಮುಖಪುಟ /ಸುದ್ದಿ ಸಮಾಚಾರ