ಮುಖಪುಟ /ಸುದ್ದಿ ಸಮಾಚಾರ   
 

ಬೆಂಗಳೂರಿನಲ್ಲಿ ಹಂದಿಜ್ವರಕ್ಕೆ ಶಾಲಾ ಶಿಕ್ಷಕಿ ಸಾವು
26 ವರ್ಷದ ಶ್ರೀಮತಿ ರೂಪಾ ಅವರನ್ನು ಬಲಿತೆಗೆದುಕೊಂಡ ಮಾರಣಾಂತಿಕ ಎಚ್1ಎನ್1

ಹಂದಿಜ್ವರಕ್ಕೆ ಬಲಿಯಾದ ಶಿಕ್ಷಕಿ ರೂಪಾ. Teacher Rupa Succumbed to Swine fluಬೆಂಗಳೂರು, ಆ.13: ದೇಶಾದ್ಯಂತ ಹಬ್ಬುತ್ತಿರುವ ಮಾರಕ ರೋಗ ಹಂದಿಜ್ವರ ರಾಜ್ಯದಲ್ಲೂ ತಲ್ಲಣ ಉಂಟು ಮಾಡಿದೆ. ಬೆಂಗಳೂರಿನ  ಬಿ.ಟಿ.ಎಂ. ಬಡಾವಣೆ ನಿವಾಸಿ ಶ್ರೀಮತಿ ರೂಪಾ ಹಂದಿಜ್ವರಕ್ಕೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಅವರನ್ನು 7ನೇ ತಾರೀಖು ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಿಮೋನಿಯಾ ಆಗಿರಬಹುದೆಂದು ಅವರಿಗೆ ಚಿಕಿತ್ಸೆ ನೀಡಲಾಗಿತ್ತು. 9ರಂದು ಅವರಿಗೆ ತೀವ್ರ ಉಸಿರಾಟದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ವೆಂಟಿಲೇಟರ್ ಸಹ ಅಳವಡಿಸಲಾಗಿತ್ತು. ಅವರ ರಕ್ತವನ್ನು ಪರೀಕ್ಷೆಗಾಗಿ ರಾಜೀವಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅವರಿಗೆ ಎಚ್.1.ಎನ್.1 ಸೋಂಕು ನಿವಾರಣೆ ಟಾಮಿ ಫ್ಲೂ ಔಷಧ ನೀಡಲಾಗಿತ್ತಾದರೂ ನಿನ್ನೆ ಮಧ್ಯಾಹ್ನ ಅವರು ನಿಧನ ಹೊಂದಿದರು ಎಂದು ಸೇಂಟ್ ಫಿಲೋಮಿನಾ ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

ಸುದರ್ಶನ ವಿದ್ಯಾಮಂದಿರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ರೂಪ ಅವರು ಹಂದಿ ಜ್ವರದಿಂದಲೇ ಸಾವನ್ನಪ್ಪಿರುವುದಾಗಿ ಅವರು ಹೇಳಿದ್ದಾರೆ. 

ಈ ವರೆಗೆ ರಾಜ್ಯದಲ್ಲಿ 115 ಎಚ್.1.ಎನ್1 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ.  ಈ ಮಧ್ಯೆ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವ ನೂರಾರು ರೋಗಿಗಳು ಹಂದಿಜ್ವರದ ಭೀತಿಯಿಂದ ಬೆಂಗಳೂರಿನ ರಾಜೀವಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ತಪಾಸಣೆಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಬೆಂಗಳೂರಿನ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

 ಮುಖಪುಟ /ಸುದ್ದಿ ಸಮಾಚಾರ