ಮುಖಪುಟ /ಸುದ್ದಿ ಸಮಾಚಾರ   
 

ಸಚಿವ ಸೋಮಣ್ಣ ವಿರುದ್ಧ ಪ್ರಿಯಕೃಷ್ಣ ಜಯಭೇರಿ
ರಾಮನಗರ, ಚನ್ನಪಟ್ಟಣ ಜೆಡಿಎಸ್.ಗೆ, ಚಿತ್ತಾಪುರ, ಕೊಳ್ಳೆಗಾಲ ಬಿಜೆಪಿ ಪಾಲು

ಪ್ರಿಯ ಕೃಷ್ಣ, Priya Krishnaಬೆಂಗಳೂರು, ಆ.21: ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಿಗೆ ಆಗಸ್ಟ್ 18ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆದು ಫಲಿತಾಂಶ ಹೊರಬಿದ್ದಿದ್ದು, ಭಾರತೀಯ ಜನತಾಪಕ್ಷ ಹಾಗೂ ಜೆಡಿಎಸ್ ತಲಾ 2 ಸ್ಥಾನಗಳಲ್ಲಿ ಜಯಸಾಧಿಸಿದ್ದರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಆಪರೇಷನ್ ಕಮಲದಿಂದ ತೆರವಾಗಿದ್ದ ಚನ್ನಪಟ್ಟಣ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಿ.ಪಿ. ಯೋಗೇಶ್ವರ್ ಹಾಗೂ ವಿ.ಸೋಮಣ್ಣ ಜಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ.

2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಯೋಗೇಶ್ವರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಈಗ ಮತ್ತೆ ಉಪ ಚುನಾವಣೆಯಲ್ಲೂ ಸೋಲುಂಡಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ನ ಎಂ.ಸಿ. ಅಶ್ವತ್ಥ್ 2 ಸಾವಿರಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸಿ, ಯೋಗೀಶ್ವರ್ ಗೆ ಸೋಲುಣಿಸಿದ್ದಾರೆ.

ಗೋವಿಂದರಾಜನಗರ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದ, ವಿ. ಸೋಮಣ್ಣ, ರಾಜೀನಾಮೆ ನೀಡಿ ಬಿಜೆಪಿ ಸೇರಿ ಸಚಿವರಾದ ಬಳಿಕ ನಡೆದ ಈ ಚುನಾವಣೆಯಲ್ಲಿ ಮತ್ತೆ ತಮ್ಮ ಛಾಪು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.

ವಿಜಯನಗರ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಪುತ್ರ ಪ್ರಿಯ ಕೃಷ್ಣ ವಸತಿ ಹಾಗೂ ಮುಜರಾಯಿ ಸಚಿವ ಸೋಮಣ್ಣ ಅವರನ್ನು 5,200ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ.  ಇದರಿಂದ ಆಡಳಿತಾರೂಢ ಬಿಜೆಪಿಗೆ ಭಾರೀ ಹಿನ್ನೆಡೆ ಅನುಭವಿಸಿದೆ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ರಾಮನಗರ ಕ್ಷೇತ್ರದಲ್ಲಿ  ಮಾಜಿ ಸಚಿವ ಕಾಂಗ್ರೆಸ್ ನ ಸಿ.ಎಂ. ಲಿಂಗಪ್ಪ ಅವರನ್ನು ಸೋಲಿಸಿರುವ ಜೆಡಿಎಸ್ ನ ಕೆ.ರಾಜು 22ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಸಾಧಿಸಿದ್ದಾರೆ.

ಕೊಳ್ಳೆಗಾಲದಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಖಾತೆ ತೆರೆದಿದೆ. ಕಾಂಗ್ರೆಸ್ ಶಾಸಕ ಧ್ರುವನಾರಾಯಣ್  ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎನ್. ನಂಜುಂಡಸ್ವಾಮಿ ಗೆಲವು ಪಡೆದಿದ್ದಾರೆ. ಕಾಂಗ್ರೆಸ್ ನ ಜಯಣ್ಣ ಸೋಲುಂಡಿದ್ದಾರೆ.

ಇನ್ನು ಮಲ್ಲಿಕಾರ್ಜುನ ಖರ್ಗೆ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು 1600ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ವಾಲ್ಮೀಕಿ ನಾಯಕ್ ಜಯಸಾಧಿಸಿದ್ದಾರೆ. 

 ಮುಖಪುಟ /ಸುದ್ದಿ ಸಮಾಚಾರ